ಭಾಷಣ ಮಾಡದೆ ತೆರಳಿದ ಗವರ್ನರ್‌ಗೆ ಧಿಕ್ಕಾರ ಘೋಷಣೆ; ಖರ್ಗೆ, ಖಂಡ್ರೆ ಹೇಳಿದ್ದೇನು?
ಬೆಂಗಳೂರು: ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿದ್ದಾರೆ. ಆರ್ಥಿಕ ಸ್ಥಿತಿಗತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನನ್ನ ಸರ್ಕಾರ ಬದ್ಧವಾಗಿದೆ. ಅವರಿಗೆ ನನ್ನ ಶುಭಾಶಯ, ಜೈ ಹಿಂದ್, ಜೈಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ. ಈ ಮೂಲಕ ಸರ್ಕಾರ ಕೊಟ್ಟ ಭಾಷಣ ಓದದೇ ಕೆಲ ಅಂಶಗಳನ್ನು ಮಾತ್ರ ಓದಿ ಭಾಷಣ ಮುಗಿಸಿದ್ದಾರೆ. ಇನ್ನೂ 13 ಸಾಲುಗಳನ್ನ ಭಾಷಣ ಮಾಡಿ ತೆರಳಿದ ರಾಜ್ಯಪಾಲ ನಡೆಗೆ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದ್ದಾರೆ.
ಇನ್ನೂ ರಾಜ್ಯಪಾಲ ನಡೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಅಸಮಾಧಾನವನ್ನ ಹೊರಹಾಕಿದ್ದಾರೆ. ಕರ್ನಾಟಕದ ರಾಜ್ಯಪಾಲರು ಸರ್ಕಾರದ ಭಾಷಣವನ್ನು ಪೂರ್ಣವಾಗಿ ಓದದಿರಲು ನಿರ್ಧರಿಸಿರುವುದು ತೀವ್ರ ವಿಷಾದಕರ. ಇದನ್ನು ಸಂವಿಧಾನವೇ ಸ್ಪಷವಾಗಿ ಹೇಳುತ್ತದೆ. 176 ನೇ ವಿಧಿಯ ಅಡಿಯಲ್ಲಿ, ರಾಜ್ಯಪಾಲರು ವರ್ಷದ ಮೊದಲ ಅಧಿವೇಶನದಲ್ಲಿ ಶಾಸಕಾಂಗವನ್ನು ಉದ್ದೇಶಿಸಿ ಮಾತನಾಡಬೇಕಾಗುತ್ತದೆ ಮತ್ತು ಆ ಭಾಷಣವು ಚುನಾಯಿತ ಸರ್ಕಾರದ ನೀತಿ ನಿರೂಪಣೆಯಾಗಿರುತ್ತದೆಯೇ ವಿನಾ, ಅವರ ವೈಯಕ್ತಿಕ ಅಭಿಪ್ರಾಯಗಳಲ್ಲ. ಇದನ್ನು ಸಚಿವ ಸಂಪುಟ ಸಿದ್ಧಪಡಿಸುತ್ತದೆ ಹಾಗೂ ಅವರು ಸಾಂವಿಧಾನಿಕ ಸಲಹೆಯಂತೆ ಅದನ್ನು ಮಾಡುವ ನಿರೀಕ್ಷೆಯಿದೆ.

ಪೂರ್ಣ ಭಾಷಣವನ್ನು ಓದಲು ನಿರಾಕರಿಸುವುದು 176 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಮತ್ತು ರಾಜ್ಯಪಾಲರು ಮಂತ್ರಿ ಮಂಡಳಿಯ ನೆರವು ಹಾಗೂ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕಾದ 163 ನೇ ವಿಧಿಗೆ ವಿರುದ್ಧವಾಗಿದೆ. ಪ್ರಸ್ತುತ ಪ್ರಶ್ನೆಯಲ್ಲಿರುವ ಭಾಷಣವು ಸಂಪೂರ್ಣ ವಾಸ್ತವಿಕ ಸಂಗತಿಗಳಿಂದ ಕೂಡಿದೆ ಮತ್ತು ಕರ್ನಾಟಕ ಸರ್ಕಾರದ ಅಧಿಕೃತ ನಿಲುವನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದ ಹಕ್ಕುಬದ್ಧವಾದ ಅನುದಾನಗಳ ನಿರಾಕರಣೆ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ಕುಸಿತ ಸೇರಿದಂತೆ ಇದೇ ವಿಷಯಗಳನ್ನು ಗೌರವಾನ್ವಿತ ಮುಖ್ಯಮಂತ್ರಿಗಳು ಪ್ರಧಾನಿಯವರ ಬಳಿ ಪದೇ ಪದೇ ಒತ್ತಿ ಹೇಳಿದ್ದಾರೆ.
ಇದರ ಹೊರತಾಗಿಯೂ, ಸಾಂವಿಧಾನಿಕ ಔಚಿತ್ಯ ಮತ್ತು ಕಚೇರಿಯ ಪಾವಿತ್ರ್ಯಕ್ಕೆ ಅನುಗುಣವಾಗಿ, ನಿಜವಾದ ಕಾಳಜಿಗಳಿದ್ದರೆ, ಸೀಮಿತ ಭಾಷಾ ಬದಲಾವಣೆಗಳನ್ನು ಪರಿಗಣಿಸಬಹುದು ಎಂದು ಸರ್ಕಾರ ತಿಳಿಸಿದೆ. ಆದರೆ ಇಡೀ ಭಾಗಗಳನ್ನು ಕೈಬಿಡಬೇಕೆಂದು ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ ಹಾಗೂ ಕರ್ನಾಟಕದ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಇದು ರಾಜ್ಯಪಾಲರ ಕಚೇರಿಯ ಸಾಂವಿಧಾನಿಕ ಪಾತ್ರ ಮತ್ತು ತಟಸ್ಥತೆಯನ್ನು ದುರ್ಬಲಗೊಳಿಸುವ ಪಕ್ಷಪಾತದ ಹಸ್ತಕ್ಷೇಪವಲ್ಲದೆ ಬೇರೇನೂ ಅಲ್ಲ. ಹಾಗೆಯೇ ನಿಜವಾಗಿಯೂ ಯಾರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಇದು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ನಡೆಗೆ ಈಶ್ವರ ಖಂಡ್ರೆ ಅಸಮಾಧಾನ
ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು, ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಭಾಷಣವನ್ನು ಓದಬೇಕೇ ಹೊರತು ತಾವೇ ಸಿದ್ಧಮಾಡಿಕೊಂಡ ಭಾಷಣ ಓದಲು ಅವಕಾಶವಿಲ್ಲ. ರಾಜ್ಯಪಾಲರ ಇಂದಿನ ನಡೆ ಸೂಕ್ತವಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರ್ಷದ ಪ್ರಥಮ ಅಧಿವೇಶನದಲ್ಲಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯ ಮತ್ತು ಇದು ರಾಜ್ಯಪಾಲರ ಸಂವಿಧಾನಾತ್ಮಕ ಕರ್ತವ್ಯವೂ ಆಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿ ಆಗಿರುವುದಿಲ್ಲ. ಆದರೆ, ಅವರು ಇಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಘಟನೆ ನಡೆದಿರುವುದು ನೋವು ತಂದಿದೆ. ಯುಪಿಎ ಸರ್ಕಾರ ರಾಷ್ಟ್ರಪಿತ ಮಹಾತ್ಮಾಗಾಂಧೀ ಅವರ ಹೆಸರಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿತ್ತು. ಇದರ ಹೆಸರು ಬದಲಾಯಿಸುವ ಅಗತ್ಯ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ. ಆದರೂ ರಾಜಕೀಯ ಲಾಭಕ್ಕಾಗಿ ಈ ರೀತಿ ಮಹಾತ್ಮಾ ಗಾಂಧೀ ಹೆಸರನ್ನೇ ತೆಗೆದಿರುವ ಕ್ರಮದ ವಿರುದ್ಧ ರಾಜ್ಯ ಸರ್ಕಾರ ಅಧಿವೇಶದಲ್ಲಿ ಚರ್ಚಿಸುವುದು, ಖಂಡಿಸುವುದು ಸರಿಯಾದುದಾಗಿದೆ. ಆದರೆ ಗೌರವಾನ್ವಿತ ರಾಜ್ಯಪಾಲರ ನಡೆ ಸೂಕ್ತವಾಗಿರುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications