ಅತೃಪ್ತ ಶಾಸಕರಿಗೆ ಕೈ ಉಸ್ತುವಾರಿ ವೇಣುಗೋಪಾಲ್ ಖಡಕ್ ಎಚ್ಚರಿಕೆ
ಬೆಂಗಳೂರು, ಜೂನ್ 14: ಸಚಿವ ಸ್ಥಾನ ಸಿಗದಿದುದ್ದಕ್ಕೆ ಅತೃಪ್ತಗೊಂಡು ಬಣ ನಿರ್ಮಿಸಿಕೊಂಡಿರುವ ಶಾಸಕರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಕುಮಾರಕೃಪದಲ್ಲಿ ಅತೃಪ್ತ ಶಾಸಕರೊಂದಿಗೆ ಸಭೆ ನಡೆಸಿದ ವೇಣುಗೋಪಾಲ್ ಅವರು, 'ಇಂದಿನಿಂದ ಯಾವುದೇ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸುವಂತಿಲ್ಲ, ನಡೆಸಿದರೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.
ಸಚಿವ ಸ್ಥಾನ ಕೈತಪ್ಪಿರುವವರಲ್ಲಿ ಬಹಳಷ್ಟು ಜನ ಅರ್ಹರಿದ್ದಾರೆ ಎಂದಿರುವ ಅವರು, ಈಗ ಸಚಿವ ಸ್ಥಾನ ತ್ಪಪಿರುವವರಿಗೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈಗ ಅಧಿಕಾರ ಸ್ವೀಕರಿಸಿರುವ ಸಚಿವರ ಕಾರ್ಯವೈಖರಿಯನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ತೃಪ್ತಿ ತರಲಿಲ್ಲವೆಂದರೆ ಅಂಥಹವರನ್ನು ಬದಲಾವಣೆ ಮಾಡಿ ಬೇರೆ ಅವರಿಗೆ ಅವಕಾಶ ನೀಡಲಾಗುವುದು ಎಂದು ವೇಣುಗೋಪಾಲ್ ಹೇಳಿದ್ದಾರೆ.
ಅತೃಪ್ತ ಶಾಸಕರ ಸಭೆಯಲ್ಲಿ ಎಂ.ಬಿ.ಪಾಟೀಲ್, ಎಂಟಿಬಿ ನಾಗರಾಜು, ಡಾ.ಸುಧಾಕರ್, ವಿ.ಮುನಿಯಪ್ಪ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಇನ್ನೂ ಕೆಲವರು ಭಾಗವಹಿಸಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು, 'ಅನ್ಯಾಯ ಆಗಿದೆ ಆದರೆ ಸಹಿಸಿಕೊಂಡು ಇರಿ ಎಂಬರ್ಥದ ಮಾತುಗಳನ್ನು ವೇಣುಗೋಪಾಲ್ ಆಡಿದರು' ಎಂದು ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications