ಮೋಸ ಮಾಡಿದ್ದ ಕಾಂಗ್ರೆಸ್ಗೆ ಚುನಾವಣೆ ವೇಳೆ ಲಿಂಗಾಯತರ ಮೇಲೆ ಅಪಾರ ಪ್ರೀತಿ: ಸಿಎಂ ಬೊಮ್ಮಾಯಿ ಕಿಡಿ
ಬಾಗಲಕೋಟೆ, ಏಪ್ರಿಲ್ 18: ಕರ್ನಾಟಕದಲ್ಲಿ ಲಿಂಗಾಯತ ಜಾಗೃತ ಮತದಾರರಿದ್ದು, ಅವರು ಅವರು ಸಕಾಲಕ್ಕೆ ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಚುನಾವಣೆ ಬಂದ ಮೇಲೆ ಕಾಂಗ್ರೆಸ್‌ನ ಲಿಂಗಾತಯರ ಮೇಲೆ ಪ್ರೀತಿ ತೋರಿಸುತ್ತಿದೆ. ಕಾಂಗ್ರೆಸ್ ಲಿಂಗಾಯತರನ್ನೇ ಒಡೆದು ಛಿದ್ರ ಮಾಡಲು ಹೊರಟಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಮಂಗಳವಾರ ನಡೆದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಹೆಲಿಪ್ಯಾಡ್ ಬಳಿ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು. ಕಾಂಗ್ರೆಸ್ ನ ಒಡೆದು ಆಳುವ ನೀತಿ ಅನಸರಿಸುತ್ತದೆ. ಅದನ್ನು ಯಾರೂ ಎಂದಿಗೂ ಮರೆಯುವಂತಿಲ್ಲ ಎಂದರು.

ಹಿಂದೆ ಲಿಂಗಾಯತರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ವಿರೋಧ ಮಾಡಿತ್ತು. 2009ರಲ್ಲಿ 2ಎ ಸೇರಿಸಲು ವಿರೋಧಿಸಿ, 2016ರಲ್ಲಿ ಅದನ್ನು ತಿರಸ್ಕಾರ ಮಾಡಿದ್ದರು. ನಾವು 2 ಡಿ ವರ್ಗ ರಚನೆ ಮಾಡಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದೆವು. ಈಗ ಪರೋಕ್ಷವಾಗಿ ಕುಮ್ಮಕ್ಕು ನೀಡಿ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ಪ್ರಕರಣ ದಾಖಲಿಸಿದ್ದಾರೆ. ಲಿಂಗಾಯತರ ಪ್ರತಿ ಅಭಿವೃದ್ಧಿಯಲ್ಲೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಸಿದ್ದರಾಮಯ್ಯ ಕಾಲದಲ್ಲಿ ಇದ್ದ ಜಿಲೇಬಿ ಫೈಲ್ ಯಾರೂ ಮರೆಯಲ್ಲ ಎಂದು ಅವರು ಲೇವಡಿ ಮಾಡಿದರು.
ಲಿಂಗಾಯತರನ್ನು ಮುಖ್ಯಮಂತ್ರಿ ಆಗಿ ಮಾಡಲಿಲ್ಲ
ಕೃಷ್ಣ ಭಾಗದಲ್ಲಿ ಕಾಂಗ್ರೆಸ್‌ನಿಂದ ಒಂದು ಎಕರೆ ಭೂಮಿಗೆ ನೀರು ಕೊಡುವುದಕ್ಕೆ ಆಗಲಿಲ್ಲ. ಇಲ್ಲಿ ಯಾವ ರೀತಿಯ ರೈತರಿದ್ದಾರೆ ಎಂಬುದೇ ಗೊತ್ತಿಲ್ಲ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಆಡಳಿತಾತ್ಮಕವಾಗಿ ಯಾರಿದ್ದಾರೆ. ಮಂತ್ರಿಮಂಡಲದಲ್ಲಿ ಎಷ್ಟು ಜನರು ಇದ್ದಾರೆ ಎನ್ನುವುದನ್ನು ರಾಜ್ಯದ ಜನರು ಗಮಿನಿಸುತ್ತಾರೆ.
1967ರ ನಂತರ ವೀರೇಂದ್ರ ಪಾಟೀಲರನ್ನು ಬಿಟ್ಟರೆ, ಬೇರೆ ಯಾರು ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಅವರನ್ನು ಕೂಡಾ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ರಾಜಶೇಖರಮೂರ್ತಿ, ವಿರೂಪಾಕ್ಷಪ್ಪನವರ ಕಥೆ ಏನಾಯಿತು. ಈಗ ಎಸ್. ಆರ್ ಪಾಟೀಲರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

ಬಿಜೆಪಿ ಯಾರ ಕಪಿಮುಷ್ಠಿಯಲ್ಲಿ ಇಲ್ಲ: ಬೊಮ್ಮಾಯಿ
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಒಬ್ಬರ ಹಿಡಿತದಲ್ಲಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಬಿಜೆಪಿ ಸರ್ವೊಚ್ಚ ನಾಯಕ ಮೋದಿ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಮೇಲಿದೆ. ಆರೋಪ ಮಾಡುತ್ತಿರುವವರು ಈ ಹಿಂದೆ ಒಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದರಲ್ಲವೇ? ಎಂದು ಅವರು ಪ್ರಶ್ನಿಸಿದರು.
ಬಾಗಲಕೋಟೆ ಜಿಲ್ಲೆ ಸುತ್ತಮುತ್ತಲಿನ ಭಾಗ ಅಭಿವೃದ್ಧಿಯಾಗಿದ್ದು ಬಿಜೆಪಿ ಪಕ್ಷಯಿಂದ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅಭಿವೃದ್ಧಿ ಮಾಡಿ ಸಾಮಾಜಿಕ ನ್ಯಾಯವನ್ನು ಬಿಜೆಪಿ ಪಕ್ಷ ಕೊಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಯಾರೇ ಹೋದರು ಯಾವುದೇ ಪರಿಣಾಮ ಆಗುವುದಿಲ್ಲ. ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ ಬಿಜೆಪಿ ಅಭ್ಯರ್ಥಿಗಳ ಪರ ನಟ ಸುದೀಪ್ ಪ್ರಚಾರದ ಬಗ್ಗೆ ರೂಪುರೇಷೆ ಪೂರ್ಣ ಆಗಿಲ್ಲ. ನಾಳೆ ಸುದೀಪ್ ಪ್ರಚಾರದ ಬಗ್ಗೆ ರೂಪುರೇಷೆ ಮಾಡುತ್ತೇವೆ. ಬಳಿಕ ಸುದೀಪ್ ಎಲ್ಲ ಕಡೆಯೂ ಪ್ರಚಾರಕ್ಕೆ ಬರುತ್ತಾರೆ ಎಂದು ಅವರು ತಿಳಿಸಿದರು.












Click it and Unblock the Notifications