Congress Guarantee: ಲೈಂಗಿಕ ಅಲ್ಪ ಸಂಖ್ಯಾತರಿಗೂ ಯುವ ನಿಧಿ: ಉಚಿತ ಯೋಜನೆಗೆ ಯಾವ್ಯಾವ ಪದವೀಧರರು ಅರ್ಹರು?
ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ ಜಾರಿ ಮಾಡಿ ಘೋಷಣೆ ಮಾಡಿದ್ದಾರೆ. ಇಂದು(ಜೂನ್ 02) ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಬಗ್ಗೆ ವಿವರಿಸಿದ್ದಾರೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿಗಳಿಗೆ ಸಹಾಯ ಧನ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯ ಬಗ್ಗೆ ವಿವರಿಸಿದ್ದು, ಯಾರ್ಯಾರು ಯುವನಿಧಿ ಯೋಜನೆಯ ಲಾಭ ಪಡೆಯಬಹುದು ಎಂದು ವಿವರಿಸಿದ್ದಾರೆ.

2022-23ರ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಉತ್ತೀರ್ಣರಾಗಿ ನಿರುದ್ಯೋಗಿಗಳಾಗಿದ್ದರೆ ಅಂತವರಿಗೆ ಯುವನಿಧಿ ಯೋಜನೆ ಅಡಿಯಲ್ಲಿ ತಿಂಗಳಿಗೆ 3,000 ರೂಪಾಯಿ ನೀಡಲಾಗುತ್ತದೆ. ಬಿಎ, ಬಿಎಸ್ಸಿ, ಬಿಕಾಂ ಪದವೀಧರ ನಿರುದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ. 2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿರುವ ಎಲ್ಲಾ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3000 ರೂಪಾಯಿ ಡಿಪ್ಲೋಮಾ ಪದವಿ ಪಡೆದವರಿಗೆ 1500 ರೂಪಾಯಿ ಸರ್ಕಾರದಿಂದ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಪದವೀಧರರು 24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಆಗ ಹಣ ಪಾವತಿ ಇಲ್ಲ. ನಿರುದ್ಯೋಗಿ ಎಂದು ಅರ್ಜಿ ಹಾಕಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಹಣ ಸಿಗಲಿದೆ . ನೋಂದಣಿ ಮಾಡಿಕೊಂಡ 24 ತಿಂಗಳವರೆಗೆ ಪಾವತಿ ಮಾಡಲಾಗುತ್ತದೆ. ಲೈಂಗಿಕ ಅಲ್ಪ ಸಂಖ್ಯಾತರಿಗೂ ಕೂಡಾ ಯುವ ನಿಧಿ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇನ್ನು ಯುವ ನಿಧಿ ಅರ್ಜಿ ಸಲ್ಲಿಕೆಗೆ ಅರ್ಜಿ ಕರೆದ 6 ತಿಂಗಳವರೆಗೆ ಅವಕಾಶ ಇರಲಿದೆ. ಸರ್ಕಾರದ ಉಚಿತ ಯೋಜನೆಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳದಂತೆ. ತಡೆಯಲು ಕೆಲವು ಷರತ್ತುಗಳನ್ನು ವಿಧಿಸುತ್ತಿದ್ದೇವೆ. ನೋಂದಣಿ ಮಾಡಿಕೊಂಡ 24 ತಿಂಗಳವರೆಗೆ ಪಾವತಿ ಮಾಡಲಾಗುತ್ತದೆ. ಒಂದು ವೇಳೆ ಫಲಾನುಭಾವಿಗಳು ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ. ಅಂಥವರಿಗೆ ಯುವನಿಧಿ ಯೋಜನೆ ಹಣ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications