ವಿವಾದಿತ ಟಿಪ್ಪು ಜಯಂತಿ ಕೈಬಿಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ; ಯಾವೆಲ್ಲ ಜಯಂತಿಗಳಿವೆ?
ಬೆಂಗಳೂರು, ಮೇ 24: 2023 ಕರ್ನಾಟಕ ವಿಧಾನಸಭೆ ಚುನಾವನೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳೊಂದಿಗೆ ಬಹುಮತ ಪಡೆದು ಸರ್ಕಾರ ರಚಿಸಿದ್ದರೆ, 66 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕುಳಿತಿದೆ.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವಾದಿತ ಟಿಪ್ಪು ಜಯಂತಿ ಆಚರಣೆ ಕೈ ಬಿಟ್ಟಿದೆ.

ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿರುವ ಕಾಂಗ್ರೆಸ್, ಮತ್ತೆ ಟಿಪ್ಪು ಜಯಂತಿ ಆಚರಿಸಿ ವಿವಾದ ಮೈಮೇಲೆ ಎಳೆದುಕೊಳ್ಳದಿರಲು ತೀರ್ಮಾನಿಸಿದಂತಿದೆ. ಕಳೆದ ಬಾರಿ 2013ರಿಂದ 2018ರವರೆಗೆ ಇದ್ದ ಅಧಿಕಾರವಧಿಯಲ್ಲಿ ಟಿಪ್ಪು ಜಯಂತಿ ಆಚರಿಸಿ ರಾಜ್ಯದಲ್ಲಿ ಹಿಂದೂಗಳ ಆಕ್ಷೇಪಕ್ಕೆ ಕಾರಣವಾಗಿದ್ದರು.
2023ರ ಏಪ್ರಿಲ್‌ನಿಂದ 2024ರ ಮಾರ್ಚ್ ತಿಂಗಳವರೆಗಿನ ಮಹಾಪುರಷರ ಜಯಂತಿ ಹಾಗೂ ಆಚರಣೆ ಕಾರ್ಯಕ್ರಮಗಳ ಒಟ್ಟು 31 ಜಯಂತಿಗಳ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರದ ವತಿಯಿಂದ ಆಚರಿಸುವ ಜಯಂತಿಗಳ ಪಟ್ಟಿ ಹಾಗೂ ಆಚರಿಸುವ ದಿನ ಮತ್ತು ಸ್ಥಳವನ್ನು ನಿಗದಿ ಮಾಡಲಾಗಿದೆ. ಅಲ್ಪಸಂಖ್ಯಾತ ನಿಗಮ ಮಂಡಳಿಯಿಂದ ಟಿಪ್ಪು ಜಯಂತಿ ಆಚರಿಸದಿರಲು ನಿರ್ಧರಿಸಲಾಗಿದೆ.
ಮಹಾಪುರುಷರ ಮೊದಲ ರಾಜ್ಯಮಟ್ಟದ ಜಯಂತಿಯನ್ನು ಬೆಂಗಳೂರಿನಲ್ಲಿ ತದನಂತರ ವರ್ಷಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಚರಿಸಲು ಮತ್ತು ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ 5 ಲಕ್ಷ ರೂ. ಜಿಲ್ಲಾಮಟ್ಟದ ಜಯಂತಿ ಆಚರಣೆಗೆ 50 ಸಾವಿರ ರೂ. ಹಾಗೂ ತಾಲ್ಲೂಕು ಮಟ್ಟದ ಜಯಂತಿಗೆ 20 ಸಾವಿರ ರೂ. ನಿಗದಿಪಡಿಸಿ ಆದೇಶಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಮಾಜ ಸುಧಾರಕರು, ವಚನಕಾರರು, ಧಾರ್ಮಿಕ ಪುರುಷರು, ಪುರಾಣ ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ 31 ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ.
ಮೈಸೂರು ಸಂಸ್ಥಾನವನ್ನಾಳಿದ ಅರಸರಲ್ಲಿ ಟಿಪ್ಪು ಸುಲ್ತಾನ್ ಕೂಡ ಒಬ್ಬರು. ಟಿಪ್ಪು ಜಯಂತಿ ಆಚರಣೆ ಈ ಹಿಂದೆ ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗಿತ್ತು. ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಈ ಆಚರಣೆಗೆ ಬ್ರೇಕ್ ಹಾಕಿತ್ತು.












Click it and Unblock the Notifications