ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ವಿರಸ, ಹೈಕಮಾಂಡ್‌ಗೆ ದೂರು!
ಬೆಂಗಳೂರು, ಆಗಸ್ಟ್ 19 : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ವಿರಸ ಕಂಡುಬಂದಿದ್ದು ಹೈಕಮಾಂಡ್ ನಾಯಕರಿಗೆ ದೂರು ನೀಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕದ ವಿಚಾರದಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ, ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ತಮ್ಮ ಅಸಮಾಧಾನವನ್ನು ಹೈಕಮಾಂಡ್‌ಗೆ ತಲುಪಿಸುವಲ್ಲಿಯೂ ನಾಯಕರು ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಪಕ್ಷ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಏಕ ಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವುಗಳನ್ನು ಒಪ್ಪುವುದು ಕಷ್ಟ. ಜೆಡಿಎಸ್ ನಡೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿನಲ್ಲಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಮುಗಿಯುವ ತನಕ ಮೈತ್ರಿಗೆ ಯಾವುದೇ ಧಕ್ಕೆ ಬರಬಾರದು. ಕಾಂಗ್ರೆಸ್‌ನಿಂದ ಮೈತ್ರಿಗೆ ಭಂಗವಾಯಿತು ಎಂಬ ಅಪವಾದ ಬಾರಬಾರದು ಎಲ್ಲವನ್ನು ಸಮನ್ವಯದಿಂದ ಎದುರಿಸುವಂತೆ ಹೈಕಮಾಂಡ್ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ...ನೀಡಿರುವ ದೂರಿನಲ್ಲಿ ಏನಿದೆ?

ಸಮನ್ವಯ ಸಮಿತಿ ಸಭೆ ನಡೆಸಿ
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಗಿತ್ತು. ಮಾಜಿ ಮುಖ್ಯಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ತಕ್ಷಣದ ಸಮನ್ವಯ ಸಮಿತಿ ಸಭೆಯನ್ನು ಕರೆಯಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ಬಗ್ಗೆ ಚರ್ಚಿಸಲು ಸಭೆ ಕರೆಯಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಸಭೆ ಎಂದು ನಡೆಯಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೈತ್ರಿ ಪ್ರಸ್ತಾಪದ ಕುರಿತು ಮಾತುಕತೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಮೈಸೂರು-ಕೊಡಗು ಕ್ಷೇತ್ರಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ. ಮೈಸೂರು ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಬಿಟ್ಟುಕೊಡಬಾರದು ಎಂದು ನಾಯಕರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ನ 9 ಸಂಸದರು ಇರುವ ಕ್ಷೇತ್ರವನ್ನು ಬಿಟ್ಟುಕೊಡಬಾರದು. ಬಿಟ್ಟುಕೊಡುವುದು ಅನಿವಾರ್ಯವಾದಲ್ಲಿ ಎಲ್ಲಾ ನಾಯಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿ ಸೂಚನೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಬೇಕು ಎಂದು ಸಚಿವರಿಗೆ, ಶಾಸಕರಿಗೆ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬ ಶಾಸಕ, ಸಚಿವರಿಗೆ ಮುಖಂಡರಿಗೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ನೀಡಬೇಕು ಎಂದು ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಯಾವ ನಾಯಕರು ಅಪಸ್ವರ ಎತ್ತಬಾರದು. ಲೋಕಸಭೆ ಚುನಾವಣೆ ತನಕ ಎಲ್ಲಾ ನಾಯಕರು ಸಮನ್ವಯದಿಂದ ಇರಬೇಕು ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ.

ಪ್ರವಾಹಕ್ಕೆ ಸ್ಪಂದಿಸುವಂತೆ ಸೂಚನೆ
ಕೊಡಗು ಜಿಲ್ಲೆಯಲ್ಲಿ ಆಗಿರುವ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿರುವ ಜನರಿಗೆ ನೆರವಾಗಿ ಎಂದು ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಇತರ ನಾಯಕರಿಗೆ ಸೂಚನೆ ನೀಡಿದ್ದಾರೆ. ಜನರ ಜೊತೆ ನಿಂತ ಎಲ್ಲಾ ನಾಯಕರು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.












Click it and Unblock the Notifications