ಕಾಂಗ್ರೆಸ್ 2ನೇ ಪಟ್ಟಿ: ಶಿಗ್ಗಾವಿಗೆ ಟಿಕೆಟ್ ಘೋಷಿಸದ ಕಾಂಗ್ರೆಸ್ ವಿನಯ್ ಕುಲಕರ್ಣಿಗೆ ಕಾಯುತ್ತಿದಿಯೇ?, ರಾಜಕೀಯ ಲೆಕ್ಕಾಚಾರವೇನು?
ಬೆಂಗಳೂರು, ಏಪ್ರಿಲ್ 06: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಸಂಬಂಧ ರಾಜಕೀಯ ವಲಯದಲ್ಲಿ ಬಿಸಿ ದಿನೇ ದಿನೆ ಹೆಚ್ಚಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ಚುನಾವಣೆ ಅಖಾಡಕ್ಕೆ ಇಳಿಯುವವರ ಹೆಸರುವುಳ್ಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲೂ ಸಹ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಕರ್ನಾಟಕ ಕಾಂಗ್ರೆಸ್ ಗುರುವಾರ 42 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವವರ ಪಟ್ಟಿ (2ನೇ ಪಟ್ಟಿ) ಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯಿಂದ ಕೆಲವು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದ ಪ್ರಭಾವಿ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿಲ್ಲ. ಈ ಮೂಲಕ ಘಟಾನುಗಟಿಗಳನ್ನು ಅಂತಹ ಕಣಕ್ಕೆ ಇಳಿಸಿ ಗೆಲುವಿನ ದಾರಿ ಹುಡುಕುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ.

ಎರಡು ವಾರದ ಹಿಂದಷ್ಟೇ ಕಾಂಗ್ರೆಸ್ 124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿತ್ತು. ಅದರಲ್ಲೂ ಶಿಗ್ಗಾವಿ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಮಾಜಿ ಸಚಿವ ವಿನಯ್ ಕುಲಕರ್ಣಿ ಯೇ ಕಾಂಗ್ರೆಸ್‌ನಿಂದ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡುತ್ತಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.
ಇದೀಗ ಎರಡೇ ಪಟ್ಟಿಯಲ್ಲೂ ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ, ಕುತೂಹಲಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕಗಳು ಬಂದಿವೆ. ಇಲ್ಲಿಂದ ವಿನಯ್ ಕುಲಕರ್ಣಿ ಅವರೇ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತೊಡೆ ತಟ್ಟಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದಕ್ಕೆ ನ್ಯಾಯಾಲಯ ಸಮ್ಮತಿಯ ಅಗತ್ಯವಿದೆ. ಈ ಕಾರಣಗಳಿಂದಲೇ ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಸ್ಪರ್ಧೆಗೆ ಕಾನೂನಿನ ತೊಡಕು
ಬಿಜೆಪಿ ಮುಖಂಡರಾಗಿದ್ದ ಯೋಗೀಶ್‌ಗೌಡ ಅವರ ಕೊಲೆಯ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಸ್ವಜಿಲ್ಲೆ ಧಾರವಾಡಕ್ಕೆ ಪ್ರವೇಶಿಸದಂತೆ ನ್ಯಾಯಾಲಯವು ನಿರ್ಬಂಧ ಹೇರಿದೆ. ಹೀಗಾಗಿ ಅವರು ಜಿಲ್ಲೆ ಬಿಟ್ಟು ಹೊರಗಡೆ ಇದ್ದಾರೆ. ಈ ಮಧ್ಯೆ 2023 ರ ವಿಧಾನಸಭಾ ಚುನಾವಣೆ ಎದುರಾಗಿದ್ದು, ಮರಳಿ ತಮ್ಮ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಸ್ಪರ್ಧಿಸುತ್ತಾರಾ? ಎಂಬ ಬಗ್ಗೆ ಯಾವುದೇ ನಿಖರತೆ ಈವರೆಗೆ ತಿಳಿದು ಬಂದಿಲ್ಲ.

ಕಳೆದ ಎರಡು ಬಾರಿ ವಿನಯ್ ಕುಲಕರ್ಣಿ ಧಾರವಾಡದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಬಾರಿ ಅವರಿಗೆ ಧಾರವಾಡ ಪ್ರವೇಶಿಸದಂತೆ ನಿಷೇಧವಿದೆ. ಈ ಆದೇಶ ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಆಗ ಸುಪ್ರೀಂ ಕೋರ್ಟ್ ಸ್ಥಳೀಯ ನ್ಯಾಯಾಲಯ ನಿರ್ದೇಶನದಂತೆ ನಡೆದುಕೊಳ್ಳಬಹುದು ಎಂದು ಹೇಳಿತ್ತು.
ಶಿಗ್ಗಾವಿಯಿಂದ ವಿನಯ್ ಕುಲಕರ್ಣಿ ಕಣಕ್ಕೆ: ಕಾಂಗ್ರೆಸ್
ಸದ್ಯ ಸ್ಥಳೀಯ ನ್ಯಾಯಾಲಯವು ಹತ್ಯೆ ಪ್ರಕರಣದಲ್ಲಿ ಜಿಲ್ಲೆ ಬಿಟ್ಟು ಹೊರಗಿರುವ ವಿನಯ್ ಕುಲಕರ್ಣಿಯವರಿಗೆ ಅನುಮತಿ ನೀಡಿದರೆ ಅವರು ಧಾರವಾಡ ಪ್ರವೇಶಿಸಿ ಸ್ವಕ್ಷೇತ್ರದಿಂದ ಸ್ಪರ್ಧಿಸಬಹುದು. ಅನುಮತಿ ದೊರಕದಿದ್ದರೆ ಅವರನ್ನು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ಇಟ್ಟುಕೊಂಡಿದೆ.

ಹೀಗಾಗಿಯೇ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ವಿನಯ್ ಕುಲಕರ್ಣಿಗೆ ಬೇರೆ ಕ್ಷೇತ್ರವಾಗಲಿ, ಇಲ್ಲವೇ ಶಿಗ್ಗಾವಿಯಿಂದ ಅಧಕೃತವಾಗಿ ಕಣಕ್ಕಿಳಿಸುವ ಕುರಿತು ಗೌಪ್ಯತೆ ಕಾಪಾಡಿಕೊಂಡಿದೆ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಬಿಜೆಪಿಯಿಂದ ಒಟ್ಟು 90 ಮಂದಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ ಎನ್ನಲಾಗಿದ್ದು, ಬಿಡುಗಡೆ ಆಗಬೇಕಿದೆ. ಶಿಗ್ಗಾವಿಯಿಂದ ಬಿಜೆಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಖಚಿತ. ಇನ್ನೂ ಸಿಎಂ ಬೊಮ್ಮಾಯಿಯವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಈ ವಿಚಾರವನ್ನು ಸ್ವತಃ ಅವರೆ ತಳ್ಳಿಹಾಕಿದ್ದರು.












Click it and Unblock the Notifications