ಬಿಎಸ್‌ವೈ ಪ್ರಚಾರಕ್ಕೆ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ, ಸಿದ್ದರಾಮಯ್ಯ ಬೆದರಿದ್ದಾರೆ: ಬಿಜೆಪಿ
ಬೆಂಗಳೂರು, ಅ.14: ಕರ್ನಾಟಕದಲ್ಲಿ ಯಾತ್ರೆಗಳ ಅಬ್ಬರ ಜೋರಾಗಿ ನಡೆಯುತ್ತಿದೆ. ಅತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಸಾಗುತ್ತಿದ್ದರೆ, ಇತ್ತ ಬಿಜೆಪಿಯ ಜನಸಂಕಲ್ಪ ಯಾತ್ರೆ ನಡೆಯುತ್ತಿದೆ. ಇದರ ನಡುವೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಜನಸಂಕಲ್ಪ ಯಾತ್ರೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆದರಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ವಿಚಾರವಾಗಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕೇಸರಿ ಪಕ್ಷ, ' ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇ ತಡ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆವರಿಳಿಯತೊಡಗಿದೆ. ಸಿದ್ದರಾಮಯ್ಯ ಅವರೇ, ತಾವು ವೋಟ್ ಬ್ಯಾಂಕ್ ಆಗಿ ಬಳಸಿದ್ದ ದಲಿತ ಸಮುದಾಯ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸುತ್ತಿರುವುದು ಸಹಿಸಿಕೊಳ್ಳಲಾಗುತ್ತಿಲ್ಲವೇ' ಎಂದು ಪ್ರಶ್ನಿಸಿದೆ.

'ಅಧಿಕಾರವಿದ್ದಾಗ ಪರಿಶಿಷ್ಟ ವರ್ಗದ ಬೇಡಿಕೆಯನ್ನು ಮನ್ನಿಸದೆ ಕಾಲಹರಣ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಈಗ ಬಸವರಾಜ ಬೊಮ್ಮಾಯಿ ಸರ್ಕಾರದ ಮೀಸಲಾತಿ ಹೆಚ್ಚಳ ಬಿಸಿತುಪ್ಪವಾಗಿ ಪರಿಣಮಿಸಿದೆ. ಪರಿಶಿಷ್ಟ ವರ್ಗದವರ ಏಳಿಗೆ ಸಹಿಸದ ಕಾಂಗ್ರೆಸ್ ಮೀಸಲಾತಿ ಹೆಚ್ಚಳವನ್ನು ವಿರೋಧಿಸುತ್ತಿತ್ತು. ಏಕೆ ಈ ದಲಿತ ವಿರೋಧಿ ಮನೋಸ್ಥಿತಿ' ಎಂದು ಕೇಳಿದೆ.
ದಶಕಗಳಿಂದ ವಿದೂಷಕನಾಗಿ ದೇಶದ ಜನರನ್ನು 'ಅಪ್ರಬುದ್ಧ ಬಾಲಕ' (ರಾಹುಲ್ ಗಾಂಧಿ) ನಗಿಸುತ್ತಿದ್ದಾನೆ. ಸಿದ್ದರಾಮಯ್ಯನವರೇ, ಬಟಾಟೆಯಿಂದ ಚಿನ್ನ ತೆಗೆಯುವವ ವಿದೂಷಕನಲ್ಲದೇ ಮತ್ತೇನು ಎಂದು ಪ್ರಶ್ನಿಸಿದೆ.
'ಭಯ ಎನ್ನುವುದು ಮೋದಿ ಸರ್ಕಾರಕ್ಕೆ ಇರುತ್ತಿದ್ದರೆ, ಆರ್ಟಿಕಲ್ 370 ರದ್ದು, ಸಿಎಎ ಕಾನೂನು, ರಾಮಮಂದಿರ ನಿರ್ಮಾಣ, ಟ್ರಿಪಲ್ ತಲಾಕ್ ರದ್ದು, ಸರ್ಜಿಕಲ್ ಸ್ಟ್ರೈಕ್ ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯ ಅವರೇ, ಇವೆಲ್ಲವನ್ನೂ ವಿರೋಧಿಸಿದ ದೇಶದೊಳಗಿನ ದ್ರೋಹಿಗಳಿಂದ ನಮಗೆ ಭಯ ಕಾಡುತ್ತಿರುವುದು ನಿಜ' ಎಂದು ಬಿಜೆಪಿ ಟೀಕಿಸಿದೆ.

'ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಂದಕ ಸೃಷ್ಟಿಯಾಗಿದೆ. ಸಿಎಲ್‌ಪಿ ನಾಯಕರಿಗೂ ಹೇಳದೆ ಟಿಕೆಟ್ ಫೈನಲ್ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅಬ್ಬರಿಸಿದ್ದರು. ಸಿದ್ದರಾಮಯ್ಯನವರಿಗೆ ಒಮ್ಮೆ ಅವಕಾಶ ನೀಡಿ, ಅವರ ನೇತೃತ್ವದಲ್ಲಿ ಚುನಾವಣೆ ಸೋತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದು ಮರೆತು ಹೋಯಿತೇ' ಎಂದು ಕೇಳಿದೆ.
'ನಮ್ಮ ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪನವರು ಪ್ರಚಾರವನ್ನು ಈಗಷ್ಟೇ ಆರಂಭಿಸಿದ್ದಾರೆ. ಅದಾಗಲೇ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ, ಸಿದ್ದರಾಮಯ್ಯ ಬೆದರಿದ್ದಾರೆ. ಜನಸಂಕಲ್ಪ ಯಾತ್ರೆಯ ಆರಂಭದಲ್ಲೇ ಹೀಗಾದರೆ, ಮುಂದೆ ಹೇಗೆ ಸಿದ್ದರಾಮಯ್ಯ' ಎಂದು ಬಿಜೆಪಿ ಪ್ರಶ್ನಿಸಿದೆ.
ಮೀಸಲಾತಿ ವಿಚಾರ: ಸಿದ್ದರಾಮಯ್ಯ ಸರಣಿ ಟ್ವೀಟ್
ಮೀಸಲಾತಿ ವಿಚಾರವಾಗಿ ಗುರುವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, '2013 ರಿಂದ ಈಚೆಗೆ ರಾಜ್ಯದಲ್ಲಿ ನಾವು ಎಸ್‌ಸಿಪಿ/ ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತಂದು ಶೋಷಿತ ಸಮುದಾಯಗಳಿಗೆ ಅನುದಾನವನ್ನು ಕಾದಿರಿಸುವಂತೆ ಮಾಡಿದರೆ, ಬಿಜೆಪಿ ಸರ್ಕಾರ ಈ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಖರ್ಚು ಮಾಡಿ ತಳ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ' ಎಂದು ಹೇಳಿದ್ದಾರೆ.
'ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ತಂದವರು ನಾವು. ಬಿಜೆಪಿ ಸರ್ಕಾರ ₹2 ಕೋಟಿವರೆಗಿನ ಕಾಮಗಾರಿಗಳಿಗೆ ಟೆಂಡರ್ ಕೂಡ ಕರೆಯದೆ ಕೆಆರ್‌ಡಿಸಿಎಲ್ ನವರಿಗೆ ವಹಿಸುವ ನೀತಿ ತಂದಿದೆ. ಇದರಿಂದ ದಲಿತ ಸಮುದಾಯಗಳ ಆರ್ಥಿಕ ಸಬಲೀಕರಣ ಸಾಧ್ಯವೇ' ಎಂದು ಕೇಳಿದ್ದಾರೆ.
'ಮೀಸಲಾತಿಯನ್ನು ವಿರೋಧಿಸಿದವರು, ದಲಿತ- ಹಿಂದುಳಿದ ಸಮುದಾಯದ ಮಕ್ಕಳ ವಿದ್ಯಾರ್ಥಿ ವೇತನ ನಿಲ್ಲಿಸಿದವರು, ಈ ಸಮುದಾಯಗಳ ಜನರಿಗೆ ಮನೆಗಳನ್ನು ನೀಡದವರು, ಉದ್ಯೋಗ ನೀಡದವರು, ಅನ್ನಭಾಗ್ಯದ ಅಕ್ಕಿಗೆ ಕತ್ತರಿ ಹಾಕಿದ ಬಿಜೆಪಿ ಅವರು ಅದು ಹೇಗೆ ಶೋಷಿತರ ಪರವಾಗುತ್ತಾರೆ' ಎಂದು ಟ್ವೀಟ್ ಮಾಡಿದ್ದಾರೆ.
'ನಮ್ಮ ಸರ್ಕಾರದ 5 ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಂದರಿಂದಲೆ ₹10,500 ಕೋಟಿ ಖರ್ಚು ಮಾಡಿದ್ದೆವು. ಬಿಎಸ್‌ವೈ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮಾರ್ಚ್ ವರೆಗೆ ಖರ್ಚು ಮಾಡಿದ್ದು ಕೇವಲ ₹5,700 ಕೋಟಿ. ಇಷ್ಟು ಸಾಕೇ' ಎಂದು ಕೇಳಿದ್ದಾರೆ.
'ದಲಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಬರಲು ಅರಿವು ಎಂಬ ಯೋಜನೆ ತಂದಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಯಡಿ ದಲಿತ ಮತ್ತು ಹಿಂದುಳಿದ ವರ್ಗಗಳ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ? ಎಂಬ ಅಂಕಿ ಅಂಶ ಮಂಡಿಸಿ' ಎಂದು ಹೇಳಿದ್ದಾರೆ.












Click it and Unblock the Notifications