'ರೋಲ್‌ಕಾಲ್ ಸ್ವಾಮಿ-ಸೂಟ್‌ಕೇಸ್ ಸ್ವಾಮಿ' ಎಚ್‌ಡಿಕೆಗೆ ಚಾಯ್ಸ್ ಕೊಟ್ಟ ಕಾಂಗ್ರೆಸ್
ಚನ್ನಪಟ್ಟಣ ಉಪಚುನಾವಣೆಗೆ 50 ಕೋಟಿ ರೂಪಾಯಿ ಕೊಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ವಿಜಯ್ ತಾತಾ ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದ್ದು, ಕಾಂಗ್ರೆಸ್ ಈ ವಿಚಾರವಾಗಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಬಗ್ಗ ಟ್ವೀಟ್ ಮಾಡಿರುವ ಕಾಂಗ್ರೆಸ್ 'ರೋಲ್ಕಾಲ್swamy ಅವರ ದಾಹಗಳಿಗೆ ಮಿತಿ ಇಲ್ಲ. ಅಧಿಕಾರ ದಾಹ, ಭೂ ದಾಹ, ಹಣ ದಾಹಗಳಿಗೆ ಹಲವು ನಿದರ್ಶನಗಳಿವೆ. ಗಂಗೇನಹಳ್ಳಿಯ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಭೂದಾಹ ಬಯಲಾಗಿದ್ದರೆ, ಗಣಿ ಹಗರಣ ಹಾಗೂ ₹50 ಕೋಟಿ ರೋಲ್ಕಾಲ್ ಹಗರಣದಿಂದ ಹಣದಾಹ ಹೊರಬಂದಿದೆ' ಎಂದು ಕುಟುಕಿದೆ.

'ಸಿದ್ಧಾಂತದ ಜೊತೆಗೆ ನಾಲಿಗೆಯನ್ನೂ ಕಾಲಕ್ಕೆ ತಕ್ಕಂತೆ ತಿರುಗಿಸುವ ರೋಲ್ಕಾಲ್ ಸ್ವಾಮಿಯವರ ಅಧಿಕಾರ ದಾಹ ಎಂತದ್ದು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಸೂಟ್ಕೇಸ್ ಸ್ವಾಮಿಗಳು ಕರ್ನಾಟಕದ ರಾಜಕಾರಣದಲ್ಲಿ ಬೃಹನ್ನಳೆ ಪಾತ್ರವಹಿಸಿರುವುದು ದುರಂತ' ಎಂದು ಲೇವಡಿ ಕೂಡ ಮಾಡಿದೆ.
'ಮಾನ್ಯ ರೋಲ್ಕಾಲ್ ಸ್ವಾಮಿಯವರ ವಿರುದ್ಧ ₹50 ಕೋಟಿ ರೂಪಾಯಿ ವಸೂಲಿಗಾಗಿ ಜೀವ ಬೆದರಿಕೆ ಹಾಕಿದ್ದಕ್ಕೆ FIR ದಾಖಲಾಗಿದೆ. ದೂರು ನೀಡಿದ್ದು ಸ್ವತಃ ಜೆಡಿಎಸ್ ಪಕ್ಷದ ಪದಾಧಿಕಾರಿ. ಈ ಹಿಂದೆ ಕುಮಾರಸ್ವಾಮಿಯವರ ಮಾನಸಪುತ್ರ ಪ್ರಜ್ವಲ್ ರೇವಣ್ಣನೇ ಜೆಡಿಎಸ್‌ನಲ್ಲಿನ ಸೂಟ್ಕೇಸ್ ಸಂಸ್ಕೃತಿಯನ್ನು ತೆರೆದಿಟ್ಟಿದ್ದರು' ಎಂದು ವಾಗ್ದಾಳಿ ನಡೆಸಿದೆ.
'ಕುಮಾರಸ್ವಾಮಿ ಅವರೇ...ನಿಮ್ಮನ್ನು ರೋಲ್ಕಾಲ್ ಸ್ವಾಮಿ ಎನ್ನೋಣವೇ, ಸೂಟ್ಕೇಸ್ ಸ್ವಾಮಿ ಎನ್ನೋಣವೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ರಾಜಕಾರಣವನ್ನು ಮಾಫಿಯಾಕರಣ ಮಾಡಿದ ರೋಲ್ಕಾಲ್ ಸ್ವಾಮಿಯವರು ರಾಜ್ಯವನ್ನು ಲೂಟಿ ಹೊಡೆದಿದ್ದಷ್ಟೇ ಅಲ್ಲ, ರಾಜ್ಯದ ಭೂಮಿ ಕಬಳಿಸಿದ್ದಷ್ಟೇ ಅಲ್ಲ, ಸ್ವಪಕ್ಷದ ಕಾರ್ಯಕರ್ತರ ಲೂಟಿಗೂ ಇಳಿದಿರುವುದು ಶೋಚನೀಯ!' ಎಂದು ಕಾಲೆಳೆದಿದೆ.

ಬೆದರಿಕೆ ಕೇಸ್‌ನಲ್ಲಿ ಕುಮಾರಸ್ವಾಮಿ ಅವರು ಎ2 ಆರೋಪಿ ಎಂದು ಉಲ್ಲೇಖಿಸಲಾಗಿದೆ. A1 ಆರೋಪಿಯಾಗಿ ಜೆಡಿಎಸ್‌ನ ರಮೇಶ್ ಗೌಡ ಅವರನ್ನು ಹೆಸರನ್ನು ನೀಡಲಾಗಿದೆ. ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಹಲವು ಸೆಕ್ಷನ್ ಅಡಿ ಈ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?: ಉದ್ಯಮಿ ವಿಜಯ್ ತಾತಾ ತಾತಾ ಅವರು ನೀಡಿರುವ ದೂರಿನಲ್ಲಿ, ಕಳೆದ ತಿಂಗಳು ನಮ್ಮ ಮನೆಗೆ ಬಂದಿದ್ದ ಬಿಜೆಪಿ ನಾಯಕ ರಮೇಶ್ ಗೌಡ ಅವರು ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್ ಕೊಡೋದು ಫಿಕ್ಸ್ ಆಗಿದೆ ಎಂದು ವಿವರಿಸುತ್ತಾ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಕೊಟ್ಟರು. ಅವರು ಮೊದಲಿಗೆ ಚೆನ್ನಾಗಿಯೇ ಮಾತನಾಡಿ, ನನ್ನ ಯೋಗಕ್ಷೇಮ ವಿಚಾರಿಸಿದರು. ಚನ್ನಪಟ್ಟಣ ಚುನಾವಣೆಗೆ 50 ಕೋಟಿ ರೂಪಾಯಿ ಬೇಕೆಂದು ಡಿಮ್ಯಾಂಡ್ ಮಾಡಿದರು. ನಾನು ಆಗ ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದೆ ಎಂದಿದ್ದಾರೆ.
ಇದಕ್ಕೆ ಕೋಪಗೊಂಡ ಕುಮಾರಸ್ವಾಮಿ, 50 ಕೋಟಿ ರೂಪಾಯಿ ಕೊಡಲೇಬೇಕು, ಹಣ ರೆಡಿ ಮಾಡಿಲ್ಲ ಅಂದ್ರೆ ನಾನು ಏನು ಮಾಡ್ತೀನೋ ನನಗೇ ಗೊತ್ತಿಲ್ಲ ಎಂದು ಧಮ್ಕಿ ಹಾಕಿದರು ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ನೀನು ರಿಯಲ್ ಎಸ್ಟೇಟ್ ಉದ್ಯಮ ನಡೆಸೋದಿರಲಿ, ಬದುಕೋದು ಕೂಡ ಕಷ್ಟ ಎಂದು ಬೆದರಿಕೆ ಹಾಕಿದರು. ನೀವು ಹಣ ನೀಡದಿದ್ರೆ ನಿಮಗೆ ತೊಂದರೆ ತಪ್ಪಿದ್ದಲ್ಲ ಎಂದೂ ಧಮ್ಕಿ ಹಾಕಿದರು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ರಮೇಶ್‌ಗೌಡ ವಾಟ್ಸಾಪ್‌ನಲ್ಲೂ ಮೆಸೇಜ್ ಕಳಿಸಿದರು. ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ನನ್ನ ಬಳಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಉದ್ಯಮಿ ವಿಜಯ್ ಟಾಟಾ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದ್ದು, ನಿಸ್ಪಕ್ಷಪಾತವಾಗಿ ತನಿಖೆ ನಡೆಸುವುದಾಗಿ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಹೇಳಿದ್ದಾರೆ.












Click it and Unblock the Notifications