ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗೆ ಬಳಕೆ: ಸುನೀಲ್ ಕುಮಾರ್ ಆಕ್ರೋಶ
ಬೆಂಗಳೂರು, ಆಗಸ್ಟ್ 02: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಯಡಿ ಮೀಸಲಿರಿಸಿದ ಅನುದಾನದಲ್ಲಿ 11 ಸಾವಿರ ಕೋಟಿ ರೂ.ನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಶೋಷಿತ ಸಮುದಾಯಗಳಿಗೆ ಮಹಾನ್ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ವಿ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೇ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಎಸ್ ಸಿಎಸ್ ಪಿ, ಟಿಎಸ್ ಪಿ ಗೆ ನಿಗದಿಯಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಾರದೆಂಬ ನಿಯಮ ಇದೆ. ಆದರೆ ರಾಜ್ಯ ಸರ್ಕಾರ ಇದನ್ನು ಉಲ್ಲಂಘಿಸುವ ಮೂಲಕ ದಲಿತ ಸಮುದಾಯಕ್ಕೆ ಮಹಾಮೋಸ ಮಾಡಿದೆ ಎಂದು ಟೀಕಿಸಿದ್ದಾರೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲೇ ಈ ವಿಚಾರವನ್ನು ಮುಚ್ಚಿಡುವ ಪ್ರಯತ್ನವನ್ನು ಸರ್ಕಾರ ನಡೆಸಿತ್ತು. 2023-24ನೇ ಸಾಲಿನ ಪರಿಷ್ಕೃತ ಬಜೆಟ್‌ನ ಲಿಂಕ್ ಡಾಕ್ಯುಮೆಂಟ್‌ನಲ್ಲಿ ಗ್ಯಾರಂಟಿ ಯೋಜನೆಗೆ ಈ ಹಣವನ್ನು ಬಳಸಿಕೊಂಡ ಬಗ್ಗೆ ದಾಖಲೆ ಇತ್ತು. ಸರ್ಕಾರ ಸತ್ಯವನ್ನು ಮುಚ್ಚಿ ಹಾಕಲು ನಡೆಸಿದ ಪ್ರಯತ್ನ ಬಯಲಾಗಿದೆ. ಸರ್ಕಾರ ನೀಡುವ ಯಾವುದೇ ಸಮರ್ಥನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಒಂದು ಕೈಯಲ್ಲಿಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಶೋಷಿತರ ಅಭಿವೃದ್ಧಿಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ನಿಗದಿಯಾದ ಹಣವನ್ನು ಬೇರೆ ಯೋಜನೆಗೆ ಬಳಸಿಕೊಳ್ಳುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಇನ್ನೂ ಈ ಕುರಿತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರವು 5 ಗ್ಯಾರಂಟಿ ಯೋಜನೆಗಳಿಗೆ ದಲಿತರ ಏಳಿಗೆ, ಕಲ್ಯಾಣಕ್ಕೋಸ್ಕರ ಮೀಸಲಿಟ್ಟ ಹಣವನ್ನು ಒಂದೆಡೆ ನೀಡುತ್ತಿದೆ. ಅಷ್ಟೂ ಸಾಕಾಗದೆ ಬೆಲೆ ಏರಿಕೆಯ ಬರೆಯನ್ನೂ ಈ ಸರಕಾರ ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿದ್ಯುತ್ ಬಿಲ್, ಬಸ್ ಪ್ರಯಾಣ ದರ, ನೀರಿನ ದರ, ಮದ್ಯದ ದರ, ವಿವಿಧ ತರಕಾರಿ ಬೆಲೆಯನ್ನೂ ಏರಿಸಿದೆ. ಶಾಲಾ ಕಾಲೇಜುಗಳ ಕ್ಯಾಬ್ ತೆರಿಗೆ, ಮೋಟಾರು ತೆರಿಗೆ ಹೆಚ್ಚಿಸಿದೆ. ಸರಕು ಸಾಗಣೆ ದರ ಏರಿಸಿದೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಜಲ್ಲಿ, ಮರಳು ಬೆಲೆ ಹೆಚ್ಚು ಮಾಡಿದೆ. ಎತ್ತರದ ಕಟ್ಟಡಗಳ ಶುಲ್ಕವನ್ನು ಹೆಚ್ಚಿಗೆ ಮಾಡಿದೆ. ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಮಾಡಿದೆ. ಹೋಟೆಲ್‍ನಲ್ಲಿ ತಿಂಡಿ, ಚಹಾ, ಕಾಫಿ ದರ ಏರಿಕೆ ಮಾಡಿದೆ. ಆಹಾರದ ಬೆಲೆ ಏರಿಕೆ ಮಾಡಿದೆ. ನಂದಿನಿ ಹಾಲು, ಮಜ್ಜಿಗೆ, ತುಪ್ಪ ಸೇರಿ ಎಲ್ಲ ಉತ್ಪನ್ನಗಳ ದರ ಏರಿಕೆ ಮಾಡಿದೆ. ಹೀಗೆ ಸುಮಾರು 25 ರೀತಿಯ ಬೆಲೆ ಏರಿಕೆಯನ್ನು ಮಾಡಿದೆ ಎಂದು ಖಂಡಿಸಿದರು.
ಬಡವರಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡು 5 ಗ್ಯಾರಂಟಿ ಯೋಜನೆಗಳಿಗಾಗಿ 25 ರೀತಿಯಲ್ಲಿ ಬೆಲೆ ಏರಿಕೆ ಮಾಡಿದೆ ಎಂದು ರವಿಕುಮಾರ್ ಅವರು ನುಡಿದರು. ಈ ಸರಕಾರ ಒಂದು ಕಡೆ ಕೊಡುತ್ತದೆ. ಅನೇಕ ಕಡೆ ಕಿತ್ತುಕೊಳ್ಳುತ್ತಿದೆ. ಹಾಗಾಗಿ ಇದು ಬಡವರ ಪರ, ಹಿಂದುಳಿದವರ ಪರ, ದಲಿತರ ಪರವಾಗಿ ಇರುವ ಸರಕಾರ ಅಲ್ಲ. ಇದು ಹಿಂದುಳಿದ ವರ್ಗಗಳ, ದಲಿತರ, ಎಸ್‍ಸಿ, ಎಸ್‍ಟಿ ಸಮುದಾಯದ ವಿರೋಧಿ ಸರಕಾರ ಎಂದು ಆರೋಪಿಸಿದರು.












Click it and Unblock the Notifications