Karnataka Assembly Election 2023: ಕಾಂಗ್ರೆಸ್-ಬಿಜೆಪಿಯಲ್ಲಿನ ಬಂಡಾಯದ ಲಾಭ ಪಡೆಯುತ್ತಾ ಜೆಡಿಎಸ್?
ಕರ್ನಾಟಕ ವಿಧಾನಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮುಗಿದಿದ್ದು, ರಾಜ್ಯಾದ್ಯಂತ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. ಕಾಂಗ್ರೆಸ್ ಮತ್ತಉ ಬಿಜೆಪಿ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಯತ್ನಿಸುತ್ತಿದ್ದು, ಚುನಾವಣಾ ರಣತಂತ್ರ ರೂಪಿಸುವಲ್ಲಿ ನಿರತವಾಗಿವೆ. ಮತ್ತೊಂದೆಡೆ ಜೆಡಿಎಸ್ ಕೂಡ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಕಾಂಗ್ರೆಸ್-ಬಿಜೆಪಿಯಲ್ಲಿನ ಬಂಡಾಯದ ಲಾಭ ಪಡೆಯುವಲ್ಲಿ ಜೆಡಿಎಸ್ ಸದ್ಯಕ್ಕೆ ಯಶಸ್ವಿಯಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಮೊದಲೇ ಜೆಡಿಎಸ್ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಮಾಡಿತ್ತು. ಎರಡು ಮತ್ತು ಮೂರನೇ ಪಟ್ಟಿ ಬಿಡುಗಡೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿಕೊಂಡು ಟಿಕೆಟ್ ಹಂಚಿಕೆ ಮಾಡಲು ಕಾಯುತ್ತಿದ್ದ ಜೆಡಿಎಸ್‌ಗೆ ಲಾಭವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಪಕ್ಷದ ಬಲವರ್ಧನೆ ಮಾಡುವ ಸುವರ್ಣ ಅವಕಾಶ ಜೆಡಿಎಸ್‌ಗೆ ಸಿಕ್ಕಿದೆ.

ಕಲ್ಯಾಣ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಇದು ಒಳ್ಳೆಯ ಸಮಯವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಲವು ಅಭ್ಯರ್ಥಿಗಳನ್ನು ಜೆಡಿಎಸ್ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಭಾವಿ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ, ಜೆಡಿಎಸ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ, ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಕೂಡ ಇದೆ.
ಕರಾವಳಿ ಮಲೆನಾಡು ಭಾಗಗಳಲ್ಲಿ ಪ್ರಮುಖರು ಜೆಡಿಎಸ್ ತೆಕ್ಕೆಗೆ
ಹಳೇ ಮೈಸೂರು ಭಾಗದಲ್ಲಿ ಮಾತ್ರ ಬಲಿಷ್ಠವಾಗಿರುವ ಜೆಡಿಎಸ್ ಸದ್ಯ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕೂಡ ಪಕ್ಷವನ್ನು ಬಲಪಡಿಸಲು ಉತ್ತಮ ಅವಕಾಶ ಪಡೆದುಕೊಂಡಿದೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೆ ಬಂಡಾಯವೆದ್ದಿದ್ದ ಮಂಗಳೂರು ಉತ್ತರ ಕ್ಷೇತ್ರದ ಪ್ರಭಾವಿ ನಾಯಕ ಮೊಹಿದ್ದಿನ್ ಭಾವಾಗೆ ಜೆಡಿಎಸ್ ಟಿಕೆಟ್ ನೀಡಿದೆ. ಬಿಜೆಪಿಯಿಂದ ಟಿಕೆಟ್ ಸಿಗದ ಮೂಡಿಗೆರೆ ಕ್ಷೇತ್ರದ ಶಾಸಕ ಎಂಪಿ ಕುಮಾರಸ್ವಾಮಿ ಕೂಡ ಕಮಲ ಬಿಟ್ಟು ತೆನೆಹೊತ್ತಿದ್ದಾರೆ.

ಶಿವಮೊಗ್ಗದ ಪ್ರಭಾವಿ ನಾಯಕ ಆಯನೂರು ಮಂಜುನಾಥ್ ಕೂಡ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರಿರುವುದು ಮುಂದಿನ ದಿನಗಳಲ್ಲಿ ಭಾರಿ ಲಾಭವಾಗುವ ಸಾಧ್ಯತೆ ಇದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಬಳಿಕ ಅವರು ಪಕ್ಷಕ್ಕೆ ಗುಡ್‌ಬೈ ಹೇಳಿದ್ದರು. ಜೆಡಿಎಸ್ ಅವರಿಗೆ ಟಿಕೆಟ್ ನೀಡಿದ್ದು, ಗೆಲುವಿನ ಲೆಕ್ಕಾಚಾರದಲ್ಲಿದೆ. ಕಾರವಾರ ಭಾಗದಲ್ಲಿ ಚೈತ್ರಾ ಕೋಟೆಕರ್, ಪುತ್ತೂರು ಕ್ಷೇತ್ರದ ದಿವ್ಯಾ ಪ್ರಭಾಗೌಡ ಜೆಡಿಎಸ್‌ಗೆ ಬಂದಿದ್ದಾರೆ.
ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಬಲಗೊಳ್ಳುತ್ತಾ ಜೆಡಿಎಸ್
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಮೇಲೆ ಜನತೆಗೆ ಒಲವಿದ್ದರೂ ಆ ಭಾಗದ ಪ್ರಭಾವಿ ನಾಯಕರು ಇಲ್ಲದ ಕಾರಣ ಅವು ಮತಗಳಾಗಿ ಪರಿವರ್ತನೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ಸಿಗದ ಮಾಜಿ ಶಾಸಕರು, ಪ್ರಭಾವಿ ನಾಯಕರು ಜೆಡಿಎಸ್ ಸೇರುತ್ತಿದ್ದು ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.
ಕಳೆದ ವರ್ಷ ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್. ಕೋನರೆಡ್ಡಿ ಜೆಡಿಎಸ್ ತೊರೆದಿದ್ದರು. ಜೆಡಿಎಸ್‌ನ ಪ್ರಭಾವಿ ನಾಯಕ ಎಂ.ಸಿ ಮನಗೂಳಿ ನಿಧನರಾಗಿದ್ದರು, ಅವರ ಪುತ್ರ ಅಶೋಕ್ ಮನಗೂಳಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಈ ಬಾರಿ ಈ ಭಾಗದಲ್ಲಿ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ ಎನ್ನುವಂತಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಹಲವು ಪ್ರಭಾವಿಗಳಿಗೆ ಟಿಕೆಟ್ ನಿರಾಕರಿಸಿದ್ದು ಜೆಡಿಎಸ್‌ಗೆ ಭಾರಿ ಲಾಭ ಮಾಡಿಕೊಟ್ಟಿದೆ.
ಗುರುಪುರದ ಗುರುಲಿಂಗಪ್ಪಗೌಡ ಪಾಟೀಲ್, ಜೇವರ್ಗಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಜೆಡಿಎಸ್ ಸೇರಿಕೊಂಡಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಸೂರ್ಯಕಾಂತ್ ನಾಗಮಾರಪಲ್ಲಿ ಜೆಡಿಎಸ್ ಸೇರಿದ್ದು, ಟಿಕೆಟ್ ಪಡೆದುಕೊಂಡಿದ್ದಾರೆ. ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಕೆಟ್ ವಂಚಿತ ಸೌರಭ್ ಚೋಪ್ರಾ ಜೆಡಿಎಸ್ ಕೈಹಿಡಿದಿದ್ದಾರೆ. ಹಾವೇರಿಯಲ್ಲಿ ನೆಹರೂ ಓಲೆಕಾರ್ ಕೂಡ ಜೆಡಿಎಸ್ ಕಡೆ ಮುಖಮಾಡಿದ್ದಾರೆ.
ಬಳ್ಳಾರಿ-ಚಿತ್ರದುರ್ಗದಲ್ಲಿ ಆನೆಬಲ
ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘು ಆಚಾರ್ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಪಾವಗಡದಲ್ಲಿ ಶ್ರೀರಾಮ್, ಮಾಯಕೊಂಡದಲ್ಲಿ ಎಚ್ ಆನಂದಪ್ಪ, ಸವಿತಾಬಾಯಿ ಜೆಡಿಎಸ್‌ಗೆ ಬಂದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಕೂಡ ಜೆಡಿಎಸ್ ಕಾಂಗ್ರೆಸ್-ಬಿಜೆಪಿ ಟಿಕೆಟ್ ವಂಚಿತರಿಗೆ ಗಾಳಹಾಕಿದೆ.
ಬಳ್ಳಾರಿ ಭಾಗದಲ್ಲಿ ಪ್ರಭಾವಿ ನಾಯಕ ಎನಿಸಿಕೊಂಡಿರುವ ಅನಿಲ್ ಲಾಡ್‌ಗೆ ಜೆಡಿಎಸ್ ರಾತ್ರೋ ರಾತ್ರಿ ಟಿಕೆಟ್ ನೀಡಿದೆ. ಮುನ್ನಾಭಾಯಿ ಎನ್ನುವವರಿಗೆ ಟಿಕೆಟ್ ಘೋಷಿಸಿದ್ದ ಜೆಡಿಎಸ್ ನಂತರ ಅಭ್ಯರ್ಥಿಯನ್ನು ಬದಲಿಸಿ ಅನಿಲ್ ಲಾಡ್‌ಗೆ ಮಣೆ ಹಾಕಿದೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್-ಬಿಜೆಪಿಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.
ಜೆಡಿಎಸ್ ಬಿಟ್ಟು ಹೊರನಡೆದಿರುವ ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ, ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಗಳಲ್ಲೇ ಕಣಕ್ಕಿಳಿಸಿದೆ. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೆಚ್‌ಡಿ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ರಾಜ್ಯದಾದ್ಯಂತ ಪ್ರವಾಸ ಮಾಡಿದ್ದು, ಪಕ್ಷವನ್ನು ಬಲಪಡಿಸಲು ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications