ಜುಲೈ 15 ರ ವರೆಗೆ ಮೈತ್ರಿ ನಿರಾಳ, ಸರ್ಕಾರ ಉಳಿಸಿಕೊಳ್ಳಲು ಕಾಲಾವಕಾಶ
Recommended Video
ಬೆಂಗಳೂರು, ಜುಲೈ 09: ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಅನಿಶ್ಚಿತತೆಗೆ ಸ್ಪೀಕರ್ ರಮೇಶ್ ಕುಮಾರ್ ಅವರ ಸುದ್ದಿಗೋಷ್ಠಿ ಬಹುಮಟ್ಟಿಗೆ ಉತ್ತರ ನೀಡಿದೆ.
ಮೊದಲು ಸಲ್ಲಿಕೆಯಾಗಿದ್ದ ಎಂಟು ರಾಜೀನಾಮೆ ಕ್ರಮಬದ್ಧವಾಗಿಲ್ಲ, ಐದು ಮಾತ್ರವೇ ಕ್ರಮಬದ್ಧವಾಗಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ರೋಷನ್ ಬೇಗ್ ರಾಜೀನಾಮೆ ಇಂದಷ್ಟೆ ಬಂದಿರುವ ಕಾರಣ ಅದನ್ನು ಇನ್ನೂ ಪರಿಶೀಲಿಸಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ರಮೇಶ್ ಕುಮಾರ್ ಅವರು ಮೂರು ಶಾಸಕರಿಗೆ ಜುಲೈ 12 ರಂದು ಭೇಟಿ ಮಾಡಲು ತಿಳಿಸಿದ್ದು, ಅಂದು ವಿಚಾರಣೆ ನಡೆಸಲಿದ್ದಾರೆ. ಆ ನಂತರ ಎರಡು ದಿನ ರಜೆ ಇರುವ ಕಾರಣ ಜುಲೈ 15 ಕ್ಕೆ ಉಳಿದ ವಿಚಾರಣೆ ನಡೆಯಲಿದೆ.

ರಾಜೀನಾಮೆ ಸಲ್ಲಿಸಲು ಮತ್ತೆ ಕೆಲವು ದಿನ ಅವಕಾಶ
ಕ್ರಮಬದ್ಧವಾಗಿಲ್ಲದ ರಾಜೀನಾಮೆ ಸಲ್ಲಿರುವ ಶಾಸಕರಿಗೆ ಮತ್ತೊಂದು ಅವಕಾಶವನ್ನು ರಮೇಶ್ ಕುಮಾರ್ ನೀಡಿದ್ದು, ಅವರು ನಾಳೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ, ಆ ರಾಜೀನಾಮೆಗಳನ್ನು ಪರಿಶೀಲಿಸಿ ನಂತರ ಅವರಿಗೆ ಕಾಲಾವಕಾಶ ನೀಡಿ ಅವರ ವಿಚಾರಣೆ ನಡೆಸಿ ಆ ನಂತರವಷ್ಟೆ ನಿರ್ಣಯ ಪ್ರಕಟಿಸಲಾಗುತ್ತದೆ.

ಜುಲೈ 15 ರ ವರೆಗೆ ಕಾಲಾವಕಾಶ ದೊರೆತಿದೆ
ಅಂದರೆ ಕನಿಷ್ಟ ಜುಲೈ 15 ರ ವರೆಗೆ ದೋಸ್ತಿ ಪಕ್ಷಗಳಿಗೆ ಸಮಯಾವಕಾಶ ದೊರೆತಿದೆ. ಆ ನಂತರ ರಾಜೀನಾಮೆ ಅಂಗೀಕಾರವಾಗಲು ಇನ್ನಷ್ಟು ಸಮಯ ಹಿಡಿದರೂ ಆಶ್ಚರ್ಯವಿಲ್ಲ.

ಉಮೇಶ್ ಜಾಧವ್ ರಾಜೀನಾಮೆ ತಡವಾಗಿತ್ತು
ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಲು ತಿಂಗಳಿಗೂ ಹೆಚ್ಚು ಕಾಲ ಹಿಡಿದಿತ್ತು, ರಮೇಶ್ ಕುಮಾರ್ ಅವರ ಮನೆಗೆ ತೆರಳಿ ಉಮೇಶ್ ಜಾಧವ್ ಅವರು ರಾಜೀನಾಮೆ ಸಲ್ಲಿಸಿದ್ದರು, ಆದರೂ ರಾಜೀನಾಮೆ ಶೀಘ್ರವಾಗಿ ಅಂಗೀಕಾರವಾಗಿರಲಿಲ್ಲ.

ಜುಲೈ 12 ರಂದು ಮೂವರು ಶಾಸಕರ ಭೇಟಿ
ಜುಲೈ 12 ರಂದು ಸ್ಪೀಕರ್ ಭೇಟಿಗೆ ಆನಂದ್ ಸಿಂಗ್, ನಾರಾಯಣಗೌಡ, ರಾಮಲಿಂಗಾ ರೆಡ್ಡಿ ಆಗಮಿಸಲಿದ್ದು, ಅವರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್-ಜೆಡಿಎಸ್ ಮಾಡಲಿದೆ. ಶಾಸಕರು ಮಧ್ಯಾಹ್ನದ ನಂತರ ಸ್ಪೀಕರ್ ಅವರನ್ನು ಭೇಟಿ ಆಗಲಿದ್ದು, ದೂರುದಾರರ ಎದುರಲ್ಲಿ ಸ್ಪೀಕರ್ ವಿಚಾರಣೆ ನಡೆಸಲಿದ್ದಾರೆ.

ಸರ್ಕಾರ ಉಳಿಸಿಕೊಳ್ಳಲು ತಂತ್ರ ಹೆಣೆಯಲು ಅವಕಾಶ
ಜುಲೈ 15 ರ ವರೆಗೆ ಕಾಂಗ್ರೆಸ್-ಜೆಡಿಎಸ್‌ಗೆ ಕಾಲಾವಕಾಶ ದೊರೆತಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ತಂತ್ರಗಳನ್ನು ಹೆಣೆಯಲು, ಕಾರ್ಯಪ್ರವೃತ್ತರಾಗಲು ಈ ಕಾಲಾವಕಾಶವನ್ನು ಎರಡೂ ಪಕ್ಷಗಳು ಹೇಗೆ ಉಪಯೋಗಿಸಿಕೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications