ಕುತೂಹಲ ಮೂಡಿಸಿದ ಯತ್ನಾಳ್ ಮತ್ತು ಕಾಂಗ್ರೆಸ್ ನಾಯಕರ ಭೇಟಿ: ಕೈ ಹಿಡಿಯುತ್ತಾರಾ ಹಿಂದೂ ಹುಲಿ
ಹುಬ್ಬಳ್ಳಿ, ಮಾರ್ಚ್ 31: ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಬಿಜೆಪಿ ಹೈಕಮಾಂಡ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಇದೀಗ ಉಚ್ಚಾಟನೆ ಬಳಿಕ ಯತ್ನಾಳ್ ಏಕಾಂಕಿಯಾಗಿದ್ದು, ಯತ್ನಾಳ್ ಅವರು ಕಾಂಗ್ರೆಸ್‌ಗೆ ಪಕ್ಷಕ್ಕೆ ಬಂದ್ರೆ ಕರೆದುಕೊಳ್ಳುತ್ತೇವೆ. ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದ್ರೆ ನಾನೇ ಕರೆದು ಕೊಂಡು ಬರುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಗೆ ನೀಡಿದ್ರು. ಈ ಬೆನ್ನಲ್ಲೇ ಯತ್ನಾಳ್ ಅವರನ್ನ ಕಾಂಗ್ರೆಸ್ ನಾಯಕರು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿಯಿಂದ ಉಚ್ಚಾಟಿತರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಕಾಂಗ್ರೆಸ್ ನಾಯಕರ ದೃಷ್ಟಿ ನೆಟ್ಟಿದೆ. ನಿನ್ನೆ ಯುಗಾದಿ ಹಬ್ಬವಾದರೂ ಬಸನಗೌಡ ಪಾಟೀಲ್ ಯತ್ನಾಳ್ ಹುಬ್ಬಳ್ಳಿಯಲ್ಲಿದ್ದರು. ಹುಬ್ಬಳ್ಳಿಯ ಹೋಟೆಲೊಂದರಲ್ಲಿ ಕಾಂಗ್ರೆಸ್ ಪಕ್ಷದ ಧಾರವಾಡ ಗ್ರಾಮೀಣ ಘಟಕ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅವರು ಯತ್ನಾಳ್ ಅವರನ್ನು ಭೇಟಿಯಾಗಿದ್ದು ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆ ಇಬ್ಬರ ನಾಯಕ ಮಾತುಕತೆ ನಡೆಸುತ್ತಿರುವ ಫೋಟೋ ವೈರಲ್ ಆಗಿದೆ.

ಧಾರವಾಡ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಅವರು,ಖಾಸಗಿ ಹೊಟೆಲ್ ನಲ್ಲಿ ಯತ್ನಾಳರನ್ನ ಭೇಟಿಯಾಗಿದ್ದು, ಚರ್ಚೆ ನಡೆಸಿದ್ದಾರೆ. ಬೆಂಗಳೂರಿಂದ ಬರುವ ಮಾರ್ಗ ಮದ್ಯೆ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಯಾಗಿದ್ದಾರೆ. ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಕಾಂಗ್ರೆಸ್ ನಾಯಕರು ಅವರನ್ನ ಭೇಟಿ ಮಾಡಿರುವುದು ಸದ್ಯ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹಿಂದೂ ಹುಲಿ ಯತ್ನಾಳ್ ಅವರು ಕೈ ಹಿಡಿಯುತ್ತಾರಾ ಎನ್ನುವ ಚರ್ಚೆ ಹುಟ್ಟಿಕೊಂಡಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್‌ಗೆ ಬಂದ್ರೆ ಕರೆದುಕೊಳ್ಳುತ್ತೇವೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಕಾಂಗ್ರೆಸ್ ನ ಹಿರಿಯ ಶಾಸಕ ರಾಜು ಕಾಗೆ ಹೇಳಿಕೆ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಅವರು ಭೇಟಿ ಮಾಡಿ ಚರ್ಚೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಿಜೆಪಿಯವರು ನನ್ನನ್ನು ಮತ್ತೆ ವಾಪಸ್ ಕರಿತಾರೆ: ಯತ್ನಾಳ್
ಬಿಜೆಪಿಯವರು ನನ್ನನ್ನು ಗೌರವದಿಂದ ಮತ್ತೆ ವಾಪಸ್ ಕರೆಯಲಿದ್ದಾರೆ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ನನ್ನನ್ನು ವಾಪಸ್ ಕರೆಯುವ ಸಮಯ ಬರುತ್ತದೆ. ಈ ಹಿಂದೆ ಅಮಿತ್ ಶಾ ಅವರು ನನ್ನನ್ನು ವಾಪಸ್ ಕರೆದಿದ್ದರು. ಪ್ರಧಾನಿ ಮೋದಿ ಅವರೇ ನನ್ನನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸ್ವತಂತ್ರವಾಗಿ ರಾಜಕೀಯ ಪಕ್ಷ ಆರಂಭಿಸುವ ಯೋಚನೆ ಇಲ್ಲ. ಯಡಿಯೂರಪ್ಪ ಕುಟುಂಬದಿಂದಾಗಿ ಈಗಿನ ಬಿಜೆಪಿ ಹಾಳಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ನೋಡಿ. ಅವರು ಹಿಂದುತ್ವದ ಪರವಾಗಿದ್ದಾರೆ. ಆದರೆ ಇಲ್ಲಿ, ಇದು ಕುಟುಂಬ ಮತ್ತು ಲೂಟಿಗೆ ಸಂಬಂಧಿಸಿದೆ ಎಂದು ಯತ್ನಾಳ್ ಆರೋಪಿಸಿದರು.












Click it and Unblock the Notifications