Voter Data Theft : ಬಿಜೆಪಿಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ; ಕಾಂಗ್ರೆಸ್
ಬೆಂಗಳೂರು, ನವೆಂಬರ್ 17; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಆಯುಕ್ತರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಪಕ್ಷ ದೂರಿದೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು.
ರಾಜ್ಯ ಸರ್ಕಾರ ಕಳ್ಳ ಮಾರ್ಗದ ಮೂಲಕ ಮತದಾರರ ಮಾಹಿತಿ ಸಂಗ್ರಹಿಸುತ್ತಿದೆ, ಇದು ಕ್ರಿಮಿನಲ್ ಅಪರಾಧವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

ಮತದಾರರ ಮಾಹಿತಿ ಸಂಗ್ರಹ ಮಾಡುವ ಜವಾಬ್ದಾರಿಯನ್ನು ಚಿಲಮೆ ಎಂಬ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಇದು ಕಳ್ಳದಾರಿಯಲ್ಲಿ ಮಾಹಿತಿ ಸಂಗ್ರಹಿಸುವ ಭಾಗ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ವೋಟರ್ ಐಡಿ ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಈ ಕುರಿತು ಸಮಗ್ರವಾದ ತನಿಖೆ ಆಗಬೇಕು. ಮುಖ್ಯಮಂತ್ರಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಚುನಾವಣಾಧಿಕಾರಿಗಳು ಎಂದು ಗುರುತಿನ ಚೀಟಿ ಹಾಕಿಕೊಂಡು ಪ್ರತಿ ಮನೆಗೆ ಭೇಟಿ ನೀಡುವ ಖಾಸಗಿ ಸಂಸ್ಥೆಯ ಸಿಬ್ಬಂದಿಗಳು ಅಲ್ಲಿ ಸಂಗ್ರಹ ಮಾಡಿದ ಮಾಹಿತಿಯನ್ನು ನಿಗದಿತವಾದ ಗರುಡ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡುತ್ತಿಲ್ಲ. ಬದಲಾಗಿ ವೈಯಕ್ತಿಕ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಜನರು ಇವರು ಸರ್ಕಾರಿ ಅಧಿಕಾರಿಗಳು ಎಂದು ತಿಳಿದು ಮಾಹಿತಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.

ಬೆಂಗಳೂರು ನಗರದಲ್ಲಿ ಮತದಾರರ ಗುರುತಿನ ಚೀಟಿ ಪರಿಷ್ಕರಣೆಗೆ ಜಾಹೀರಾತು ನೀಡಿಲ್ಲ. ಚಿಲುಮೆ ಸಂಸ್ಥೆಗೆ ಕೊಡುವ ಬಗ್ಗೆ ಮಾಹಿತಿಯೇ ಇಲ್ಲ. ಅಕ್ರಮವಾಗಿ ಖಾಸಗಿ ಸಂಸ್ಥೆ ಮಾಹಿತಿ ಸಂಗ್ರಹ ಮಾಡುತ್ತಿರುವುದು, ಇದಕ್ಕೆ ಸಹಕಾರ ನೀಡುತ್ತಿರುವುದು ಕ್ರಿಮಿನಲ್ ಸಂಚಿನ ಭಾಗ ಎಂದು ಕಾಂಗ್ರೆಸ್ ದೂರಿದೆ.
ಸಚಿವರ ಹೆಸರು ಹೇಳದ ನಾಯಕರು; ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಸರ್ಕಾರ ವೋಟರ್ ಐಡಿ ಮಾಹಿತಿ ಕಲೆ ಹಾಕಲು ಅನುಮತಿ ನೀಡಿರುವ ಎರಡು ಸಂಸ್ಥೆಗಳಾದ ಚಿಲುವೆ ಎಂಟರ್ ಪ್ರೈಸಸ್, ಡಿಎಪಿ ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಈ ಎರಡೂ ಸಂಸ್ಥೆಗಳ ಎಂಡಿ ಒಬ್ಬರೇ" ಎಂದು ಹೇಳಿದರು.
"ಈ ಸಂಸ್ಥೆಗಳು ಇವಿಎಂ ಸಿದ್ಧಗೊಳಿಸುತ್ತವೆ. ವೋಟರ್ ಐಡಿ ಅಕ್ರಮದ ಹಿಂದೆ ಸಚಿವರೊಬ್ಬರು ಇದ್ದಾರೆ" ಎಂದು ಆರೋಪಿಸಿದರು. ಸಚಿವರು ಹೆಸರು ಹೇಳದೇ ಕೇವಲ ಅವರ ಕ್ಷೇತ್ರದ ಹೆಸರು ಹೇಳಿ ಸುರ್ಜೇವಾಲಾ ಆರೋಪಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಮತ್ತು ಈ ಖಾಸಗಿ ಸಂಸ್ಥೆಗೆ ಇರುವ ಸಂಬಂಧವೇನು? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಖಾಸಗಿ ಏಜೆನ್ಸಿ ಏಕೆ ಕನ್ನಡಿಗರ ಮಾಹಿತಿಯನ್ನು ಕಳ್ಳತನ ಮಾಡುತ್ತಿದೆ. ಇದು ಖಾಸಗಿತನದ ವಂಚನೆಯ ಪ್ರಕರಣವಾಗಿದೆ ಎಂದು ಪಕ್ಷ ದೂರಿದೆ.
ಗುತ್ತಿಗೆ ನೌಕರರು ಸರ್ಕಾರಿ ನೌಕರರಂತೆ ಬೂತ್ ಲೆವೆಲ್ ಆಫೀಸರ್ ಗುರುತಿನ ಚೀಟಿ ಇಟ್ಟುಕೊಂಡು ಖಾಸಗಿ ಸಂಗ್ರಹ ಮಾಡಿ ಬಳಿಕ ಅದನ್ನು ಕದಿಯಲಾಗುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತವಾದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.












Click it and Unblock the Notifications