ಕಾಂಗ್ರೆಸ್ ಅಧಿಕಾರಕ್ಕೆ ಬಂತು: ಈ ತಿಂಗಳು ಕರೆಂಟ್ ಬಿಲ್ ಕಟ್ಬೇಕಾ, ಬೇಡ್ವಾ?
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ. ಸದ್ಯ ಸಿಎಂ ಯಾರಾಗಬೇಕು ಎನ್ನುವ ಗೊಂದಲ ಎದುರಾಗಿದ್ದು, ಅತಿ ಶೀಘ್ರದಲ್ಲೇ ಹೈಕಮಾಂಡ್ ಸಿಎಂ ಹೆಸರು ಘೋಷಣೆ ಮಾಡಲಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಸಿಎಂ ಗದ್ದುಗೆ ಏರಲು ಸಿದ್ದವಾಗಿದ್ದಾರೆ.
ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಸಿಎಂ ಆಯ್ಕೆ ಬಗ್ಗೆ ಟೆನ್ಷನ್ ಆದರೆ, ಇತ್ತ ಕಡೆ ಜನಕ್ಕೆ ಈ ತಿಂಗಲು ವಿದ್ಯುತ್ ಬಿಲ್ ಕಟ್ಬೇಕಾ ಬೇಡ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿತ್ತು. ಇದರ ಜೊತೆಗೆ ಮನೆಯೊಡತಿಗೆ 2000 ರುಪಾಯಿ ಹಣ, ನಿರುದ್ಯೋಗಿ ಪದವೀಧರರಿಗೆ ಭತ್ಯೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವರ್ಷಕ್ಕೆ ಐದು ಗ್ಯಾಸ್ ಸಿಲಿಂಡರ್, ಇವು ಕಾಂಗ್ರೆಸ್‌ನ ಜನಪ್ರಿಯ ಘೋಷಣೆಗಳಗಿವೆ.

ಕಾಂಗ್ರೆಸ್ ಸರ್ಕಾರ ಬರೋದು ಖಚಿತವಾದ ನಂತರ, ಈಗ ಕರೆಂಟ್ ಬಿಲ್ ಕಟ್ಟೋ ಬಗ್ಗೆ ತಲೆಕೆಡಿಸಿಕೊಳ್ತಿದ್ದಾರೆ ಜನ. ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದರು ಅದಕ್ಕೆ ಇನ್ನು ಯಾವ ನಿಯಮಗಳಿವೆ ಎಂದು ತಿಳಿದಿಲ್ಲ. 200ಕ್ಕಿಂತ ಹೆಚ್ಚು ಯುನಿಟ್ ಬಳಸಿದರೆ ಏನು ಎನ್ನುವ ಬಗ್ಗೆಯೂ ಯಾವ ಸ್ಪಷ್ಟನೆ ಇಲ್ಲ. ಯಾವ ವರ್ಗದವರಿಗೆ ಉಚಿತ ವಿದ್ಯುತ್ ಎಂದು ಸ್ಪಷ್ಟವಾಗಿ ಹೇಳಿಲ್ಲ.
ಆಸಕ್ತಿಕರ ವಿಚಾರ ಎಂದರೆ, ಬಸವರಾಜ ಬೊಮ್ಮಾಯಿ ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಅಮರ್ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಅನ್ನು ಘೋಷಣೆ ಮಾಡಿದ್ದರು.
ಜೂನ್ 1ರಿಂದ ವಿದ್ಯುತ್ ಬಿಲ್ ಕಟ್ಬೇಡಿ ಎಂದಿದ್ದರು ಡಿಕೆಶಿ
ಚುನಾವಣಾ ಪ್ರಚಾರದಲ್ಲಿ ಮಾತನಾಡುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಜೂನ್ 1ರಿಂದ ನಿಮ್ಮ ಮನೆ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಹೇಳಿದ್ದರು. ಮಳವಳ್ಳಿಯಲ್ಲಿ ಚುನಾವಣಾ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್ ಮೇ 15ರಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ, ಜೂನ್ 1ರಿಂದ ನೀವು ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎಂದು ಹೇಳಿಕೆ ನೀಡಿದ್ದರು.
ಕೆಪಿಸಿಸಿ ಹಂಚಿಕೊಂಡಿದ್ದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಾತುಕತೆಯ ವಿಡಿಯೋದಲ್ಲಿ ಕೂಡ ಉಭಯ ನಾಯಕರು ಸರ್ಕಾರ ರಚನೆಯಾದ ನಂತರ ನಡೆಯುವ ಮೊದಲ ಕ್ಯಾಬಿನೆಟ್ ಮೀಟಿಂಗ್‌ನಲ್ಲೇ ಉಚಿತ ಭರವಸೆಗಳನ್ನು ಈಡೇರಿಸಲು ನಿರ್ಧಾರ ಮಾಡಿದ್ದರು. ಇವರ ಮಾತುಗಳನ್ನ ನಂಬುವುದಾದರೆ ಜೂನ್ ಅಥವಾ ಜುಲೈನಿಂದ ವಿದ್ಯುತ್ ಬಿಲ್ ಕಟ್ಟುವುದು ಬಂದ್ ಆಗಲಿದೆ. ಮುಖ್ಯಮಂತ್ರಿ ಆಯ್ಕೆ ಮಾಡಿ, ಸರ್ಕಾರ ರಚನೆಯಾದ ಬಳಿಕವಷ್ಟೇ ಇದೆಲ್ಲಾ ಅನುಷ್ಠಾನಕ್ಕೆ ಬರಲಿದೆ, ಅಲ್ಲಿಯವರೆಗೂ ನೀವು ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.











Click it and Unblock the Notifications