ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾದ್ರಾ ಸಿದ್ದರಾಮಯ್ಯ?
ಮೈಸೂರು, ಮಾರ್ಚ್ 25: ಕಾಂಗ್ರೆಸ್ ನಾಯಕರ ನಸೀಬು ಕೆಟ್ಟಂತೆ ಕಾಣುತ್ತಿದೆ. ಚುನಾವಣೆಗೆ ವರ್ಷವಿರುವಂತೆಯೇ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಅದನ್ನು ನಿಭಾಯಿಸುವಲ್ಲಿ ನಾಯಕರು ಎಡವುತ್ತಿರುವುದು ಎದ್ದು ಕಾಣುತ್ತಿದೆ.
ಹಿಜಾಬ್ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ವರ್ತಿಸಿದ ಕಾಂಗ್ರೆಸ್ ನಾಯಕರು ಅದರಲ್ಲೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಕೆಲವು ವಿಚಾರಗಳಲ್ಲಿ ಹಿಂದೂ ಧರ್ಮದ ವಿರುದ್ಧವೇ ಹಲವು ಹೇಳಿಕೆಗಳನ್ನು ನೀಡಿ ಹಿಂದೂಗಳ ವಿರೋಧ ಕಟ್ಟಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ನೇರವಾಗಿ ಕಾಂಗ್ರೆಸ್ ಮೇಲಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಡಿಕೆಶಿ ಉತ್ಸಾಹಕ್ಕೆ ಸಿದ್ದು ತಣ್ಣೀರು
ಮುಂದಿನ ಚುನಾವಣೆಯಲ್ಲಿ ಗೆದ್ದೇ ತೀರಬೇಕು. ಬಿಜೆಪಿಯನ್ನು ಕೆಡವಿ ಕಾಂಗ್ರೆಸ್ ಸಾಮ್ರಾಜ್ಯ ಕಟ್ಟಲೇಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಣತೊಟ್ಟಿದ್ದಾರೆ. ಹೀಗಾಗಿ ಅಧಿವೇಶನಕ್ಕೂ ಬಾರದೆ ಅವರು ರಾಜ್ಯ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಎಂಬುದು ಡಿ.ಕೆ. ಶಿವಕುಮಾರ್‌ಗೆ ಸವಾಲಾಗಿ ಪರಿಣಮಿಸಿದೆ.
ಸ್ವಾತಂತ್ರ್ಯ ನಂತರದ ಕಾಲದಿಂದಲೂ ಒಂದು ಸಮುದಾಯ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಲೇ ಬಂದಿದೆ. ಹೀಗಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಒಳಿತಿಗಾಗಿ ಇರುವ ನಮ್ಮದು ಜಾತ್ಯಾತೀತ ಪಕ್ಷ ಎನ್ನುತ್ತಾ ಆಡಳಿತ ನಡೆಸಿಕೊಂಡು ಬಂದ ಕಾಂಗ್ರೆಸ್ ಕಳೆದ ಕೆಲವು ದಶಕಗಳಿಂದ ತನ್ನ ವರ್ಚಸ್ಸು ಕಳೆದುಕೊಂಡು ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಕೈಚೆಲ್ಲಿದೆ.

ಅಡ್ಡಗೋಡೆ ಮೇಲೆ ದೀಪವಿಟ್ಟ ಕಾಂಗ್ರೆಸ್
ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಎಲ್ಲ ರೀತಿಯ ಅವಕಾಶವಿದೆ. ಆದರೆ ನಾಯಕರ ಇಬ್ಬಗೆಯ ನೀತಿ, ಕೆಲವು ವಿಚಾರಗಳಲ್ಲಿ ಸ್ಪಷ್ಟ ನಿಲುವು ತೋರದೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನುಣುಚಿಕೊಳ್ಳುವುದು, ಬಿಜೆಪಿಯನ್ನು ತೆಗಳುವ ಮತ್ತು ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಬಹುಸಂಖ್ಯಾತ ಹಿಂದೂ ಸಮಾಜದ ಜನರಿಗೆ ನೋವುಂಟು ಮಾಡುವಂತೆ ಮಾತನಾಡುವುದು. ಎಲ್ಲೋ ಒಂದು ಕಡೆ ಕಾಂಗ್ರೆಸ್ ವಿರುದ್ಧ ಹಿಂದೂಪರ ಸಂಘಟನೆಗಳು ವಿರೋಧ ಮಾಡುವಂತಾಗಿದೆ.
ಹಾಗೆ ನೋಡಿದರೆ ಕಾಂಗ್ರೆಸ್ ಜಾತ್ಯಾತೀತ ಎಂಬ ಹಣೆಪಟ್ಟಿಕೊಂಡೇ ಇಲ್ಲಿಯವರೆಗೆ ಬಂದಿದೆ. ಆದರೆ ಕೆಲವೊಂದು ವಿಚಾರಗಳಲ್ಲಿ ನಿರ್ದಿಷ್ಟ ತೀರ್ಮಾನ ಕೈಗೊಳ್ಳುವಲ್ಲಿ ನಾಯಕರು ಮೌನ ವಹಿಸುತ್ತಿರುವುದು ಮತ್ತು ಒಂದು ಸಮುದಾಯವನ್ನು ಓಲೈಸುವ ಸಲುವಾಗಿ ಮಾತನಾಡುವುದು ಎಷ್ಟು ಸರಿ? ಎಂಬ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.

ಧರ್ಮ ಸಂಘರ್ಷದ ಸಂಕಷ್ಟದಲ್ಲಿ ರಾಜ್ಯ
ಐದು ವರ್ಷಗಳ ಕಾಲ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು ಹಲವು ಜನೋಪಯೋಗಿ ಯೋಜನೆ ಜಾರಿಗೆ ತಂದಿದ್ದರೂ ಬಹುಸಂಖ್ಯಾತ ಹಿಂದೂಗಳ ವಿರೋಧದ ನಡುವೆ ಅವರು ತೆಗೆದುಕೊಂಡ ಟಿಪ್ಪು ಜಯಂತಿ ಆಚರಣೆ, ಪ್ರತ್ಯೇಕ ಲಿಂಗಾಯಿತ ಧರ್ಮದ ನಿರ್ಧಾರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಾರದಂತೆ ಮಾಡಿತು. ಅದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದ ವಿಚಾರವಲ್ಲ.
ಕೆಲವು ಸೂಕ್ಷ್ಮ ವಿಚಾರಗಳು ಬಂದಾಗ ದ್ವಂದ್ವ ನಿಲುವು ತಾಳುತ್ತಾ ಬಂದಿರುವ ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್‌ಗೆ ತೊಂದರೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಇಡೀ ರಾಜ್ಯ ಧರ್ಮ ಸಂಘರ್ಷದ ಸಂಕಷ್ಟದಲ್ಲಿ ಬೇಯುತ್ತಿದೆ. ಹೀಗಿರುವಾಗ ಜಾತ್ಯತೀತ ನಾಯಕನೆಂದು ಕರೆಯಿಸಿಕೊಳ್ಳುವ ಸಿದ್ದರಾಮಯ್ಯ, ಹಿಜಾಬ್ ಕುರಿತಂತೆ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ಬುದ್ದಿವಾದ ಹೇಳಿದ್ದರೆ ಅವರೊಬ್ಬ ಜಾತ್ಯತೀತ ನಾಯಕ ಎಂಬುದು ಸಾಬೀತಾಗುತ್ತಿತ್ತು.

ಸ್ವಾಮೀಜಿಗಳನ್ನು ಎಳೆದು ತಂದಿದ್ದೇಕೆ?
ಹಿಜಾಬ್ ಪ್ರಕರಣದ ಸಂಬಂಧ ಹೈಕೋರ್ಟ್ ಆದೇಶ ನೀಡಿದೆ. ಹೀಗಿರುವಾಗ ಒಬ್ಬ ನ್ಯಾಯವಾದಿಯಾಗಿ ಅದನ್ನು ಪಾಲಿಸುವಂತೆ ಕಿವಿಮಾತು ಹೇಳುವುದನ್ನು ಬಿಟ್ಟು ಹಿಜಾಬ್ ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಸ್ವಾಮೀಜಿಗಳು ಧರಿಸುವ ಪೇಟಕ್ಕೆ ಹೋಲಿಕೆ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಇಷ್ಟಕ್ಕೂ ಸಿದ್ದರಾಮಯ್ಯ ಅವರು ಇಂತಹ ನಿಲುವು ತಾಳುತ್ತಿರುವುದೇಕೆ? ಒಂದು ಸಮುದಾಯದ ಓಲೈಕೆ ಮಾಡುತ್ತಿರುವುದೇಕೆ? ಎಂಬುದನ್ನು ನೋಡುತ್ತಾ ಹೋದರೆ ಅವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ.

ಮುಸ್ಲಿಂ ಮತ ಸೆಳೆಯಲು ಈ ತಂತ್ರನಾ?
ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಅಲ್ಲಿ ಸ್ಪರ್ಧಿಸಿ ಮತ್ತೆ ಗೆಲ್ಲುವುದು ಸಾಧ್ಯವಾಗದ ಮಾತಾಗಿದೆ. ಇನ್ನು ಬಾದಾಮಿ ಕ್ಷೇತ್ರವೂ ಅವರನ್ನು ಕೈ ಹಿಡಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಅವರು ಚಾಮರಾಜಪೇಟೆಯತ್ತ ಮುಖ ಮಾಡಿದ್ದಾರೆ. ಅಲ್ಲಿ ಮುಸ್ಲಿಂ ಮತ ನಿರ್ಣಾಯಕವಾಗಿದ್ದು, ಗೆಲುವು ಸಾಧಿಸಬೇಕಾದರೆ ಮುಸ್ಲಿಂ ಮತದಾರರ ಓಲೈಕೆ ಅನಿವಾರ್ಯವಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಧೋರಣೆ ತೋರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಹೋರಾಟ ಮಾಡುತ್ತಿದ್ದು, ಎಲ್ಲವನ್ನೂ ಸಮನಾಂತರವಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಇದೀಗ ಸಿದ್ದರಾಮಯ್ಯ ಅವರ ಹೇಳಿಕೆ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications