'ಕೈ' ನಾಯಕರ ಸಭೆಯಲ್ಲಿ ವಿಧಾನಸಭಾ ಚುನಾವಣೆಗೆ ರಣತಂತ್ರ

ಬೆಂಗಳೂರು, ಅಕ್ಟೋಬರ್ 4: ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಚುನಾವಣಾ ತಂತ್ರವನ್ನು ಅಳವಡಿಸುತ್ತಿರುವಾಗಲೇ ಆಡಳಿತರೂಢ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಬಿಜೆಪಿ ಚುನಾವಣಾ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಅದು ಮುಂದಾಗಿದೆ.

ಅಕ್ಟೋಬರ್ 6ರಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ವಿಶೇಷ ಶಾಸಕಾಂಗ ಪಕ್ಷದ ಸಭೆ ಕರೆಯಲು ಸೂಚಿಸಿದ್ದಾರೆ. ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದ್ದು, ಇಲ್ಲಿ ಮುಂದಿನ ಚುನಾವಣೆಗೆ ಒಂದಷ್ಟು ಕಾರ್ಯತಂತ್ರಗಳು ಕೂಡ ಸಿದ್ಧವಾಗಲಿವೆ. ಹೀಗಾಗಿ ಈಗ ಎಲ್ಲರ ಚಿತ್ತ ಕಾಂಗ್ರೆಸ್‍ನ ಶಾಸಕಾಂಗ ಸಭೆಯತ್ತ ನೆಟ್ಟಿದೆ.

ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುವುದರ ಬಗ್ಗೆ ಘೋಷಣೆ ಮಾಡಿಕೊಂಡಿವೆ. ಅದರಂತೆ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ. ಜೆಡಿಎಸ್‍ನಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು ಅವರ ನೇತೃತ್ವದಲ್ಲೇ ಚುನಾವಣೆಗೆ ತೆರಳಲು ಎಲ್ಲ ರೀತಿಯ ಸಿದ್ಧತೆಗಳು ಆರಂಭವಾಗಿವೆ.

ಆದರೆ, ಕಾಂಗ್ರೆಸ್‍ನಲ್ಲಿ ಮಾತ್ರ ಈ ಬಗ್ಗೆ ಗೊಂದಲವಿದೆ. 'ಮುಂದಿನ ಸಿಎಂ ಅಭ್ಯರ್ಥಿ ನಾನೇ. ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯುತ್ತದೆ' ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವೇದಿಕೆಗಳಲ್ಲಿ ರಾಜಾರೋಷವಾಗಿ ಹೇಳುತ್ತಿದ್ದಾರೆಯಾದರೂ ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೇ ಸಹಮತ ನೀಡಿಲ್ಲ.

ಚುನಾವಣೆಗೂ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆಯಿಲ್ಲ

ಚುನಾವಣೆಗೂ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆಯಿಲ್ಲ

"ನಮ್ಮ ಪಕ್ಷದಲ್ಲಿ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಿ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುತ್ತದೆ," ಎಂದು ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್‍ನಲ್ಲಿ ಭಿನ್ನಾಭಿಪ್ರಾಯ, ಗೊಂದಲಗಳಿರುವುದು ಎದ್ದು ಕಾಣುತ್ತಿದೆ.

ತಣ್ಣಾಗಾದ್ರಾ ಡಿಕೆಶಿ?

ತಣ್ಣಾಗಾದ್ರಾ ಡಿಕೆಶಿ?

ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲೂ ನಾಯಕತ್ವ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಐಟಿ ದಾಳಿ ಬಳಿಕ ಮೌನಕ್ಕೆ ಶರಣಾಗಿರುವುದು ಗೋಚರಿಸುತ್ತಿದೆ. ಮೇಯರ್ ಆಯ್ಕೆ ವಿಚಾರದ ನೆಪ ಮಾಡಿಕೊಂಡು ಅವರ ಸಹೋದರ ಡಿ.ಕೆ.ಸುರೇಶ್ ಅವರು ಪಕ್ಷದ ನಾಯಕರ ವಿರುದ್ಧವೇ ಹರಿಹಾಯ್ದದನ್ನು ಗಮನಿಸಿದರೆ ಕಾಂಗ್ರೆಸ್‍ನಲ್ಲಿ ಮೇಲ್ಮೋಟಕ್ಕೆ ಎಲ್ಲವೂ ಸರಿಯಿಲ್ಲ ಎಂಬುದು ಗೋಚರಿಸುತ್ತಿದೆ.

ಇನ್ನೈದು ವರ್ಷ ನಾನೇ ಮುಖ್ಯಮಂತ್ರಿ

ಇನ್ನೈದು ವರ್ಷ ನಾನೇ ಮುಖ್ಯಮಂತ್ರಿ

ಇದೆಲ್ಲದರ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ನೇತೃತ್ವದಲ್ಲೇ ಚುನಾವಣೆ ನಡೆಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಗೆಲ್ಲಿಸಿ ಅಧಿಕಾರಕ್ಕೆ ತರುವುದರಲ್ಲಿದ್ದಾರೆ. ಮುಂದೆಯೂ ತಾನೇ ಮುಖ್ಯಮಂತ್ರಿಯಾಗುವ ಉಮೇದಿ ಅವರಲ್ಲಿ ಕಾಣಿಸುತ್ತಿದೆ. ದಸರಾ ಕಾರ್ಯಕ್ರಮಗಳಲ್ಲಿಯೂ ಇದೇ ಮಾತನ್ನು ಹೇಳಿ ಅವರದ್ದೇ ಪಕ್ಷದ ಕೆಲವು ನಾಯಕರಿಗೆ ಟಾಂಗ್ ನೀಡಿದ್ದಾರೆ.

ಗೊಂದಲ ಬದಿಗಿಟ್ಟು ಚುನಾವಣೆಗೆ ಹೊರಡಿ

ಗೊಂದಲ ಬದಿಗಿಟ್ಟು ಚುನಾವಣೆಗೆ ಹೊರಡಿ

ಒಳಗೊಳಗೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಕೆಲವು ನಾಯಕರಿಗೆ ಮುಖ್ಯಮಂತ್ರಿಗಳ ನಡೆಯನ್ನು ಸಹಿಸಲಾಗುತ್ತಿಲ್ಲ. ಅವರದು ಉಗುಳಲೂ ಆಗದ, ನುಂಗಲೂ ಆಗದ ಸ್ಥಿತಿಯಾಗಿದೆ. ಈಗಾಗಲೇ ಸಿಎಂ ಗಾದಿ ಮೇಲೆ ಕಾಂಗ್ರೆಸ್‍ನಲ್ಲಿ ಡಾ.ಜಿ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಕಣ್ಣಿದೆ.

ಹೀಗಾಗಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‍ನಲ್ಲಿ ಒಂದಷ್ಟು ಬದಲಾವಣೆಗಳಾಗುವುದರಲ್ಲಿ ಸಂದೇಹವಿಲ್ಲ. ಜತೆಗೆ ದಲಿತ ಮುಖ್ಯಮಂತ್ರಿ ವಿಚಾರಗಳು ಕೂಡ ಚಾಲ್ತಿಗೆ ಬರುವ ಸಾಧ್ಯತೆಯೂ ಇದೆ. ಅದರ ಜತೆ ಜತೆಗೆ ಮೂಲ ಮತ್ತು ವಲಸಿಗ ವಿಚಾರಗಳು ಕೂಡ ತೇಲಿ ಬರಬಹುದು. ಸದ್ಯದ ಮಟ್ಟಿಗೆ ಒಳಗಿನ ಏನೇ ಗೊಂದಲ ಇದ್ದರೂ ಅದನ್ನೆಲ್ಲ ಬದಿಗಿಟ್ಟುಕೊಂಡು ಮುಂಬರುವ ಚುನಾವಣೆಗೆ ಸಿದ್ಧವಾಗಲು ಹೈಕಮಾಂಡ್ ಫರ್ಮಾನು ಹೊರಡಿಸಿದೆ.

ಗಾಬರಿ ಹುಟ್ಟಿಸಿದ ಶಾಸಕರ ನಡೆ

ಗಾಬರಿ ಹುಟ್ಟಿಸಿದ ಶಾಸಕರ ನಡೆ

ಈ ನಡುವೆ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದರೂ ಶಾಸಕರು ಯಾವುದೇ ರೀತಿಯ ಉತ್ಸುಕತೆ ತೋರದಿರುವುದು ಗಾಬರಿ ಹುಟ್ಟಿಸಿದೆ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಚುನಾವಣೆಯ ರಣೋತ್ಸಾಹ ಕಾಣಿಸುತ್ತಿರುವುದು ಅವರ ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿಯೇ ಅವರು ಅ.6ರಂದು ವಿಶೇಷ ಶಾಸಕಾಂಗ ಪಕ್ಷದ ಸಭೆ ಕರೆಯಲು ಸೂಚಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲ ಶಾಸಕರು ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಅಮೂಲ್ಯ ಸಲಹೆಗಳನ್ನು ನೀಡುವಂತೆ ಮನವಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+