Voter Data Theft: ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್
ಬೆಂಗಳೂರು, ನವೆಂಬರ್ 19: ಮತದಾರರ ದತ್ತಾಂಶ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಬೆಂಗಳೂರಿನಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಶನಿವಾರ ಆಗಮಿಸಿದ ಕಾಂಗ್ರೆಸ್‌ನ ರಾಜ್ಯ ಘಟಕದ ನಾಯಕರು ಮತದಾರರ ಮಾಹಿತಿ ಕಳ್ಳತನದ ವಿಚಾರವಾಗಿ ದೂರು ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕರಾದ ಕೃಷ್ಣ ಬೈರೇಗೌಡ, ಸೌಮ್ಯ ರೆಡ್ಡಿ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ನಾವೀಗ ಮತದಾರರ ಹಕ್ಕುಗಳನ್ನು ರಕ್ಷಿಸಬೇಕಿದೆ. ಆ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ. ದತ್ತಾಂಶ ಬಳಸಿ, ಮಾಹಿತಿ ಸಂಗ್ರಹಿಸಿ, ಲಕ್ಷಗಟ್ಟಲೆ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿಸಿದ ಆರೋಪ ಬೆಂಗಳೂರಿನ ಬಿಜೆಪಿ ಸಚಿವರ ಮೇಲಿದೆ. ಇದೊಂದು ದೊಡ್ಡ ವಂಚನೆಯಾಗಿದೆ. ಸಿ.ಎನ್. ಅಶ್ವಥ್ ನಾರಾಯಣ್ ಸೇರಿದಂತೆ ಈ ವಂಚನೆಯಲ್ಲಿ ಹಲವರು ಭಾಗಿಯಾಗಿದ್ದಾರೆ' ಎಂದು ಆರೋಪಿಸಿದರು.

ಮತದಾರರ ಮಾಹಿತಿಗಳನ್ನು ಕಳ್ಳತನ ಮಾಡಿದ ಆರೋಪ 'ಚಿಲುಮೆ' ಎಂಬ ಎನ್‌ಜಿಒ ವಿರುದ್ಧ ಕೇಳಿಬಂದಿದೆ. ಈ ಸಂಸ್ಥೆಗೆ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ಸಹಾಯಹಸ್ತ ಚಾಚಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಚಿವ ಸಿ.ಎನ್.ಅಶ್ವಥ್ ನಾರಾಯಣ ಅವರ ಹೆಸರು ಈ ಹಗರಣದಲ್ಲಿ ತಳಕುಹಾಕಿಕೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ. ಮತದಾರರ ದತ್ತಾಂಶ ಕಳ್ಳತನದ ಆರೋಪವನ್ನು ಬೊಮ್ಮಾಯಿ ಅಲ್ಲಗಳೆದಿದ್ದಾರೆ.












Click it and Unblock the Notifications