ಬೀಜ ಮೊಳಕೆ ಒಡೆಯುತ್ತಿಲ್ಲ, ಸರ್ಕಾರದ ಕಲೆಕ್ಷನ್ ನಿಲ್ಲುತ್ತಿಲ್ಲ!
ಬೆಂಗಳೂರು, ಆಗಸ್ಟ್ 16: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಟೀಕೆಯನ್ನು ಮುಂದುವರೆಸಿದೆ. 'ಬರಗಾಲ ಬಂದರೂ ತಾನು ಮಾತ್ರ ಬೆಣ್ಣೆ ತಿನ್ನುತ್ತಿರುವ ಈ ಸರ್ಕಾರ' ಎಂದು ಬಿಜೆಪಿ ಟೀಕೆ ಮಾಡಿದೆ.
ಬುಧವಾರ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, #ATMSarkara ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ತನ್ನ ಟ್ವೀಟ್‌ನಲ್ಲಿ, 'ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಬರಗಾಲ ಕೂಡ ಬಲಗಾಲಿಟ್ಟು ವಕ್ಕರಿಸಿಕೊಂಡಿದೆ. ಆದರೆ ಕಾಂಗ್ರೆಸ್ ಪಕ್ಷದ ಮನೋಧೋರಣೆ ಇಂತಿದೆ' ಎಂದು ಪಟ್ಟಿಯನ್ನೇ ನೀಡಿದೆ.
ಬಿಜೆಪಿ ಟ್ವೀಟ್‌ನಲ್ಲಿ ಏನಿದೆ?
* 60ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರಕ್ಕಿಲ್ಲ ತಡೆಯುವ ಚಿಂತೆ.
* ಬಿತ್ತನೆ ಬೀಜ ದರ ನಿಗ್ರಹಕ್ಕೂ ಸರ್ಕಾರ ಒಪ್ಪುತ್ತಿಲ್ಲ, ಕೃಷಿ ಇಲಾಖೆಯ ಕರ್ಮಕಾಂಡಕ್ಕೆ ಕೊನೆಯಿಲ್ಲ.
* ರೈತ ಬಿತ್ತಿದ ಬೀಜ ಮೊಳಕೆ ಒಡೆಯುತ್ತಿಲ್ಲ, ಆದರೂ #ATMSarkara ದ ಕಲೆಕ್ಷನ್ ನಿಲ್ಲುತ್ತಿಲ್ಲ.
* ಬರದ ಬೇಗೆಗೆ ಐವತ್ತಕ್ಕೂ ಹೆಚ್ಚು ತಾಲೂಕುಗಳು ತತ್ತರ, ಸಿದ್ದರಾಮಯ್ಯನವರ ಆಡಳಿತ ಹುಡುಕುತ್ತಿಲ್ಲ ಉತ್ತರ.
* ತುಂಬುತ್ತಿಲ್ಲ ಜಲಾಶಯಗಳ ಒಡಲು, ಆದರೆ ತುಂಬಿ ತುಳುಕುತ್ತಿದೆ ಎಟಿಎಂ ಸರ್ಕಾರದ ಮಡಿಲು.
* ಬರಗಾಲ ಬಂದರೂ ತಾನು ಮಾತ್ರ ಬೆಣ್ಣೆ ತಿನ್ನುತ್ತಿರುವ ಈ ಸರ್ಕಾರದ ಹಸಿವು ನೀಗುವವರೆಗೂ ರೈತನ ಉಸಿರಿಗಿಲ್ಲ ಗ್ಯಾರಂಟಿ.
ಹೀಗೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿರುವ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ, ವರ್ಗಾವಣೆ ದಂಧೆಯನ್ನು ಉಲ್ಲೇಖ ಮಾಡಿದೆ. ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿ ಬರಗಾಲ ಆಗಿರುವ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆಯೂ ಹೇಳಿದೆ.
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ, 'ಹಿಂದೆಂದೂ ಕೇಳರಿಯದ ರೀತಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಪ್ರವೇಶಕ್ಕೇ ನಿರ್ಬಂಧ ಇರಬೇಕಾದ ಕಲೆಕ್ಷನ್ ಏಜೆಂಟರಿಗೆ @INCKarnataka ಕಚೇರಿಯಲ್ಲೇ ಕುರ್ಚಿ ಮಾತ್ರವಲ್ಲ, ಕೊಠಡಿಯೂ ನೀಡಿ ಸಾಕುತ್ತಿದೆ. ಖಾಲಿ ಹುದ್ದೆಗಳಿಗೆ ನೇಮಕಾತಿಗಳನ್ನೂ ಮಾಡದೆ #ATMSarkara ಲಂಚವನ್ನೇ ಅಧಿಕೃತಗೊಳಿಸುತ್ತಿದೆ' ಎಂದು ದೂರಿದೆ.
ಕರ್ನಾಟಕದಲ್ಲಿ ಬರಗಾಲ; ಈ ಬಾರಿಯ ನೈಋತ್ಯ ಮುಂಗಾರು ಮಳೆ ಕೊರತೆಯ ಕಾರಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಜುಲೈ ತಿಂಗಳಿನಲ್ಲಿ ಸುಮಾರು ಒಂದು ವಾರ ಮಾತ್ರ ಮಳೆಯಾಗಿದ್ದು, ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ ಬೇಸಿಗೆ ನೆನಪಿಸುವಂತೆ ಬಿಸಿಲು ಇದೆ.
ರಾಜ್ಯದಲ್ಲಿ ಜೂನ್‌ನಲ್ಲಿ ಶೇ 56, ಜುಲೈನಲ್ಲಿ ಶೇ 3ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಆಗಸ್ಟ್ ತಿಂಗಳಿನಲ್ಲಿ ಮಳೆ ಮತ್ತೆ ಮಾಯವಾಗಿದೆ. ಮಳೆ ಕೊರತೆ ಕಾರಣ ಕೃಷಿ ಚಟುವಟಿಕೆಗಳಿಗೆ ಸಹ ಹಿನ್ನಡೆಯಾಗಿದ್ದು, ಬಿತ್ತನೆ ಕುಂಠಿತಗೊಂಡಿದೆ.
ಜೂನ್‌ನಿಂದ ಸೆಪ್ಟೆಂಬರ್ ತನಕ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಬಾರಿ ಚಂಡಮಾರುತದ ಪರಿಣಾಮ ಮುಂಗಾರು ಆಗಮನವೇ ವಿಳಂಬವಾಯಿತು. ಆದ್ದರಿಂದ ಜೂನ್‌ನಲ್ಲಿ ಶೇ 56ರಷ್ಟು ಮಳೆಯ ಕೊರತೆ ಎದುರಾಯಿತು.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಜೂನ್ 1 ರಿಂದ ಜುಲೈ 31ರ ತನಕ ಕರ್ನಾಟಕದಲ್ಲಿ ಸುರಿಯಬೇಕಿದ್ದ ಸರಾಸರಿ ಮಳೆ 453 ಮಿ. ಮೀ. ಆದರೆ ಈ ವರ್ಷ ಜೂನ್‌ನಲ್ಲಿ ಮಳೆ ಕೊರತೆ ಉಂಟಾಗಿದ್ದು, ಜುಲೈನಲ್ಲಿ ಶೇ 3ರಷ್ಟು ಹೆಚ್ಚು ಮಳೆಯಾಗಿದೆ.
ಮಳೆಯ ಕೊರತೆ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳಿಗೆ ಸಹ ನೀರಿನ ಕೊರತೆ ಉಂಟಾಗಿದೆ.












Click it and Unblock the Notifications