ಈಗಲ್ಟನ್ ನಿಂದ ಕೊಚ್ಚಿಯ 7 ಸ್ಟಾರ್ ಹೋಟೆಲ್ ಗೆ ಶಾಸಕರು ಶಿಫ್ಟ್
ಬೆಂಗಳೂರು, ಮೇ 17: ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ 'ಈಗಲ್ಟನ್ - ದಿ ಗಾಲ್ಫ್ ವಿಲೇಜ್ ರೆಸಾರ್ಟ್'ನ ಭದ್ರತೆಯನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ ಶಾಸಕರ ವಾಸ್ತವ್ಯ ಬದಲಿಸಲು ಉಭಯ ಪಕ್ಷದ ನಾಯಕರು ನಿರ್ಧರಿಸಿದ್ದಾರೆ.
ತಮ್ಮ ಶಾಸಕರ ಕುದುರೆ ವ್ಯಾಪಾರವನ್ನು ತಡೆಯಲು ಇಂದು ರಾತ್ರಿ ಶಾಸಕರನ್ನು ಕೊಚ್ಚಿಯ ಹೋಟೆಲ್ ಗೆ ಕರೆದೊಯ್ಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ.
ಕೊಚ್ಚಿಯ 'ಬ್ರಂಟನ್ ಬೋಟ್ ಯಾರ್ಡ್' ಎಂಬ ವೈಭವೋಪೇತ 7 ಸ್ಟಾರ್ ಹೋಟೆಲ್ ನ್ನು ಬುಕ್ ಮಾಡಲಾಗಿದ್ದು ಇಲ್ಲಿ ಶಾಸಕರು ವಾಸ್ತವ್ಯ ಹೂಡಲಿದ್ದಾರೆ.

ಈಗಲ್ಟನ್ ರೆಸಾರ್ಟ್ ನಿಂದ ಶಾಸಕರು ವಿಶೇಷ ಬಸ್ ಗಳಲ್ಲಿ ಎಚ್ಎಎಲ್ ಗೆ ತೆರಳಲಿದ್ದಾರೆ. ಅಲ್ಲಿಂದ ವಿಶೇಷ ವಿಮಾನದಲ್ಲಿ ಇಂದು ರಾತ್ರಿ 10 ಗಂಟೆಗೆ ಕೇರಳದ ಕೊಚ್ಚಿಗೆ ಪ್ರಯಾಣಿಸಲಿದ್ದಾರೆ.
ನಂತರ ಕೊಚ್ಚಿಯ ಸಮುದ್ರ ದಂಡೆಯಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅಧಿವೇಶನದ ದಿನ ಕೊಚ್ಚಿಯಿಂದ ನೇರವಾಗಿ ಬೆಂಗಳೂರಿಗೆ ಬರುವ ಯೋಜನೆಯನ್ನು ಉಭಯ ಪಕ್ಷದ ನಾಯಕರು ಹಾಕಿಕೊಂಡಿದ್ದಾರೆ.
ಈ ಹಿಂದೆ ರೆಸಾರ್ಟ್ ರಾಜಕಾರಣಕ್ಕೆ ಕೇರಳಕ್ಕೆ ಬರುವಂತೆ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಟ್ಟೀಟ್ ಮೂಲಕ ಕರ್ನಾಟಕದ ಶಾಸಕರನ್ನು ಆಹ್ವಾನಿಸಿತ್ತು. ಇದೀಗ ಶಾಸಕರು ಆಹ್ವಾನದಂತೆ ಕೇರಳಕ್ಕೆ ತೆರಳಲಿದ್ದಾರೆ.











Click it and Unblock the Notifications