ರೈತರಿಗೆ ₹2,000 ಬರ ಪರಿಹಾರ ನೀಡದೇ ಕಾಲಹರಣ: ಬಿಜೆಪಿ ನೆರವಿನ ಲೆಕ್ಕ ಕೊಟ್ಟ ಆರ್.ಅಶೋಕ್
ಬೆಂಗಳೂರು, ಡಿಸೆಂಬರ್ 28: ಬರಗಾದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ₹2000 ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿ ಒಂದು ತಿಂಗಳು ಕಳೆದಿದ್ದರೂ ಹಣ ಬಿಡುಗಡೆ ಆಗಿಲ್ಲ. ಸರ್ಕಾರ ಮೀನ-ಮೇಷ ಎಣಿಸುತ್ತಿದೆ. ಕೇಂದ್ರದತ್ತ ಬೊಟ್ಟು ಮಾಡಿ ಕಾಲಹರಣ ಮಾಡುತ್ತಿದೆ. ಇದು ಲಜ್ಜೆಗೆಟ್ಟ ಸರ್ಕಾರ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಸರಣಿ ಟ್ವೀಟ್ ಮಾಡಿರುವ ಆರ್. ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರೈತರ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಸಾಲಮನ್ನಾ ಆಸೆಗಾಗಿ ಬರಗಾಲ ಬರಲಿ ಎಂದು ರೈತರು ಬಯಸುತ್ತಿದ್ದಾರೆ ಎಂದಿದ್ದಾರೆ. ರೈತರಿಗೆ ಅಪಮಾನ ಮಾಡುವ ಜೊತೆಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಕಾಲಹರಣ ಮಾಡುತ್ತಿದೆಯೇ ಹೊರತು ರೈತರ ನೆರವಿಗೆ ಬರುವ ಉದ್ದೇಶವೇ ಇಲ್ಲದಾಗಿದೆ ಎಂದು ಗುಡುಗಿದರು.

ಬಿ.ಎಸ್.ಯಡಿಯೂರಪ್ಪನವರು (2019) ಸಿಎಂ ಆಗಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಆಗ ಯಡಿಯೂರಪ್ಪನವರೇ ಸ್ವತಃ ಪ್ರವಾಸ ಕೈಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ SDRF ಅನ್ವಯ ನೀಡುವ ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಿದರು.
ಬಿಜೆಪಿಯಿಂದ ರೈತರಿಗೆ ನೆರವು: ಲೆಕ್ಕ ಕೊಟ್ಟ ಆರ್.ಅಶೋಕ್
ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡ ರೈತಸ್ನೇಹಿ ಪರಿಹಾರ ಕ್ರಮದ ಬಗ್ಗೆ ಆರ್.ಅಶೋಕ ಸರ್ಕಾರಕ್ಕೆ ನೆನಪಿಸಿದ್ದಾರೆ. ನಾನು ಕಂದಾಯ ಸಚಿವನಾಗಿದ್ದಾಗ 2022 ನೇ ಸಾಲಿನಲ್ಲಿ 13,09,421 ಹೆಕ್ಟೇರ್ ಬೆಳೆ ಹಾನಿಯಾಗಿತ್ತು. 14,62,841 ರೈತರ ಬ್ಯಾಂಕ್ ಖಾತೆಗೆ ₹2031.15 ಕೋಟಿ ಇನ್‌ಪುಟ್ ಸಬ್ಸಿಡಿ ನೀಡಲಾಯಿತು.
ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ₹6,800 ಕೊಟ್ಟು, ಒಟ್ಟು ₹13,600 ನೀಡಲಾಯಿತು. ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ ₹11,500 ಸೇರಿಸಿ ಒಟ್ಟು ₹25,000 ನೀಡಲಾಯಿತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ₹10,000 ಸೇರಿಸಿ ಒಟ್ಟು ₹28,000 ರೂ. ನೀಡಲಾಯಿತು ಎಂದು ತಿಳಿಸಿದ್ದಾರೆ.

ಆದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ. ಅದು ಇನ್ನೂ ರೈತರಿಗೆ ತಲುಪಿಲ್ಲ. 2021ರಲ್ಲಿ 14,93,811 ಹೆಕ್ಟೇರ್ ಬೆಳೆಹಾನಿಯಾಗಿತ್ತು. 18,56,083 ಫಲಾನುಭವಿಗಳಿಗೆ ₹2446.10 ಕೋಟಿ ಪರಿಹಾರ ನೀಡಲಾಗಿತ್ತು. 2022 ರಲ್ಲಿ 13,09,421, ಹೆಕ್ಟೇರ್ ಬೆಳೆಹಾನಿ ಆಗಿತ್ತು. 14,62,841 ಫಲಾನುಭವಿಗಳಿಗೆ ₹2031.15 ಕೋಟಿ ಪರಿಹಾರ ನೀಡಲಾಗಿತ್ತು ಎಂದು ನೆನಪಿಸಿದ್ದಾರೆ.
ಬರ ಪರಿಹಾರದಲ್ಲಿ ರೈತರಿಗೆ ಕಾಂಗ್ರೆಸ್ ಅನ್ಯಾಯ
ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ರೈತರಿಗೆ ಬರ ಪರಿಹಾರ ವಿಷಯದಲ್ಲಿ ಇದೇ ರೀತಿ ಅನ್ಯಾಯವಾಗುತ್ತದೆ. 2013-14ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜುಲೈ-ಆಗಸ್ಟ್ ಅವಧಿಯ ಮುಂಗಾರಿನ ಬರಗಾಲದಲ್ಲಿ ಪರಿಹಾರ ನೀಡಿತ್ತು. 2014 ರ ಏಪ್ರಿಲ್‌ನಿಂದ ಇನ್‌ಪುಟ್ ಸಬ್ಸಿಡಿ ಪಾವತಿ ಶುರುವಾಗಿತ್ತು. ಅದಕ್ಕೆ ತೆಗೆದುಕೊಂಡ ಅವಧಿ 9 ತಿಂಗಳು! ಎಂದು ಬೇಸರ ವ್ಯಕ್ತಪಡಿದ್ದಾರೆ.
2014-15 ರ ಸಾಲಿನಲ್ಲಿ ಇದೇ ಸಿದ್ದರಾಮಯ್ಯನವರ ಸರ್ಕಾರ 2014ರ ಜುಲೈ-ಆಗಸ್ಟ್ ಅವಧಿಯ ಬರಗಾಲಕ್ಕೆ ಪರಿಹಾರ ನೀಡಲು, 2015 ಮಾರ್ಚ್‌ನಿಂದ ಇನ್‌ಪುಟ್ ಸಬ್ಸಿಡಿ ಪಾವತಿ ಶುರು ಮಾಡಿತ್ತು. ಅಂದರೆ ಇದಕ್ಕೆ ತೆಗೆದುಕೊಂಡ ಅವಧಿ 8 ತಿಂಗಳು! ಈ ಬಾರಿಯೂ ಪರಿಹಾರ ಕೊಡುವಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ತಡ ಮಾಡಿದೆ. ಜೂನ್ ತಿಂಗಳಿನಲ್ಲಿ ಆರಂಭವಾದ ಬರಕ್ಕೆ ಸಂಕ್ರಾಂತಿ ಬಂದರೂ ಇನ್ನೂ ಒಂದು ನಯಾ ಪೈಸೆ ನೆರವು ನೀಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ತ್ವರಿತಗತಿಯಲ್ಲಿ ಬಿಜೆಪಿ ನೆರವಿಗೆ ಧಾವಿಸಿತ್ತು
2019-20 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ, ವಿಕೋಪ ಉಂಟಾದಾಗ ಇನ್‌ಪುಟ್ ಸಬ್ಸಿಡಿ ಪಾವತಿ ಶುರು ಮಾಡಲಾಗಿತ್ತು. ಎರಡೇ ತಿಂಗಳಲ್ಲಿ ಸಬ್ಸಡಿ ನೀಡಲಾಗಿತ್ತು. 2020-21 ರ ಸಾಲಿನಲ್ಲಿ, 2020ರ ಆಗಸ್ಟ್-ಅಕ್ಟೋಬರ್‌ನಲ್ಲಿ ಪ್ರವಾಹ ಉಂಟಾಗಿತ್ತು. ಆಗ ಅಕ್ಟೋಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಗಿತ್ತು. ತೆಗೆದುಕೊಂಡ ಅವಧಿ 2 ತಿಂಗಳು.
ಅದರ ನಂತರ 2021-22 ಹಾಗೂ 2022-23 ನೇ ಸಾಲಿನಲ್ಲಿ ಪ್ರವಾಹವಾದಾಗ ಜುಲೈನಿಂದ ಪರಿಹಾರ ವಿತರಣೆ ಶುರು ಮಾಡಲಾಯಿತು. ಒಂದೇ ತಿಂಗಳ ಅವಧಿಯಲ್ಲಿ ಪರಿಹಾರ ನೀಡಲಾಗಿತ್ತು ಎಂದು ಅವರು ಬಿಜೆಪಿ ಕಾರ್ಯ ಸ್ಮರಿಸಿದರು. ಇಂದಿನ ಸರ್ಕಾರದ ಆಡಳಿತ ನೋಡಿದರೆ ರೈತರ ನೆರವಿಗೆ ಭಾರದೇ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಹೇಗೆ ಎನ್ನುವುದೇ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಮುಖ್ಯ ಎಂದು ಆರ್.ಅಶೋಕ ಚಾಟಿ ಬೀಸಿದರು.
ಮೋದಿ ಸರ್ಕಾರದಿಂದ ಅತ್ಯಧಿಕ ನೆರವು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕರ್ನಾಟಕಕ್ಕೆ ಅತ್ಯಧಿಕ ನೆರವು ನೀಡಿದೆ. 2006-2014 ರ ಅವಧಿಯಲ್ಲಿ ಯುಪಿಎ ಸರ್ಕಾರವಿದ್ದಾಗ SDRF ನಡಿ, ಕೇಂದ್ರದ ಪಾಲು 812 ಕೋಟಿ ರೂ. ಹಾಗೂ ರಾಜ್ಯದ ಪಾಲು 271 ಕೋಟಿ ರೂ. ಸಿಕ್ಕಿತ್ತು. NDRF ನಿಂದ ₹3,233 ಕೋಟಿ ನೆರವು ನೀಡಲಾಗಿತ್ತು.
2014-2022 ರಲ್ಲಿ ಕೇಂದ್ರ ಸರ್ಕಾರ ಅಧಿಕ ಪರಿಹಾರವನ್ನು ಕರ್ನಾಟಕಕ್ಕೆ ಕೊಟ್ಟಿದೆ. ಆಗ SDRF ನಡಿ, ಕೇಂದ್ರದ ಪಾಲು 2,557 ಕೋಟಿ ರೂ. ಹಾಗೂ ರಾಜ್ಯದ ಪಾಲು 852 ಕೋಟಿ ರೂ. ಧಕ್ಕಿತ್ತು. ಇದೇ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ-NDRF ನಿಂದ ಸಿಕ್ಕಿದ್ದು ಬರೊಬ್ಬರಿ ₹11,603 ಕೋಟಿ ಎಂದು ಅವರು ವಿವರಿಸಿದರು. ಸಿಎಂ ಸಿದ್ದರಾಮಯ್ಯ ರಾಜಕೀಯ ಬದಿಗಿಟ್ಟು ಅನ್ನದಾತರ ನೆರವಿಗೆ ಧಾವಿಸಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications