ಕಾಂಗ್ರೆಸ್ ಅತ್ತೆ-ಸೊಸೆ ಮಧ್ಯೆ ಜಗಳ ಹಚ್ಚಿದ್ದು, ಮನೆ ಒಡೆಯುವ ಕೆಲಸ ಮಾಡುತ್ತಿದೆ: ರೇಣುಕಾಚಾರ್ಯ ಕಿಡಿ
ದಾವಣಗೆರೆ, ಜೂನ್ 11: ಕಾಂಗ್ರೆಸ್ ಸರಕಾರ ಜಾರಿಗೆ ತರಲು ನಿರ್ಧಾರ ಮಾಡಿರುವ ಗೃಹಲಕ್ಷ್ಮೀ ಯೋಜನೆಯಿಂದ ಮನೆಯಲ್ಲಿ ಅತ್ತೆ-ಸೊಸೆ ನಡುವೆ ಜಗಳ ನಡೆಯುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.
ಈ ಕುರಿತು ಹೊನ್ನಾಳಿನಲ್ಲಿ ತಾಲೂಕಿನ ಕೆಂಗಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ಸರಕಾರ 2 ಸಾವಿರ ರೂ. ಕೊಟ್ಟು ಅತ್ತೆ-ಸೊಸೆ ಮಧ್ಯೆ ಜಗಳ ಹಚ್ಚಿದ್ದು, ಮನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಸರಕಾರ ಕೊಟ್ಟ ಭರವಸೆಯಂತೆ ಎಲ್ಲ ಮಹಿಳೆಯರಿಗೂ 2 ಸಾವಿರ ರೂಪಾಯಿ ನೀಡಬೇಕು. ಚುನಾವಣೆ ಪೂರ್ವದಲ್ಲಿ ಎಲ್ಲರಿಗೂ ಹಣಕೊಡುವುದಾಗಿ ಹೇಳಿ ಈಗ ನಿಬಂಧನೆಗಳನ್ನು ಹಾಕುವುದು ಎಷ್ಟು ಸರಿ. ಗೆದ್ದ ಮೇಲೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಮಾತು ತಪ್ಪಿ ವಚನ ಭ್ರಷ್ಟರಾಗಬಾರದು. ಆದ್ದರಿಂದ ಸರಕಾರದ ಈ ನಡೆ ವಿರುದ್ಧ ನಿಮಗೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಮಹಿಳೆಯರಿಗೆ ಹೇಳಿದರು.
ಗೃಹಜ್ಯೋತಿ 200 ಯೂನಿಟ್ ಎಲ್ಲರಿಗೂ ಫ್ರೀ ಎಂದು ಹೇಳಿ ಈಗ ಷರತ್ತುಗಳನ್ನು ಸರಕಾರ ವಿಧಿಸುತ್ತಿದೆ. ಅಲ್ಲದೇ ವಿದ್ಯುತ್ ದರ ಏರಿಸಿದ್ದು ಮೊದಲಿಗಿಂತ ಈಗ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ. ಒಂದು ಮನೆಯ ಮೀಟರ್‌ಗೆ ಮಾತ್ರ ಫ್ರೀ ಎಂದು ಹೇಳಲಾಗಿದೆ. ಆದರೆ ಬಾಡಿಗೆ ಮನೆಯಲ್ಲಿ ಇರೋರಿಗೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಸರಕಾರ ಕೂಡಲೇ ವಿಧಿಸಿರುವ ಷರತ್ತುಗಳನ್ನು ವಾಪಸ್ ಪಡೆದು ಎಲ್ಲರಿಗೂ 200 ಯೂನಿಟ್ ವಿದ್ಯುತ್ ಫ್ರೀ ನೀಡಬೇಕು ಎಂದು ಆಗ್ರಹಿಸಿದರು.
ನಿರುದ್ಯೋಗ ಯುವಕರೆಂದರೆ ಯಾರು, ಕೆಲಸ ಇಲ್ಲದೇ ಹತ್ತು ಹದಿನೈದು ವರ್ಷಗಳಿಂದ ಓದು ಮುಗಿಸಿ ಮನೆಯಲ್ಲಿ ಕುಳಿತಿರುತ್ತಾರೋ ಅವರು. ಆದರೇ ಇನ್ನು ಫಲಿತಾಂಶ ಬಾರದೇ ಇದ್ದು ಅವರಿಗೆ ಮೂರು ಸಾವಿರ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಒಂದು ಸಾವಿರ ಕೊಟ್ಟರೇ ಹೇಗೆ ಎಂದು ಪ್ರಶ್ನಿಸಿದರು.












Click it and Unblock the Notifications