ಕಾಂಗ್ರೆಸ್‌ನಿಂದ ಕರ್ನಾಟಕ, ಕನ್ನಡಿಗರಿಗೆ ದ್ರೋಹ, ಪಟ್ಟಿ!
ಬೆಂಗಳೂರು, ನವೆಂಬರ್ 03: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕರ್ನಾಟಕ, ಕನ್ನಡ, ಕನ್ನಡಿಗರಿಗೆ ದ್ರೋಹ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪಕ್ಷ ಹಲವು ಉದಾಹರಣೆಗಳನ್ನು ನೀಡಿದೆ.
ಶುಕ್ರವಾರ ಈ ಕುರಿತು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. #NadaDrohiCongress ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದೆ. 'ದಶಕಗಳಿಂದಲೂ ಕಾಂಗ್ರೆಸ್ ಕರ್ನಾಟಕ, ಕನ್ನಡ, ಕನ್ನಡಿಗರಿಗೆ ದ್ರೋಹವೆಸಗಿ ಕನ್ನಡದ ಅಸ್ಮಿತೆಗೆ ಧಕ್ಕೆ ತಂದಿದೆ. ಆ ಉದಾಹರಣೆಗಳ ಪಟ್ಟಿ' ಎಂದು ಬಿಜೆಪಿ ಪಟ್ಟಿಯೊಂದನ್ನು ನೀಡಿದೆ.

ಬಿಜೆಪಿ ನೀಡಿದ ಉದಾಹರಣೆಗಳ ಪಟ್ಟಿ
* ಗೋಕಾಕ್ ವರದಿ ಜಾರಿಗೆ ಹಿಂದೇಟು
* ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸಲಿಲ್ಲ
* ಕರ್ನಾಟಕದ ರೈಲ್ವೆ ಮದ್ರಾಸಿಗೆ ಕೊಟ್ಟು ವಂಚನೆ
* ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ
* ಕನ್ನಡ, ಕನ್ನಡಿಗರ ಶೌರ್ಯ ಸಾರುವ ಹಂಪಿ ಉತ್ಸವ ಇಲ್ಲ
* ತಾಯಿ ಭುವನೇಶ್ವರಿ ಪ್ರತಿಮೆಗಿಲ್ಲ ಅವಕಾಶ
* ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ ಹಾಕುತ್ತಲೇ ಇದೆ
'ಕಾಂಗ್ರೆಸ್ ಕನ್ನಡದ ಅಸ್ಮಿತೆಯನ್ನು ಉಳಿಸುವುದಕ್ಕಿಂತ ಅಳಿಸುವುದರಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸಿದೆ. ಮತ್ತು ಆ ಕೆಲಸವನ್ನು ಇಂದಿಗೂ ಮುಂದುವರೆಸಿದೆ' ಎಂದು ಬಿಜೆಪಿ ಟ್ವೀಟ್‌ನಲ್ಲಿ ಆರೋಪ ಮಾಡಿದೆ.
ಮಂತ್ರಕ್ಕಿಂತ ಉಗುಳೇ ಜಾಸ್ತಿ; ಕರ್ನಾಟಕ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. 'ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ತಿಂಗಳ ಆಡಳಿತದಲ್ಲಿ ಮಂತ್ರಕ್ಕಿಂತ ಉಗುಳೇ ಜಾಸ್ತಿ' ಎಂದು ಆರೋಪಿಸಿದೆ.
'ಕಾಂಗ್ರೆಸ್ ಶಾಸಕರು ಸರ್ಕಾರವನ್ನು ಸಮರ್ಥಿಸಿಕೊಂಡದ್ದಕ್ಕಿಂತ, ಅಸಮಾಧಾನ ವ್ಯಕ್ತಪಡಿಸಿದ್ದೇ ಹೆಚ್ಚು. ಸಚಿವರಾಗಿರುವವರು ರಾಜ್ಯದ ಅಭಿವೃದ್ಧಿಗಿಂತ ತಮ್ಮ ಕುರ್ಚಿ ಎಷ್ಟು ದಿನ ಉಳಿಯಬಹುದು ಎಂದು ಯೋಚಿಸಿ ಲೂಟಿ ಹೊಡೆದಿದ್ದೇ ಹೆಚ್ಚು' ಎಂದು ಬಿಜೆಪಿ ಹೇಳಿದೆ.
'ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಮಗೆ ವಹಿಸಿದ ಎರಡು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಿಂತ ಸಿಎಂ ಸಿದ್ದರಾಮಯ್ಯರವರ ವಿರುದ್ದ ಯಾವ ಎಂ.ಎಲ್.ಎ. ಹಾಗೂ ಎಂ.ಎಲ್.ಸಿ.ಯವರನ್ನು ಎತ್ತಿ ಕಟ್ಟುವುದು ಹೇಗೆ? ಎಂಬ ಬಗ್ಗೆ ಯೋಚಿಸಿದ್ದೇ ಜಾಸ್ತಿ' ಎಂದು ಟ್ವೀಟ್ ಮಾಡಿದೆ.
'ಇನ್ನು ಸಿಎಂ ಸಿದ್ದರಾಮಯ್ಯ ಅವರು, ತಮಗೆ ಮಗ್ಗುಲ ಮುಳ್ಳಾಗಿರುವ ಡಿಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ರಾಜ್ಯದಲ್ಲಿ ಮತ್ತು ಹೈಕಮಾಂಡ್ ವಲಯದಲ್ಲಿ ಹೇಗೆ ದುರ್ಬಲಗೊಳಿಸುವುದು ಎಂಬುದರಲ್ಲೇ ತಲ್ಲೀನ. ಇಷ್ಟೆಲ್ಲಾ ಅಪಭ್ರಂಶಗಳನ್ನು ಇಟ್ಟುಕೊಂಡು ಸಹ ಕಾಂಗ್ರೆಸ್ ತಾನು ನುಡಿದಂತೆ ನಡೆಯುತ್ತಿದ್ದೇನೆ ಎಂದು ಮಣಗಟ್ಟಲೆ ಜಾಹೀರಾತು ನೀಡುತ್ತಿರುವುದು ನಾಚಿಕೆಯ ಪರಮಾವಧಿ' ಎಂದು ಬಿಜೆಪಿ ಟ್ವೀಟ್ ಮಾಡಿದೆ.
'ಇದೆಲ್ಲದರ ನಡುವೆ ಅತ್ಯಂತ ವಿಚಿತ್ರಕಾರಿ ಸಂಗತಿ ಎಂದರೆ ತಿಂಗಳಿಗೊಮ್ಮೆ ಕಲೆಕ್ಷನ್‌ಗೆ ಬರುವ ಕಲೆಕ್ಷನ್ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ. ಸಿ. ವೇಣುಗೋಪಾಲ್ ಅವರು, ಪ್ರತಿ ಬಾರಿ ಬಂದಾಗ ಜಪಿಸುವ ಒಗ್ಗಟ್ಟಿನ ಮಂತ್ರ ಅವರು ಬೆಂಗಳೂರಿನಿಂದ ಫ್ಲೈಟ್ ಹತ್ತುವ ಮುನ್ನವೇ ಒಡೆದು ಹೋಗಿರುತ್ತದೆ' ಎಂದು ಬಿಜೆಪಿ ಹೇಳಿದೆ.
'ದೆಹಲಿಯ ಸುರ್ಜೆವಾಲಾ ಮತ್ತು ವೇಣುಗೋಪಾಲ್ ಅವರು ತಿಂಗಳಿಗೊಮ್ಮೆ ಶಾಲೆಗಳಲ್ಲಿ ನಡೆಯುವ ಪೇರೆಂಟ್ಸ್ ಮೀಟಿಂಗ್ ರೀತಿ ರಾಜ್ಯಕ್ಕೆ ಬಂದು ಹೋಗುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಕಲೆಕ್ಷನ್ ಮೊತ್ತವನ್ನು ಹೈ ಕಮಾಂಡ್‌ಗೆ ತಲುಪಿಸಲು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟ ಅವರಿಗೂ ಕಸಿವಿಸಿಯನ್ನುಂಟು ಮಾಡಿದ್ದು ಮಾತ್ರ ಸುಳ್ಳಲ್ಲ' ಎಂದು ಬಿಜೆಪಿ ತಿಳಿಸಿದೆ.
'ಅಷ್ಟಕ್ಕೂ ದೆಹಲಿಯ ಸುರ್ಜೆವಾಲಾ ಮತ್ತು ವೇಣುಗೋಪಾಲ್ ಅವರಿಗೆ ಕರ್ನಾಟಕದ ಪ್ರಗತಿಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಆದರೆ ಅವರು ಕಾಂಗ್ರೆಸ್ ಸರ್ಕಾರದ ಒಳಜಗಳಗಳಿಗೆ ತೇಪೆ ಹಚ್ಚುತ್ತಿರುವುದು ತಮಗೆ ಮಂತ್ಲಿ ಬರುತ್ತಿರುವ ಕಲೆಕ್ಷನ್‌ಗೆ ಯಾವುದೇ ಅಡ್ಡಿಯಾಗಬಾರದೆಂಬ ದುರಾಲೋಚನೆಯಷ್ಟೇ' ಎಂದು ಪ್ರತಿಪಕ್ಷ ಹೇಳಿದೆ.
'ಯಾರಾದರೂ ಮಂತ್ರಿಗಳಾಗಲಿ, ಯಾರಾದರೂ ಉಪ ಮುಖ್ಯಮಂತ್ರಿಗಳಾಗಲಿ, ತಮ್ಮ ಒಳಹರಿವು ಯಾವ ಕಾರಣಕ್ಕೂ ನಿಲ್ಲಬಾರದೆಂಬ ದುರಾಸೆ ಕಲೆಕ್ಷನ್ ಏಜೆಂಟರದ್ದು.
ಸರ್ಕಾರದ ಪ್ರಗತಿಯ ಬಗೆಯಾಗಲಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗೆಯಾಗಲಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಬಗೆಯಾಗಲಿ ಇದುವರೆಗೂ ಕಲೆಕ್ಷನ್ ಏಜೆಂಟರು ಬಾಯ್ಬಿಟ್ಟಿಲ್ಲ. ಅವರದ್ದು ಕೇವಲ ಕೊಡಿ, ಇನ್ನಷ್ಟು ಕೊಡಿ, ಮತ್ತಷ್ಟು ಕೊಡಿ, ಬಹಳಷ್ಟು ಕೊಡಿ ಎಂಬ ಮನಸ್ಥಿತಿ!!' ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications