CT Ravi: ಸಿ ಟಿ ರವಿ ನೆತ್ತಿ ಮೇಲೆ ರಕ್ತ ಸುರಿಯುತ್ತಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ: ವಿಜಯೇಂದ್ರ ಕಿಡಿ
ಬೆಳಗಾವಿ, ಡಿಸೆಂಬರ್ 20: ಕಾಂಗ್ರೆಸ್ಸಿನ ಗೂಂಡಾಗಳು ಸುವರ್ಣಸೌಧಕ್ಕೆ ಬಂದು ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ರಾಜ್ಯದ ಕಾಂಗ್ರೆಸ್ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ಬಂಧನವನ್ನು ಖಂಡಿಸಿ ಇಂದು ಇಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ರೈತರ ಮೇಲೆ, ಪಂಚಮಸಾಲಿ ಸಮಾಜದ ಮೇಲೆ ಲಾಠಿ ಪ್ರಹಾರ ನಡೆಸುತ್ತೀರಿ. ಸ್ಪೀಕರ್ ರೂಲಿಂಗ್ ಬದಿಗಿಟ್ಟು ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಿಸಿದ್ದು, ಬಳಿಕ ಪೊಲೀಸರ ಮೂಲಕ ಬಂಧಿಸಲಾಗಿದೆ ಎಂದು ಖಂಡಿಸಿದರು.

ಇಡೀ ರಾತ್ರಿ ಸುಮಾರು 500 ಕಿಮೀ ಸುತ್ತಾಡಿಸಿದ್ದಾರೆ. ಬಲವಂತದಿಂದ ವಾಹನದಲ್ಲಿ ಗದಗ, ರಾಮದುರ್ಗ, ಧಾರವಾಡ ಮೊದಲಾದ ಕಡೆಗಳಿಗೆ ಕರೆದೊಯ್ದಿದ್ದಾರೆ. ಜನಪ್ರತಿನಿಧಿಗಳ ಮೇಲೆ ಈ ರೀತಿ ದೌರ್ಜನ್ಯ ಮಾಡುವ ಈ ಸರಕಾರದ ನೀತಿಯನ್ನು ಜನರೂ ಪ್ರಶ್ನಿಸುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಪಕ್ಷ ಕಾಂಗ್ರೆಸ್ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಕಾನೂನನ್ನು ಮತ್ತು ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿತ್ತು ಎಂದು ಟೀಕಿಸಿದರು. ಸಿ.ಟಿ.ರವಿ ಅವರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದು, ನೆತ್ತಿ ಮೇಲೆ ರಕ್ತ ಸುರಿಯುತ್ತಿದ್ದರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ದೂರಿದರು.
ಒಂದು ಲೋಟ ನೀರನ್ನೂ ಕೊಟ್ಟಿಲ್ಲ. ಸಿ.ಟಿ.ರವಿ ಅವರಿಗೆ ಒಂದು ತುತ್ತು ಅನ್ನವನ್ನೂ ಕೊಟ್ಟಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು. ಕಾಂಗ್ರೆಸ್ಸಿನ ಒತ್ತಾಯದ ಮೇರೆಗೆ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತ ಅಲ್ಲ. ಅಧಿಕಾರದ ದರ್ಪ, ಅಮಲಿನಲ್ಲಿ ಮೆರೆಯುವ ನೀವು, ಅಧಿಕಾರದ ಸೊಕ್ಕು, ಮದದಿಂದ ನಮ್ಮ ಮೇಲೆ ಹಲ್ಲೆ ಮಾಡುವ ಕೆಲಸ ಮಾಡುತ್ತಿದ್ದೀರಿ. ಅಧಿಕಾರ ಶಾಶ್ವತ ಅಲ್ಲ ಎಂದು ಎಚ್ಚರಿಸಿದರು.
ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆ
ಮಾಜಿ ಸಚಿವರೂ ಆದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿ ರಾತ್ರಿ ಬೇರೆ ಬೇರೆ ಠಾಣೆಗಳಿಗೆ ಕರೆದೊಯ್ದು ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ. ಅವರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ತಿಳಿಸಿದ್ದಾರೆ.
ಸಿ.ಟಿ.ರವಿ ಅವರು ಶಾಸಕರಾಗಿ, ಸಚಿವರಾಗಿ, ಪಕ್ಷದ ಹಿಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಈ ರೀತಿ ನಡೆಸಿಕೊಂಡದ್ದು ಸರಿಯಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ಪೊಲೀಸ್ ಇಲಾಖೆ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಈ ರೀತಿ ವರ್ತಿಸುವುದು ಸರಿಯಲ್ಲ. ಘಟನೆಯನ್ನು ತಿಳಿದುಕೊಂಡು ಕಾನೂನಿನಂತೆ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಒತ್ತಾಯಿಸಿದ್ದಾರೆ.












Click it and Unblock the Notifications