2.5 Lakhs Govt Job By Congress: ಒಂದೇ ವರ್ಷದಲ್ಲಿ 2.5 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ ಕಾಂಗ್ರೆಸ್
ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆ ಪ್ರಕಟಿಸಿರುವ ಕಾಂಗ್ರೆಸ್ ಯುವಕರಿಗೆ ಅಧಿಕಾರಕ್ಕೆ ಒಂದು ವರ್ಷದ ಒಳಗೆ 2.5 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದೆ.
ಹಲವು ವರ್ಷಗಳಿಂದ ಭರ್ತಿ ಮಾಡದೇ ಖಾಲಿ ಉಳಿದಿರುವ 1.5 ಲಕ್ಷ ಸರ್ಕಾರೀ ಹುದ್ದೆಗಳನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ. ಅಲ್ಲದೆ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ 'ಮಂಗಳಮುಖಿ ಮಂಡಳಿ' ಸ್ಥಾಪನೆ ಮಾಡುತ್ತೇವೆ. ವಾರ್ಷಿಕ 100 ಕೋಟಿ ಅನುದಾನ ಮೀಸಲಿಟ್ಟು, 3 ಲಕ್ಷದವರೆಗೆ ಸ್ವಉದ್ಯೋಗಕ್ಕೆ ಅನುದಾನ ನೀಡುತ್ತೇವೆ ಎಂದು ಹೇಳಿಕೊಂಡಿದೆ.

ಸ್ಕಾಲರ್ ಶಿಪ್ ಮೊತ್ತ ಏರಿಕೆ:
ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲಾ ವಿದ್ಯಾರ್ಥಿನೀಯರಿಗೆ ಉಚಿತ ಲ್ಯಾಪ್ಟಾಪ್/ ಡಿಜಿಟಲ್ ನೋಟ್ ಪ್ಯಾಡ್ ನೀಡುವುದು. ವಿಧ್ಯಾಸಿರಿ ಯೋಜನೆಯಲ್ಲಿ ಸ್ಕಾಲರ್ ಶಿಪ್ ಮೊತ್ತ 15,000ದಿಂದ 20,000ಕ್ಕೆ ಏರಿಕೆ ಮಾಡುವುದು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾ/ಪಂ ವಿದ್ಯಾರ್ಥಿನೀಯರಿಗೆ ಉಚಿತ ದ್ವಿಚಕ್ರ ವಾಹನ ನೀಡುವುದಾಗಿ ತಿಳಿಸಿದೆ.
ಪೊಲೀಸ್ ಸಿಬ್ಬಂದಿಗೆ ಮಾಸಿಕ 5000 ರೂ.
ಇದಲ್ಲದೆ ರಾಜ್ಯದ ಪೊಲೀಸರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಮಾಸಿಕ 5000 ರೂಪಾಯಿಯ ವಿಶೇಷ ಭತ್ಯೆ ನೀಡುತ್ತೇವೆ. ಎಲ್ಲಾ ಪೊಲೀಸರಿಗೆ ವಾರ್ಷಿಕವಾಗಿ ಒಂದು ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡುತ್ತೇವೆ. ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮ ವಹಿಸುವ ಪೊಲೀಸರ ನೆರವಿಗಿದೆ ಕಾಂಗ್ರೆಸ್ ಎಂಬ ಘೋಷಣೆ ಮಾಡಿದೆ.
ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ :
ಮುಂದುವರೆದು ನಾವು ಸುಳ್ಳು ಭರವಸೆಯನ್ನು ನೀಡಿ ವಂಚಿಸುವುದಿಲ್ಲ, ಕಾಂಗ್ರೆಸ್ ಬಹುಮತದೊಂದಿಗೆ ಗೆಲ್ಲುವುದೂ ಗ್ಯಾರಂಟಿ, ಕಾಂಗ್ರೆಸ್ ಸರ್ಕಾರ ರಚಿಸುವುದೂ ಗ್ಯಾರಂಟಿ, ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ನೀಡುವುದೂ ಗ್ಯಾರಂಟಿ, ಹಸಿವುಮುಕ್ತ ಕರ್ನಾಟಕ ಮಾಡುವುದೂ ಗ್ಯಾರಂಟಿ ಎಂಬ ವಾಗ್ದಾನ ನೀಡಿದೆ.

8 ಗಂಟೆ ತ್ರಿಫೇಸ್ ವಿದ್ಯುತ್:
ಸಣ್ಣ ವ್ಯಾಪಾರಿಗಳು ಈ ದೇಶದ ಅರ್ಥ ವ್ಯವಸ್ಥೆಯ ಜೀವಾಳವಾಗಿದೆ. ಸಣ್ಣ ವ್ಯಾಪಾರಿಗಳ ವ್ಯಾಪಾರ, ವ್ಯವಹಾರದ ವೃದ್ಧಿಗಾಗಿ 1000 ಕೋಟಿಯ ಕಲ್ಯಾಣ ನಿಧಿ ಸ್ಥಾಪಿಸಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ರೂಪಿಸುತ್ತೇವೆ. ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ, ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಸ್ಥಾಪನೆ, ಗ್ರಾಮೀಣ ಭಾಗದಲ್ಲಿ ಹಗಲು ಹೊತ್ತಿನಲ್ಲಿ 8 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಮೈಸೂರಿನಲ್ಲಿ ಫಿಲ್ಮ್ ಸಿಟಿ:
ಮೈಸೂರಿನಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹೆಸರಿನ ಸುಸಜ್ಜಿತ ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ. ಚಿತ್ರೋದ್ಯಮ ಸಾವಿರಾರು ಜನರಿಗೆ ಉದ್ಯೋಗ ನೀಡುವ ರಂಗ, ಹಲವು ಪ್ರತಿಭೆಗಳನ್ನು ಹುಟ್ಟುಹಾಕುವ ರಂಗ, ಕನ್ನಡ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ತಯಾರಾಗಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಪೂರಕವಾದ ವಾತಾವರಣ ಸೃಷ್ಟಿ ಮಾಡುತ್ತೇವೆ ಎಂದು ಹೇಳಲಾಗಿದೆ.












Click it and Unblock the Notifications