ಶಾಸಕ ಸಿ.ಪಿ.ಯೋಗೇಶ್ವರ್ ಮೊದಲ ಪತ್ನಿ, ಪುತ್ರಿಯಿಂದ ಸುರ್ಜೇವಾಲಗೆ ದೂರು, ಕಾರಣವೇನು?
ಚನ್ನಪಟ್ಟಣ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಕೌಟುಂಬಿಕ ವಿಚಾರ ಇದೀಗ ಕಾಂಗ್ರೆಸ್ ಅಂಗಳಕ್ಕೆ ಬಂದು ನಿಂತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ತಂದೆ ಯೋಗೇಶ್ವರ್ ಅವರ ಪುತ್ರಿ ನಿಶಾ ಹಾಗೂ ಮೊದಲ ಪತ್ನಿ ದೂರು ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆಯಲು ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದು, ಕೆಪಿಸಿಸಿ ಕಚೇರಿಗೆ ಆಗಮಿಸಿ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕೆ, ಏನು ದೂರು? ಎಂಬ ಮಾಹಿತಿ ಇಲ್ಲಿದೆ.
'ಈ ವಿಚಾರಗಳು ಹೊಸದೇನಲ್ಲ, ಮೊದಲಿನಿಂದಲೂ ನಡೆಯುತ್ತಿರುವುದು. ನಮ್ಮ ಮೇಲೆ ಯೋಗೇಶ್ವರ್ ಅವರು ಹಲವು ಕೇಸ್‌ಗಳನ್ನು ಹಾಕಿದ್ದಾರೆ. ಏನು ಮಾತನಾಡಬೇಕು? ಏನು ಮಾತನಾಡಬಾರದು ಎಂದೂ ಕೇಸ್ ಹಾಕಿದ್ದಾರೆ. ಅಂತಹ ಇಕ್ಕಟ್ಟಿನ ಪರಿಸ್ಥಿತಿ ನಮಗೆ ತಂದಿಟ್ಟಿದ್ದಾರೆ. ಜೀನವದಲ್ಲಿ ನೆಮ್ಮದಿಯಾಗಿ ಇರಬೇಕು ಎಂದು ಅನಿಸುತ್ತೆ. ಆದರೆ ನಮ್ಮ ಬದುಕು ಕೋರ್ಟು ಕಚೇರಿ ಅಲೆಯುವುದೇ ಆಗಿದೆ' ಎಂದು ಪುತ್ರಿ ನಿಶಾ ಬೇಸರ ಹೊರಹಾಕಿದ್ದಾರೆ.

'ನಮ್ಮ ಮೇಲಿನ ಕೇಸ್‌ಗಳು ಇನ್ನೂ ನಡೆಯುತ್ತಿವೆ. ಎಲ್ಲೋ ಒಂದು ಕಡೆ ನ್ಯಾಯ ನಮ್ಮ ಕೈಹಿಡಿಯುತ್ತೆ ಎನ್ನುವ ಭರವಸೆ ಇದೆ ಎಂದಿದ್ದಾರೆ. ಇದಕ್ಕೆ ಇನ್ನಷ್ಟು ಸಮಯ ಹಿಡಿಯುತ್ತೆ. ಆದರೆ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ. ರಣದೀಪ್ ಅವರನ್ನು ಭೇಟಿ ಮಾಡಲು ಅಷ್ಟು ಸುಲಭವಾಗಿ ನಾವು ದೆಹಲಿಗೆಲ್ಲ ಹೋಗೋಕೆ ಆಗಲ್ಲ. ಹಾಗಾಗಿ ಅವರು ಬೆಂಗಳೂರಿಗೆ ಬಂದಿರುವ ವಿಚಾರ ತಿಳಿದು ಇಲ್ಲಿಗೆ ಬಂದೆವು. ಯೋಗೇಶ್ವರ್ ಅವರು ಸುರ್ಜೇವಾಲ ಅವರ ಪಕ್ಷದಲ್ಲೇ ಇರುವ ವ್ಯಕ್ತಿ ಆಗಿರುವುದರಿಂದ ಅವರ ವಿಚಾರಗಳನ್ನು ಕಿವಿಗೆ ಹಾಕುವುದು ಒಳ್ಳೆಯದು ಅನಿಸಿ ಹೇಳಿದ್ದೇವೆ' ಎಂದಿದ್ದಾರೆ.
'ಇದು ಯಾವುದೋ ಆಸ್ತಿ ವಿಚಾರದ ಜಗಳ ಅಲ್ಲ, ಇದು ಮನೆಯಿಂದಲೇ ಶುರುವಾದ ಒತ್ತಡದ ವಿಷಯ. ನನ್ನ ಮನೆ ಮೇಲೆ ಒಂದು ಕೇಸ್ ಹಾಕಿದ್ರು. ಈಗ ಇರೋದು ಮಾತ್ರ ಆಸ್ತಿ ವಿಷಯ. ಆದರೆ 40 ವರ್ಷದಿಂದ ಪ್ರಾಪರ್ಟಿ ವಿಚಾರಕ್ಕೆ ಸಮಸ್ಯೆ ಇರಲಿಲ್ಲ. ಹಾಗಾಗಿ ಒಬ್ಬ ಪವರ್‌ಫುಲ್ ವ್ಯಕ್ತಿಯ ಜೊತೆ ಹೋರಾಡುತ್ತಿದ್ದೇನೆ. ನಿಮ್ಮ ಕೈಯಲ್ಲಾದ್ರೆ ಸಹಾಯ ಮಾಡಿ, ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸುರ್ಜೇವಾಲ ಅವರಲ್ಲಿ ಮನವಿ ಮಾಡಿದ್ದೇವೆ' ಎಂದಿದ್ದಾರೆ.
ನನ್ನ ಮಕ್ಕಳು ಬೀದಿಯಲ್ಲಿದ್ದಾರೆ
ಯೋಗೇಶ್ವರ್ ಮೊದಲ ಪತ್ನಿ ಮಾತನಾಡಿ, ನನ್ನ ಮಕ್ಕಳು ಈಗ ಬೀದಿಯಲ್ಲಿದ್ದಾರೆ. 'ಮಕ್ಕಳು ಅವರ ತಂದೆ ಜೊತೆಯಲ್ಲೇ ಓಡಾಡಿಕೊಂಡು ಇದ್ದರು. ತಂದೆಯಾಗಿ ಇಂದು ಮಕ್ಕಳಿಗೆ ಕೊಡಬಾರದ ಕಷ್ಟಗಳನ್ನು ಕೊಡುತ್ತಿದ್ದಾರೆ. ಮನೆ ಒಳಗೆ ಇದ್ದ ಜಗಳವನ್ನ ಬೀದಿಗೆ ತಂದಿದ್ದಾರೆ. ಈಗ ನಾವು ದಿನ ಬೆಳಗಾದ್ರೆ ನಾನು ನನ್ನ ಮಕ್ಕಳು ಕೋರ್ಟು ಕಚೇರಿ ಅಲೆಯುತ್ತಿದ್ದೇವೆ. ನಮಗೆ ಅವರಂತೆ ರಾಜಕೀಯ ಬಲ, ಹಣ ಬಲ ಇಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ' ಎಂದು ಪತ್ನಿ ಆರೋಪಿಸಿದ್ದಾರೆ.












Click it and Unblock the Notifications