ಮುಂಗಾರು ವಿಳಂಬದಿಂದ ಹಲವು ಜಿಲ್ಲೆಗಳಲ್ಲಿ ಸಂಕಷ್ಟ: ಮೋಡ ಬಿತ್ತನೆಗೆ ಕಾದು ನೋಡುವ ತಂತ್ರ ಎಂದ ಸಚಿವ
ಬೆಳಗಾವಿ, ಜೂನ್ 13: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರ ವಿಳಂಬವಾಗುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯೇ ರಾಜ್ಯಕ್ಕೆ ಮುಂಗಾರು ಮಾರುತಗಳು ಆಗಮಿಸಿದ್ದರೂ ಮಳೆ ಸುರಿಯುತ್ತಿಲ್ಲ. ಹೀಗಾಗಿ ಮೋಡ ಬಿತ್ತನೆಗೆ ಜೂನ್ 15ರ ವರೆಗೆ ಕಾದುನೋಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಜೂನ್ 15ರಂದು ಸಚಿವ ಸಂಪುಟ ಸಭೆ ಇದೆ. ಅಲ್ಲಿವರೆಗೂ ಮಳೆಯಾಗದಿದ್ದರೆ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಳೆದ ಸಲಕ್ಕಿಂತ ಈ ಬಾರೀ ಶೇ. 30ರಷ್ಟು ಮಳೆ ಕಡಿಮೆ ಆಗಿದೆ. ಮಳೆಯ ನಿರೀಕ್ಷೆ ಮಾಡುತ್ತಿದ್ದೇವೆ. ಒಂದು ವಾರದಿಂದ ತಡವಾಗುತ್ತಲೇ ಇದೆ. ಮುಂದಿನ ಎರಡು ದಿನ ಕಾದು ನೋಡುತ್ತೇವೆ. ಬೀಜ ರಸಗೊಬ್ಬರ ಎಲ್ಲ ಸಂಗ್ರಹ ಮಾಡಿಟ್ಟುಕೊಂಡಿದ್ದೇವೆ. ಆದರೆ ಮುಂಗಾರು ವಿಳಂಬದಿಂದ ಬೇರೆ ಏನೂ ಮಾಡಲು ಆಗುತ್ತಿಲ್ಲ. ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಚಿಂತನೆ ಮಾಡಲಾಗಿದೆ.
ಎಫ್ಆರ್ಪಿ ದರ ಕೇಂದ್ರದಿಂದಲೇ ಜಾರಿ ಆಗುತ್ತಿದೆ. ನಾವೇನೆನೋ ಚಿಂತನೆ ಮಾಡುತ್ತೇವೆ, ಇದಕ್ಕೆ ಸ್ವಲ್ಪ ಸಮಯ ಕೊಡಬೇಕು. ಕಾಲಾವಕಾಶ ತಗೆದುಕೊಂಡು ಎಲ್ಲವನ್ನೂ ಸರಿ ಮಾಡುತ್ತೇವೆ ಎಂದ ಅವರು, ರೈತವಿರೋಧಿ ಮೂರು ಕಾಯ್ದೆಗಳ ಕುರಿತು ಚರ್ಚಿಸಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಗೋ ಹತ್ಯೆ ಕಾಯಿದೆ ನಿಷೇಧ ವಿಚಾರವಾಗಿ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಗೋ ಹತ್ಯೆ ಕಾಯಿದೆ ಜಾರಿಗೊಳಿಸಿದ್ದು, ಅದನ್ನು ನಿಷೇಧ ಮಾಡುವ ಬಗ್ಗೆ ಆಯಾ ಇಲಾಖೆಯ ಸಚಿವರಷ್ಟೇ ಹೇಳಿದ್ದಾರೆ. ಅದರ ಹೊರತಾಗಿ ಬೇರೆ ಚರ್ಚೆಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬಹುದು. ಚರ್ಚೆ ಮಾಡಿದಾಗ ಅದರ ಬಗ್ಗೆ ಹೇಳಬಹುದು ಎಂದರು.
ಬೆಂಗಳೂರಿನ ಹಲವು ಕಡೆ ಭಾರೀ ಮಳೆ
ಬೆಂಗಳೂರಿನಲ್ಲಿ ಹಲವೆಡೆ ಸೋಮವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ವಾಹನ ಸವಾರರು ಕೆಲಕಾಲ ಪರದಾಟ ಅನುಭವಿಸಿದರು. ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಟೌನ್ ಹಾಲ್, ಕಾರ್ಪೋರೇಷನ್ ಹಾಗೂ ಕೋರಮಂಗಲ ಸುತ್ತಮುತ್ತ ಭಾರೀ ಮಳೆಯಾಗಿದ್ದು, ವಾಹನ ಸವಾರರು ಕೆಲಕಾಲ ಪರದಾಟ ಅನುಭವಿಸಿದರು. ಯಮಲೂರಿನ ರಸ್ತೆಯಲ್ಲಿ ಮಳೆ ನೀರು ತುಂಬಿಹೋಗಿತ್ತು.
ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರಿ ಮಳೆಯಾಗುವ ಸಂಭವವಿದೆ. ಕರಾವಳಿ ಭಾಗ ಸೇರಿ ರಾಜ್ಯದ ನಾನಾ ಭಾಗದಲ್ಲಿ ವರುಣಾರ್ಭಟದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಇನ್ನೂ ರಾಜ್ಯದ ಕೆಲವೆಡೆ ಬಿರುಗಾಳಿ, ಗುಡುಗು ಮಿಂಚಿನ ಸಾಧ್ಯತೆ. ದಕ್ಷಿಣ ಒಳನಾಡು, ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆಯಾಗಲಿದೆ.












Click it and Unblock the Notifications