ಕರ್ನಾಟಕ ಗಲಭೆ ಪೀಡಿತವಾಗಲಿದೆ ಎಂದ ಶಾಗೆ ಕಾಂಗ್ರೆಸ್ ತಿರುಗೇಟು
ಬೆಳಗಾವಿ, ಏಪ್ರಿಲ್ 26: ಕಾಂಗ್ರೆಸ್ ಬಂದರೆ ಕರ್ನಾಟಕವು ಗಲಭೆಗಳಿಂದ ಪೀಡಿತವಾಗಲಿದೆ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಬುಧವಾರ ಚುನಾವಣಾ ಪ್ರಚಾರದ ಸಮಯದಲ್ಲಿ ಕನ್ನಡಿಗರಿಗೆ ಶಾ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದೆ.
ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸರ್ಕಾರ ರಚಿಸಿದರೆ ರಾಜ್ಯದ ಅಭಿವೃದ್ಧಿ ರಿವರ್ಸ್ ಗೇರ್ ಆಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಂಶಾಡಳಿತದ ರಾಜಕೀಯವು ಸಾರ್ವಕಾಲಿಕ ಉತ್ತುಂಗದಲ್ಲಿರುತ್ತದೆ ಮತ್ತು ಕರ್ನಾಟಕವು ಗಲಭೆಗಳಿಂದ ಪೀಡಿತವಾಗಲಿದೆ ಎಂದು ಗೃಹ ಸಚಿವರು ಹೇಳಿದ್ದರು.

ಅಮಿತ್ ಶಾಗೆ ತಿರುಗೇಟು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇದೊಂದು ಬೆದರಿಸುವ ಹೇಳಿಕೆಯಾಗಿದೆ. ಭಾರತದ ಮೊಟ್ಟಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟ ಸಂಘಟನೆಯೊಂದಕ್ಕೆ ನಿಷ್ಠರಾಗಿರುವ ಕೇಂದ್ರ ಗೃಹ ಸಚಿವರು ಈಗ ಚುನಾವಣಾ ಪ್ರಚಾರದ ಸಮಯದಲ್ಲಿ ದಿಟ್ಟಿಸಿ ನೋಡಿದಾಗ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಂಬರುವ ಕರ್ನಾಟಕ ಚುನಾವಣೆ ಕೇವಲ ಶಾಸಕರನ್ನು ಆಯ್ಕೆ ಮಾಡಲು ಮಾತ್ರವಲ್ಲದೆ ರಾಜ್ಯದ ಭವಿಷ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ಒಪ್ಪಿಸಲು ಮತ ಹಾಕಿ ಎಂದು ಹೇಳಿದ್ದ ಅಮಿತ್ ಶಾ ಅವರ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಮಂಗಳವಾರ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಶಾ ಅವರ ಹೇಳಿಕೆ 6.5 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ವಿರೋಧ ಪಕ್ಷ ಆರೋಪಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಪಿಎಫ್‌ಐ ನಿಷೇಧ ವಾಪಸ್ ಪಡೆಯುತ್ತಾರೆ. ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ಮಾಡಿಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಸಹ ಹೇಳಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಸನ್ಮಾನ್ಯ ಗೃಹ ಸಚಿವ ಅಮಿತ್ ಶಾ ಅವರು ಒಂದೋ ತಮ್ಮ ಸುಳ್ಳು ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವೇ ತಾವು ಹೇಳಿದ್ದು ಸುಳ್ಳು ಎಂದು ಕ್ಷಮೆ ಕೇಳಬೇಕು. ರಾಜ್ಯದಲ್ಲಿ ಬಿಜೆಪಿ ಪಕ್ಷದ್ದೇ ಸರ್ಕಾರ ಇದೆ. ಯಾವ ಪಿಎಫ್‌ಐ ಕಾರ್ಯಕರ್ತರ ಮೊಕದ್ದಮೆಗಳನ್ನು ನಮ್ಮ ಸರ್ಕಾರ ವಾಪಾಸ್ ಪಡೆದಿದೆ ಎನ್ನುವುದನ್ನು ಕಡತ ನೋಡಿ ತಿಳಿದುಕೊಳ್ಳಲು ಅಮಿತ್ ಶಾ ಅವರಿಗೇನು ದಾಡಿ? ಸುಮ್ಮನೆ ಸುಳ್ಳು ಉಗುಳುವುದು ಯಾಕೆ?" ಎಂದು ಪ್ರಶ್ನಿಸಿದ್ದರು.












Click it and Unblock the Notifications