ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಹ್ಯಾರೀಸ್
ಬೆಂಗಳೂರು, ಮಾ.1 : ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಮತ್ತೊಮ್ಮೆ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದ್ದಾರೆ ಎಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಆರೋಪಿಸಿದ್ದಾರೆ. ತಮ್ಮ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಅವರು ನಾಲ್ವರು ಅಲ್ಪ ಸಂಖ್ಯಾತರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಹ್ಯಾರೀಸ್ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಅಲ್ಪಸಂಖ್ಯಾತ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮ್ಮಖದಲ್ಲಿ ಹ್ಯಾರೀಸ್ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಅವರು 1 ಲಕ್ಷ 30ಸಾವಿರ ಕೋಟಿ ರುಪಾಯಿ ಬಜೆಟ್ ಮಂಡಿಸಿದ್ದಾರೆ. ಆ ಬಜೆಟ್‌ನಲ್ಲಿ ಶೇ.1ರಷ್ಟ ಹಣವನ್ನು ಸಹ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿಲ್ಲ ಎಂದು ಹ್ಯಾರೀಸ್ ದೂರಿದರು.

ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ನಾಲ್ಕು ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಕೇವಲ ಮೂರು ಸ್ಥಾನ ಮಾತ್ರ ನೀಡಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಇನ್ನು ಒಂದು ಸ್ಥಾನ ನೀಡಬೇಕು ಎಂದು ಹೊಸ ಬೇಡಿಕೆಯನ್ನು ಮುಂದಿಟ್ಟರು.[ಸಿದ್ದು ಬಜೆಟ್ ಮುಖ್ಯಾಂಶಗಳು]
ಸಮಾವೇಶದಲ್ಲಿ ಹಾಜರಿದ್ದ ಮಾಜಿ ಕೇಂದ್ರ ಸಚಿವ ರೋಷನ್ ಬೇಗ್ ಸಹ ಸಿದ್ದರಾಮಯ್ಯ ಸಮಾವೇಶಕ್ಕೆ ಆಗಮಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಸಿಎಂ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಬೇಕಿತ್ತು. ಆದರೆ, ಅವರು ಬಾರದಿರುವುದು ಬಹಳ ಬೇಸರ ತಂದಿದೆ ಎಂದು ರೋಷನ್ ಬೇಗ್ ಹೇಳಿದರು. [ಹ್ಯಾರೀಸ್ ವಿರುದ್ಧ ಭೂ ಕಬಳಿಕೆ ಆರೋಪ]
ಖಾದರ್ ಎದಿರೇಟು : ಸಮಾವೇಶದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್, ಹ್ಯಾರೀಸ್ ಅವರಿಗೆ ವೇದಿಕೆಯಲ್ಲಿಯೇ ತಿರುಗೇಟು ನೀಡಿದರು. ಸಿಎಂ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ನಮ್ಮ ನಾಯಕರ ಮತ್ತು ಯೋಜನೆಗಳ ಬಗ್ಗೆ ಟೀಕೆ ಮಾಡುವವರು ದೊಡ್ಡ ನಾಯಕರಾಗುವುದಿಲ್ಲ ಎಂದು ತಿರುಗೇಟು ಕೊಟ್ಟರು.












Click it and Unblock the Notifications