ಗ್ಯಾರಂಟಿಗಳ ಜಾರಿ ಮೂಲಕ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿದೆ, ಇದು ಚಾರಿತ್ರಿಕ ಎಂದ ಎಂಬಿಪಾ
ಬೆಂಗಳೂರು, ಜೂನ್ 02: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾದ ಐದು ಗ್ಯಾರಂಟಿಗಳು ಇಂದು ಶುಕ್ರವಾರ (ಜೂನ್ 02) ರಂದು ಜಾರಿಗೊಂಡಿವೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ಜನರು ಯೋಜನೆಯ ಲಾಭ ಪಡೆಯಲಿದ್ದು, ಗ್ಯಾರಂಟಿ ಜಾರಿಯಾದ ಈ ದಿನವನ್ನು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಮ್ಮದೇ ಆದ ರೀತಿಯಲ್ಲಿ ಬಣ್ಣಸಿದ್ದಾರೆ.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಹೇಳಿದ್ದೆವು. ಈಗ ಆ ಮಾತನ್ನು ಉಳಿಸಿಕೊಂಡಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಜನಪರ ಬದ್ಧತೆಗೆ ದೊಡ್ಡ ನಿದರ್ಶನವಾಗಿದೆ. ಈ ಬಗ್ಗೆ ಅಪಪ್ರಚಾರದಲ್ಲಿ ನಿರತವಾಗಿದ್ದ ಬಿಜೆಪಿ ಇನ್ನಾದರೂ ಮೌನದಿಂದ ಇರುವುದನ್ನು ಕಲಿಯಬೇಕು ಎಂದು ಹೇಳಿದರು.

ರಾಜ್ಯ ಸರಕಾರವು ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರದ ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೇವಲ ಎರಡು ವಾರಗಳಲ್ಲಿ ನಮ್ಮ ಇಚ್ಛಾಶಕ್ತಿಯನ್ನು ತೋರಿಸಿದ್ದೇವೆ. ಈ ಐದೂ ಗ್ಯಾರಂಟಿಗಳ ಅನುಷ್ಠಾನದ ಮೂಲಕ ರಾಜ್ಯದ ಜನತೆಯ ಸಬಲೀಕರಣ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಲಿದೆ ಎಂದ ಹರ್ಷ ವ್ಯಕ್ತಪಡಿಸಿದರು.
ನಮಗೆ ಪಕ್ಷ ಕೊಟ್ಟ ಮಾತನ್ನು ಪಾಲಿಸುವುದು ಕಾಂಗ್ರೆಸ್ಸಿಗೆ ಧರ್ಮವಿದ್ದಂತೆ. ಚುನಾವಣೆಗೆ ಮುಂಚೆ ಏನನ್ನು ಹೇಳಿದ್ದೆವೋ ಅದನ್ನೀಗ ಮಾಡಿ ತೋರಿಸಿದ್ದೇವೆ. ಇವೆಲ್ಲವೂ ಈಗ ನಿಗದಿಪಡಿಸಿರುವ ದಿನಾಂಕದಿಂದ ಪೂರ್ಣಪ್ರಮಾಣದಲ್ಲಿ ಮತ್ತು ಸಮರ್ಪಕವಾಗಿ ಜಾರಿಗೆ ಬರಲಿವೆ. ಜನರನ್ನು ದಾರಿ ತಪ್ಪಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ ಬಿಜೆಪಿ ಇನ್ನಾದರೂ ರಚನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಗ್ಯಾರಂಟಿಗಳ ಜಾರಿಯು ರಾಜ್ಯದ ಬೊಕ್ಕಸಕ್ಕೇನೂ ಹೊರೆಯಾಗುವುದಿಲ್ಲ. ಜನರ ಕಲ್ಯಾಣ ಮತ್ತು ಆರ್ಥಿಕ ಅಭಿವೃದ್ಧಿ ಎರಡನ್ನೂ ನಾವು ಸಮತೋಲನದಿಂದ ನಡೆಸಿಕೊಂಡು ಹೋಗಲಿದ್ದೇವೆ. ಇಂದಿನ ನಿರ್ಧಾರವು ರಾಜ್ಯದ ರಾಜಕಾರಣದ ಚರಿತ್ರೆಯಲ್ಲಿ ಅವಿಸ್ಮರಣೀಯವಾಗಿ ಉಳಿಯಲಿದೆ ಎಂದು ಪಾಟೀಲ್ ತಿಳಿಸಿದರು.

ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಬಹುನಿರೀಕ್ಷೆಯ ಐದು ಗ್ಯಾರಂಟಿಗಳು ಇಂದು ಜಾರಿಯಾಗಿವೆ. ಯುವನಿಧಿ ಯೋಜನೆಯಡಿ ಪದವೀಧರರು ಎರಡು ವರ್ಷದೊಳಗೆ ಒಳಗೆ ಎಲ್ಲಿಯಾದರೂ ಉದ್ಯೋಗ ಮಾಡುತ್ತಿದ್ದರೆ ಅಂತವರಿಗೆ ಹಣ ದೊರಕುವುದಿಲ್ಲ. ಯೋಜನೆ ಲಾಭ ಪಡೆಯಲು ಅರ್ಹರು ನಿರುದ್ಯೋಗಿಗಳು ಅರ್ಜಿ ಹಾಕಿ ನೋಂದಣಿ ಸಲ್ಲಿಸುವ ಪ್ರಕ್ರಿಯೆ ಶೀಘ್ರವೇ ಆರಂಭವಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಲೈಂಗಿಕ ಅಲ್ಪ ಸಂಖ್ಯಾತರಿಗೂ ಯುವನಿಧಿ ಯೋಜನೆ ಅನ್ವಯಿಸಲಿದೆ.
ಇದರೊಂದಿಗೆ ಎಪಿಎಲ್, ಅಂತೋದಯ ಪಡಿತರ ಚೀಟಿ ಹೊಂದಿದವರಿಗೆ ತಲಾ ಪಡಿತರ ಪ್ರತಿ ಸದಸ್ಯರಿಗೆ ತಲಾ 10 ಕೇಜಿ ಅಕ್ಕಿ ನೀಡುವ ಅನ್ನಭಾಗ್ಯ, ಮನೆ ಯಜಮಾನಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ನೀಡುವ ಗೃಹಜ್ಯೋತಿ, ಮಹಿಳೆಯರಿಗೆ ಉಚಿತ ಬಸ್ ಯೋಜನೆಗಳನ್ನು ಸಹ ರಾಜ್ಯ ಸರ್ಕಾರ ಜಾರಿ ಮಾಡಿದೆ ಆದೇಶಿಸಿದೆ.












Click it and Unblock the Notifications