ಕೆಟ್ಟ ಸಂಸ್ಕೃತಿ ರಾಜಕಾರಣಕ್ಕೆ ಪ್ರವೇಶಿಸಲು ಕಾಂಗ್ರೆಸ್ ಮಹಾದ್ವಾರ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಜನವರಿ12 : ಕೆಟ್ಟ ಸಂಸ್ಕೃತಿಯು ರಾಜಕಾರಣ ಪ್ರವೇಶಿಸಲು ಕಾಂಗ್ರೆಸ್ ಮಹಾದ್ವಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಎನ್ನುವ ಬಗ್ಗೆ ಶಾಸಕ ದಿನೇಶ್ ಗುಂಡೂರಾವ್ ಮಾಡಿರುವ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿ, ಕಾರ್ಯಕರ್ತ ಹೌದೋ ಅಲ್ಲವೋ ಎಂದು ಪರಿಶೀಲಿಸಲು ಸೂಚಿಸಲಾಗಿದೆ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ನಲ್ಲಿ ಎಂಥವರಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರಿಗೆ ತಿಳಿದಿದೆ. ನಾನು ಅವರ ಮಟ್ಟಕ್ಕೆ ಇಳಿಯಲಾಗದು. ಮೊದಲು ಅವರ ಮನೆ ಸ್ವಚ್ಛ ಮಾಡಿಕೊಳ್ಳುವುದನ್ನು ಕಲಿಯಲಿ. ಸ್ಯಾಂಟ್ರೋ ರವಿ ಬಂಧವಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಉಚಿತ ವಿದ್ಯುತ್ ನೀಡುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಉತ್ತರಿಸಿ ಡಿ.ಕೆ.ಶಿವಕುಮಾರ್ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.ಈ ಹೇಳಿಕೆಗಳನ್ನು ಗಮನಿಸಿದರೆ, ಮುಂದೆ ಅನುಷ್ಠಾನ ಮಾಡುವ ಉದ್ದೇಶ ಅವರಿಗಿಲ್ಲ. ಹೇಗಾದರೂ ಮಾಡಿ, ಸುಳ್ಳು ಭರವಸೆ ನೀಡಿ ಚುನಾವಣೆ ಗೆಲ್ಲಬೇಕೆನ್ನುವುದು ಸ್ಪಷ್ಟವಾಗಿದೆ. ಇಷ್ಟು ವರ್ಷ ಆಡಳಿತ ಮಾಡಿದ ಜವಾಬ್ದಾರಿಯುತ ಪಕ್ಷ ಕಾಂಗ್ರೆಸ್ ಹೀಗೆ ಹೇಳುವುದು ಸಲ್ಲದು. ಅರವಿಂದ ಕೇಜ್ರಿವಾಲ್ ಹೇಳಿದರೆ ನಡೆಯುತ್ತದೆ. ಅವರಿನ್ನೂ ಹೊಸಬರು. ಕಾಂಗ್ರೆಸ್ ಕಾಲದಲ್ಲಿ 6 ತಾಸು ವಿದ್ಯುತ್ ಸರಿಯಾಗಿ ನೀಡಲಾಗಲಿಲ್ಲ. ಇನ್ನು ಉಚಿತ ವಿದ್ಯುತ್ ಹೇಗೆ ನೀಡಲಿದ್ದಾರೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸುವುದರಿಂದ ದೇಶ ಹಾಗೂ ರಾಜ್ಯದ ಯುವಕರಲ್ಲಿ ಹುರುಪು ಹಾಗೂ ಉತ್ಸಾಹ ತುಂಬಲಿದೆ. ಅಖಿಲ ಭಾರತ ಯುವಜನೋತ್ಸವ ಪ್ರಥಮ ಬಾರಿಗೆ ಈ ಭಾಗದಲ್ಲಿ ಒಂದು ವಾರಗಳ ಕಾಲ ನಡೆಯಲಿದೆ. ಭಾರತದ ಜನಸಂಖ್ಯಾ ಲಾಭವನ್ನು ಪ್ರಧಾನಿಗಳು ತಿಳಿಸಿದ್ದಾರೆ. ಜನಸಂಖ್ಯೆ ಅಭಿವೃದ್ಧಿಗೆ ಮಾರಕ ಎನ್ನುತ್ತಿದ್ದುದನ್ನು ಪರಿವರ್ತಿಸಿ ಜನಸಂಖ್ಯೆಯನ್ನು ಬಳಸಿಕೊಂಡು ದೇಶ ಕಟ್ಟಬಹುದು. ಶೇ 40 ರಷ್ಟು ಯುವಜನಾಂಗವಿರುವ ದೇಶದಲ್ಲಿ ಅವರಿಗೆ ಕೌಶಲ್ಯ ತರಬೇತಿ ನೀಡಿ ಅವಕಾಶ ಕಲ್ಪಿಸಿದರೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಮನಗಂಡು ಯುವಕರಿಗೆ ಅಗತ್ಯ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ಪ್ರಧಾನಮಂತ್ರಿ ಗಳು ರೂಪಿಸಿದ್ದಾರೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಥಮ ಬಾರಿಗೆ ಮೂರು ವರ್ಷಗಳ ಲ್ಲಿ ಹಲವಾರು ಡಿಗ್ರಿಗಳನ್ನು ಪಡೆಯಬಹುದಾಗಿದೆ. ಬಹುಮಾಧ್ಯಮ ಶಿಕ್ಷಣವನ್ನು ದೇಶದಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಕೌಶಲ್ಯಾಭಿವೃದ್ಧಿಗೆ ಒತ್ತು
ಕೌಶಲ್ಯಾಭಿವೃದ್ಧಿಗೆ ಸ್ಕಿಲ್ ಇಂಡಿಯಾ, ಮುದ್ರಾ ಯೋಜನೆ, ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಮೂಲಕ ಒಲಂಪಿಕ್ಸ್ ನಲ್ಲಿ ಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ಸಾಧನೆಯಾಗಿದೆ. ಸಂಸ್ಕೃತಿ ವಲಯದಲ್ಲಿಯೂ ಯುವಕರಿಗೆ ಸಮಗ್ರ ಅವಕಾಶ ನೀಡುವ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಹುಬ್ಬಳಿಗೆ ಆಗಮಿಸುವುದರಿಂದ ಯುವಜನೋತ್ಸವ ಯಶಸ್ವಿಯಾಗುವುದು ನಿಶ್ಚಿತ ಎಂದರು.












Click it and Unblock the Notifications