ಹೊಸಕೋಟೆಯಲ್ಲಿ ಹಳೆ ಕಾಂಗ್ರೆಸಿಗರ ಮುನಿಸು, ರಾಜೀನಾಮೆ!
ಬೆಂಗಳೂರು, ಅಕ್ಟೋಬರ್ 20; ಮೂಲ ಮತ್ತು ವಲಸಿಗ ಕಾಂಗ್ರೆಸಿಗರ ನಡುವಿನ ಜಟಾಪಟಿಗೆ ಹೊಸಕೋಟೆ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಿದೆ. ಮುಂದಿನ ವಿಧಾನಸಭೆ ಚುನಾವಣೆ ಎದುರಾಗುತ್ತಿರುವಾಗಲೇ ಮುಖಂಡರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾಗಿದೆ.
ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯಲ್ಲಿ ಮೂಲ ಕಾಂಗ್ರೆಸಿಗರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬುದು ಆರೋಪ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುನಿಶಾಮಣ್ಣ ಇದೇ ವಿಚಾರಕ್ಕೆ ಶಾಸಕರ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದರು ಎಂದು ಬುಧವಾರ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಆದರೆ ಇತ್ತ ಹೊಸಕೋಟೆ ಅಸಮಾಧಾನ ಭುಗಿಲೆದ್ದಿದೆ, ಅದು ರಾಜೀನಾಮೆ ತನಕ ಹೋಗಿ ನಿಂತಿದೆ.
ಹೊಸಕೋಟೆಯ ಶಾಸಕ ಶರತ್ ಬಚ್ಚೇಗೌಡ. ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದುಬಂದರು. ಈಗ ಅವರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಟಿಕೆಟ್ ಮೂಲಕ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಶರತ್ ಬಚ್ಚೇಗೌಡ, ಮೂಲ ನಾಯಕರು
ಹೊಸಕೋಟೆ ಕ್ಷೇತ್ರದಲ್ಲಿ ಮೂಲ, ವಲಸಿಗ ಕಾಂಗ್ರೆಸಿಗರ ನಡುವಿನ ಜಟಾಪಟಿ ಜೋರಾಗಿದೆ. ಶಾಸಕರ ಶರತ್ ಬಚ್ಚೇಗೌಡ ವಿರುದ್ಧ ಮೂಲ ಕಾಂಗ್ರೆಸಿಗರು ಸಿಡಿದೆದಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯಲ್ಲಿ ಶಾಸಕರು ಮೂಲಕ ಕಾಂಗ್ರೆಸಿಗರನ್ನು ಕಡೆಗಣಿಸಿದ್ದಾರೆ ಎಂಬುದು ಆರೋಪವಾಗಿದೆ.
ಕ್ಷೇತ್ರದ ಬಿಜೆಪಿಯಲ್ಲಿಯೂ ಇದೇ ಜಟಾಪಟಿ ಇದೆ. ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಂಟಿಬಿ ನಾಗರಾಜ್‌ರನ್ನು ಮೂಲ ಬಿಜೆಪಿಗರು ಒಪ್ಪುತ್ತಿಲ್ಲ. ಇತ್ತ ಕಾಂಗ್ರೆಸ್‌ನಲ್ಲಿಯೂ ಇದೇ ವಿಚಾರ ಜಟಾಪಟಿಗೆ ಕಾರಣವಾಗಿದೆ.

ಮುನಿಶಾಮಣ್ಣ ರಾಜೀನಾಮೆ
ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುನಿಶಾಮಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮುಂದಿನ ಚುನಾವಣೆ ತಯಾರಿಯಲ್ಲಿದ್ದ ಶಾಸಕರಿಗೆ ಹಿನ್ನಡೆ ಉಂಟಾಗಿದೆ. ಮುನಿಶಾಮಣ್ಣ ಬೆಂಬಲಿಗರು ಮುಂದೆ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ? ಎಂಬುದು ಕುತೂಹಲಕ್ಕೆ ಮೂಡಿಸಿದೆ.
ಹಿಂದೆ ಹಲವು ಸಲ ಹೊಸಕೋಟೆ ಕಾಂಗ್ರೆಸ್‌ನಲ್ಲಿನ ಅಸಮಾಧಾನ ಸುದ್ದಿಯಾಗಿತ್ತು. ಆಗ ಮುನಿಶಾಮಣ್ಣ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಿದ್ದರು. ಆದರೆ ಈ ಬಾರಿ ಅವರು ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಬೆಂಬಲಿಸಿರುವ ಶರತ್ ಬಚ್ಚೇಗೌಡ
ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದರು. ಹೊಸಕೋಟೆ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಟಿಕೆಟ್ ಪಡೆದರು. ಇದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದ ಬಿ. ಎನ್. ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಬಂಡಾಯವೆದ್ದರು. ಯಾರ ಮನವೊಲಿಕೆಗೂ ಬಗ್ಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸೋಲಿಸಿದರು. ಆದರೆ ಈಗ ಶರತ್ ಬಚ್ಚೇಗೌಡ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.
ಹೊಸಕೋಟೆ ಕ್ಷೇತ್ರದ 30 ಗ್ರಾಮ ಪಂಚಾಯಿತಿಗಳ ಪೈಕಿ 25ರಲ್ಲಿ ಕಾಂಗ್ರೆಸ್ ಅಧಿಕಾರಲ್ಲಿದೆ. ಆದರೆ ಪಕ್ಷದಲ್ಲಿನ ಅಸಮಾಧಾನ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.

ಮೂಲ ಕಾಂಗ್ರೆಸಿಗರ ಕೆಂಗಣ್ಣು
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಶರತ್ ಬಚ್ಚೇಗೌಡ ಸಕ್ರಿಯವಾಗಿ ತೊಡಗಿದ್ದರು. ರಾಹುಲ್ ಗಾಂಧಿ ಸಂವಾದದ ಭಾಷಾಂತರವನ್ನು ಸಹ ಮಾಡುತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ಮೂಲ ಕಾಂಗ್ರೆಸಿಗರು ಇನ್ನಷ್ಟು ಅಸಮಾಧಾನಗೊಂಡಿದ್ದಾರೆ. ಮುಂದಿನ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಹೊಸಕೋಟೆ ಕ್ಷೇತ್ರದ ಹಳೆ ಕಾಂಗ್ರೆಸಿಗರ ಅಸಮಾಧಾನವನ್ನು ಹೇಗೆ ಸರಿ ಮಾಡಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications