Get Updates
Get notified of breaking news, exclusive insights, and must-see stories!

ಸಾಂವಿಧಾನಿಕ ಹುದ್ದೆಯನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ: ಮೋದಿ ವಿರುದ್ಧ ಬಿ ಕೆ ಹರಿಪ್ರಸಾದ್‌ ವಾಗ್ದಾಳಿ

ಬೆಂಗಳೂರು, ಜುಲೈ 04: ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಇದು ಶೋಭೆ ತರುವುದಿಲ್ಲ. ತುರ್ತು ಪರಿಸ್ಥಿತಿಯ ಕುರಿತು ಅವರು ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ಕಾಂಗ್ರೆಸ್‌ ನಾಯಕ ಬಿ ಕೆ ಹರಿಪ್ರಸಾದ್‌ ಹೇಳಿದರು.

ಸಂಸತ್ತಿನ ಸಮನ್ಸ್‌ಗಳು ಭಾರತದಲ್ಲಿ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುತ್ತಿದೆ ಎಂಬುವುದಕ್ಕೆ ಪುರಾವೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿರೋಧ ಪಕ್ಷದ ಸದಸ್ಯರು ಹಾಜರಿದ್ದಾರೆ. ಅವರು ಬಂಧನಕ್ಕೊಳಗಾಗಿಲ್ಲ ಅಥವಾ ಜೈಲಿನ ಕಂಬಿ ಎಣಿಸುತ್ತಿಲ್ಲ ಎಂಬುವುದನ್ನು ಸಾಕ್ಷೀಕರಿಸುತ್ತದೆ. ಈ ಕ್ರಮವು ಸಂಪೂರ್ಣವಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿದೆ. ಇದು ಸಂವಿಧಾನದ ಆಶಯಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಬದಲಾಗಿ ಸಂವಿಧಾನವನ್ನು ಸಂರಕ್ಷಿಸಲು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಕೈಗೊಂಡಿರುವ ನಡೆಯಾಗಿದೆ ಎಂದು ಇಂದಿರಾ ಗಾಂಧಿಯವರು ಸಂಸತ್ತಿನಲ್ಲಿ ಹೇಳಿದ್ದರು.

Congress Leader BK Hariprasad Lashed Out at Narendra Modi

ಅಚ್ಚರಿದಾಯಕ ವಿಷಯವೆಂದರೆ , ತುರ್ತುಪರಿಸ್ಥಿತಿಯ ಹೇರಿಕೆಗೆ ಕಾರಣವಾದ ಸಂದರ್ಭ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಲೇ ಇಲ್ಲ. ಹೀಗಾಗಿಯೇ ಈ ಬಗ್ಗೆ ತಪ್ಪು ಕಲ್ಪನೆಗಳು, ಬೇಕಾಬಿಟ್ಟಿಯಾದ ವಿಶ್ಲೇಷಣೆಗಳು ನಡೆಯುತ್ತಲೇ ಇವೆ, ಮುಖ್ಯವಾಗಿ, ತುರ್ತುಪರಿಸ್ಥಿತಿ ಎಂಬುವುದು ಸಂವಿಧಾನೇತರ ವಿಷಯವಾಗಿರಲಿಲ್ಲ. ತುರ್ತು ಪರಿಸ್ಥಿತಿಯನ್ನು ಹೇರುವುದು ಸಂವಿಧಾನವೇ ಕೊಟ್ಟ ನಿಬಂಧನೆ ಅಥವಾ ಅವಕಾಶವಾಗಿದೆ.ಸಂವಿಧಾನದ ರಚನಾಕಾರರು ತುರ್ತು ಪರಿಸ್ಥಿತಿಯನ್ನು ಅಳವಡಿಸಿಕೊಂಡಿದ್ದೇ ಅಂದು ಘೋಷಣೆಯಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದ್ದಂತಹ ಸನ್ನಿವೇಶಗಳಂಥವುಗಳನ್ನು ಸಮರ್ಥವಾಗಿ ನಿಭಾಯಿಸಲು.

ಜುಲೈ 22, 1975 ರಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಶ್ರೀಮತಿ ಇಂದಿರಾ ಗಾಂಧಿಯವರು, "ನಮ್ಮ ಸಂವಿಧಾನದ ರಚನಕಾರರು ಬಾಹ್ಯ ಆಕ್ರಮಣ ಮಾತ್ರವಲ್ಲ, ಆಂತರಿಕ ಗಲಭೆಗಳು ಕೂಡಾ ರಾಷ್ಟ್ರೀಯ ಹಿತಾಸಕ್ತಿಗೆ ಬೆದರಿಕೆಯೊಡ್ಡಬಹುದು ಎಂದು ಊಹಿಸಿದ್ದರು. ಅದಕ್ಕಾಗಿಯೇ ಅವರು ತುರ್ತುಪರಿಸ್ಥಿತಿಯಂತಹ ಒಂದು ಅವಕಾಶವನ್ನು ಒದಗಿಸಿದ್ದಾರೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ʻʻಸರ್ಕಾರದ ಈ ನಡೆಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿಲ್ಲ. ಆದರೆ ಕೋಮುವಾದಿ ವಿಚ್ಛಿದ್ರಕಾರಿ ಶಕ್ತಿಗಳ ಮಾರ್ಗದರ್ಶನದಲ್ಲಿ ವಿರೋಧ ಪಕ್ಷಕ್ಕೆ ನೇರ ಕ್ರಮ ಮತ್ತು ಅದರ ವಿಧ್ವಂಸಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಒಳಗಾಗುತ್ತಿತ್ತು, ನಾಶವಾಗುತ್ತಿತ್ತು ಮತ್ತು ದುರ್ಬಲವಾಗುತ್ತಿತ್ತು. ಸೇನೆ, ಪೋಲೀಸ್ ಮತ್ತು ನಮ್ಮ ಕೈಗಾರಿಕಾ ಕಾರ್ಮಿಕರಲ್ಲಿ ಅತೃಪ್ತಿ ಮೂಡಿಸಲು ಸದಾ ಪ್ರಯತ್ನಿಸುತ್ತಿತ್ತುʼʼ ಎಂದು ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದನ್ನು ನಾವು ಇಲ್ಲಿ ಮರೆಯುವಂತೆಯೇ ಇಲ್ಲ.

ತುರ್ತು ಪರಿಸ್ಥಿತಿ ಯುದ್ಧದಂತಹ ಸನ್ನಿವೇಶಗಳು ನಿರ್ಮಾಣವಾದರೆ ಅದಕ್ಕೆ ಸಾಂವಿಧಾನಿಕ ಪ್ರತಿಕ್ರಿಯೆಯಾಗಿದೆ. ಒಂದೆಡೆ ಸಂವಿಧಾನವು ಯುದ್ಧದ ಸಮಯದಲ್ಲಿ ಬಾಹ್ಯ ತುರ್ತು ಪರಿಸ್ಥಿತಿಯನ್ನು ಹೇರಿದರೆ, ಅದೇ ಸಂವಿಧಾನವು ದೇಶದೊಳಗೆ ಸೃಷ್ಟಿಯಾಗುವ ಯುದ್ಧದಂತಹ ಪರಿಸ್ಥಿತಿಯನ್ನು ಎದುರಿಸಲು ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತದೆ.

3 ಜುಲೈ 1975 ರಂದು ಇಂದಿರಾ ಗಾಂಧಿಯವರು ʻಟೈಮ್ಸ್ ಆಫ್ ಇಂಡಿಯಾʼಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆಯೊಂದನ್ನು ಕೊಟ್ಟಿದ್ದರು, ಅದರಲ್ಲಿ "ಯಾರ ಸಿದ್ಧಾಂತವು ಹಿಂಸೆ ಮತ್ತು ಒಡಕನ್ನು ಸೃಷ್ಟಿಸುತ್ತದೆಯೋ ಅವು ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ. ಅಂತಹವರು ಪ್ರಜಾಪ್ರಭುತ್ದದ ಬಗ್ಗೆ ಮಾತನಾಡಿದರೆ, ಹದಿಹರೆಯದ ಹುಡುಗನೊಬ್ಬ ತನ್ನ ಹೆತ್ತವರನ್ನ ಕೊಂದ ಮೇಲೆ ತಾನು ಅನಾಥ, ಅದೇ ಕಾರಣಕ್ಕೆ ನನ್ನ ಕೇಸನ್ನು ವಿಶೇಷವಾಗಿ ಪರಿಗಣಿಸಿ ಎಂದು ಕಾನೂನಿನ ಮುಂದೆ ಕ್ಷಮೆಯಾಚನೆ ಕೋರಿಕೊಂಡಂತಾಗುತ್ತದೆʼʼ ಎಂದಿದ್ದರು.

ಪ್ರತಿಪಕ್ಷಗಳು ಸರ್ಕಾರವು ಘೋಷಿಸಿದ್ದ ತುರ್ತುಪರಿಸ್ಥಿತಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ 1976ರ ಮಾರ್ಚ್‌ನಲ್ಲಿ ಚುನಾವಣೆಗಳು ನಡೆಯಲಿರುವುದರಿಂದ ಇನ್ನೂ 10 ತಿಂಗಳ ಕಾಲ ತನ್ನ ಪ್ರತಿರೋಧದ ಕಾವನ್ನು ಉಳಿಸಿಕೊಳ್ಳುವುದು ಪ್ರಜಾಸತ್ತಾತ್ಮಕ ಮಾರ್ಗವಾಗಿತ್ತು. ಆದರೆ ಪ್ರತಿಪಕ್ಷಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬದಲಾಗಿ ಬೆದರಿಕೆ ಮತ್ತು ಬಲತ್ಕಾರದ ರಾಜಕೀಯವನ್ನು ಆಶ್ರಯಿಸಿದವು.

ಇನ್ನು 10 ತಿಂಗಳ ಕಾಲ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಪಕ್ಷಗಳಿಗೆ ಆಯ್ಕೆ ಇತ್ತು. ಜನಮತವನ್ನು ಗಳಿಸಿ ಮುಂದಿನ ಸುತ್ತಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬಹುದಿತ್ತು. ಇಂದಿರಾ ಗಾಂಧಿಯವರ ಚುನಾವಣಾ ಅರ್ಜಿಯಲ್ಲಿನ ಪ್ರತಿಕೂಲವಾದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತುರ್ತು ಪರಿಸ್ಥಿತಿ ಘೋಷಣೆಗೆ ತಳುಕು ಹಾಕುವವರೂ ಇದ್ದಾರೆ. ಅಂತಹ ವಾದಗಳಿಗೆ ಯಾವುದೇ ಹುರುಳಿಲ್ಲ.

ಜೂನ್ 12, 1975 ರಂದು ಅಲಹಾಬಾದ್‌ಹೈಕೋರ್ಟಿನ ಈ ತೀರ್ಪನ್ನು ಮುನ್ನಲೆಯಾಗಿಟ್ಟುಕೊಂಡು ಇಂದಿರಾ ಗಾಂಧಿಯವರ ಚುನಾವಣೆಯನ್ನು ರದ್ದುಗೊಳಿಸಬೇಕೆಂದು ರಾಜ್ ನಾರಾಯಣ್ ಅವರು ಸಲ್ಲಿಸಿದ ಅರ್ಜಿಯಲ್ಲಿ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ತೀರ್ಪು ನೀಡಿದ್ದರು.

ನ್ಯಾಯಯುತವಾಗಿ ಚುನಾಯಿತಗೊಂಡಿದ್ದ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಲು ಅವಕಾಶವಿರಲಿಲ್ಲ ಮತ್ತು ಕೆಲವು ರಾಜ್ಯಗಳಲ್ಲಿ, ವಿಧಾನಸಭೆಗಳನ್ನು ವಿಸರ್ಜಿಸುವಂತೆ ಒತ್ತಾಯಿಸುವ ಸಲುವಾಗಿ, ಶಾಸಕರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲು ಬೆದರಿಕೆ ಮತ್ತು ಬಲಾತ್ಕಾರದ ಕುತಂತ್ರಗಳನ್ನು ಬಳಸಲಾಯಿತು. ಗುಜರಾತ್ ಮತ್ತು ಬಿಹಾರದಲ್ಲಿ ನಡೆದ ನವ ನಿರ್ಮಾಣ್ ಚಳುವಳಿ ಇದಕ್ಕೆ ಉದಾಹರಣೆಗಳು.

ಇದೂ ಸಾಲದೆಂಬಂತೆ, ಆಂದೋಲನಗಳು ದೇಶಾದ್ಯಂತ ಆವರಿಸಿ, ಹಿಂಸಾಚಾರ ಮತ್ತು ಅರಾಜಕತೆಗೆ ಕಾರಣವಾದವು. ರಾಜಧಾನಿಯಲ್ಲಿ ಸರ್ವೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ.ಎನ್.ರೇ ಅವರ ಮೇಲೆ ಗಂಭೀರ ಹಲ್ಲೆ ಹಾಗೂ ಕೊಲೆ ಯತ್ನ ನಡೆಯಿತು. ಕೇಂದ್ರ ರೈಲ್ವೆ ಸಚಿವ ಲಲಿತ್ ನಾರಾಯಣ್ ಮಿಶ್ರಾ ಅವರನ್ನು ಬಿಹಾರದ ಸಮಸ್ತಿಪುರದಲ್ಲಿ ಹತ್ಯೆ ಮಾಡಲಾಯಿತು. ಜೂನ್ 25, 1975 ರಂದು ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ದಂಗೆ ಏಳಲು ಪ್ರಚೋದನೆ ನೀಡಲಾಯಿತು. ಇವೆಲ್ಲವೂ ಪ್ರತಿಪಕ್ಷಗಳು ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸಿತು.

"ರಕ್ಷಣಾ ಪಡೆಗಳು ಮತ್ತು ಪೊಲೀಸರು ಶಿಸ್ತುಬದ್ಧ ಮತ್ತು ಅಪ್ರತಿಮ ದೇಶಭಕ್ತರಾಗಿದ್ದಾರೆ. ಹಾಗಾಗಿ ಗಂಭೀರವಾಗಿ ನಡೆದ ಪ್ರಚೋದನೆಕಾರಿ ಕರೆಗಳು ಅವರನ್ನು ಪ್ರಭಾವಿಸಲಿಲ್ಲ" ಎಂದು ಶ್ರೀಮತಿ ಇಂದಿರಾ ಗಾಂಧಿ ಅವರು ಹೇಳಿಕೆಯನ್ನೂ ನೀಡಿದರು.

ಇತಿಹಾಸವನ್ನೇ ಅರಿಯದ ಪ್ರಧಾನಿ ನರೇಂದ್ರ ಮೋದಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವುದು ಇತಿಹಾಸಕ್ಕೆ ಮಾಡುವ ಅಪಚಾರ. ಬಿಜೆಪಿಯವರಿಗೆ ಅಗ್ರಗಣ್ಯ ನಾಯಕರೆಸಿಕೊಂಡ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ತುರ್ತು ಪರಸ್ಥಿತಿಯಲ್ಲಿ ಗೃಹ ಬಂಧನದಲ್ಲಿಡಲಾಗಿತ್ತೇ ಹೊರತು, ಜೈಲಿನಲ್ಲಲ್ಲ ಎಂಬುದನ್ನ ಮೊದಲು ಅರಿತುಕೊಳ್ಳಲಿ. ಈ ಎಲ್ಲ ಹಿನ್ನೆಲೆಯನ್ನು ತಿಳಿಯದೇ ತುರ್ತು ಪರಿಸ್ಥಿತಿಯ ಕುರಿತು ಸುಳ್ಳಿನ ಭಾಷಣ ಮಾಡುವುದು ಪ್ರಧಾನಿ ಹುದ್ದೆಗೆ ಶೋಭೆ ತರುವ ಕೆಲಸವಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+