ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಪ್ಪ - ಮಕ್ಕಳ ಕಲರವ, ಯಾರವರು? ಯಾವ ಕ್ಷೇತ್ರ? ತಿಳಿಯಿರಿ
ಬೆಂಗಳೂರು, ಮಾರ್ಚ್ 25: ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಂತ ಹಂತವಾಗಿ ವಿಧಾನಸಭಾ ಕ್ಷೇತ್ರಗಳ ತನ್ನ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸುತ್ತಿವೆ. ಕಾಂಗ್ರೆಸ್ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅಪ್ಪ-ಮಕ್ಕಳ ಟಿಕೆಟ್ ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.
ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ 124 ಕ್ಷೇತ್ರಗಳಲ್ಲಿ ಸ್ಪರ್ಧಿಸುವವರ ಪಟ್ಟಿ ಪ್ರಕಟಿಸಿದೆ. ಅದರಲ್ಲಿ ಪ್ರಮುಖ ಅಭ್ಯರ್ಥಿಗಳು ಸೇರಿದಂತೆ ಹೊಸಬರಿಗೆ ಅವಕಾಶ ನೀಡಿದ್ದರ ಬಗ್ಗೆ ಮಾಹಿತಿ ಇದೆ. ಇದರ ಜೊತೆಗೆ ಒಟ್ಟು ಎಂಟು ಕ್ಷೇತ್ರಗಳು ತಂದೆ-ಮಕ್ಕಳ ಪಾಲಾಗಿದೆ.

ಹಿರಿಯ ರಾಜಕಾರಣಿಯಾಗಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತವರ ಪುತ್ರಿ ಶಾಸಕಿ ಸೌಮ್ಯರೆಡ್ಡಿಯವರು ಟಿಕೆಟ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ವಕ್ಷೇತ್ರಗಳಾದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ರಾಮಲಿಂಗಾ ರೆಡ್ಡಿಯವರು ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಿಂದ ಅವರ ಪುತ್ರಿ ಸೌಮ್ಯ ರೆಡ್ಡಿಯವರು 2023ರ ವಿಧಾನಸಭಾ ಚುನಾವಣೆ ಎದರಿಸಲಿದ್ದಾರೆ.
ರಾಮಲಿಂಗಾ ರೆಡ್ಡಿಯವರು ಕಳೆದ 2018ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. ತಂದೆ ಮಗಳು ಮತ್ತು ಶಾಸಕಿ ಸೌಮ್ಯ ರೆಡ್ಡಿಯವರು ಬಿಜೆಪಿ ವಿರುದ್ಧ ಬಹುಮತ ಗಳಿಸುವಲ್ಲಿ ಸಫಲರಾಗಿದ್ದರು. ಕ್ಷೇತ್ರದಲ್ಲಿ ಇವರಿಬ್ಬರ ಪ್ರಾಬಲ್ಯ ಇರುವ ಹಿನ್ನೆಲೆ ಸರಳವಾಗಿ ಇಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇವರಿಬ್ಬರಿಗೆ ಟಿಕೆಟ್ ಘೋಷಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಎಂ.ಕೃಷ್ಣಪ್ಪ ಮತ್ತವರ ಪುತ್ರ ಪ್ರಿಯಾಕೃಷ್ಣ ಅವರಿಗೂ ಸಹ ಟಿಕೆಟ್ ಲಭಿಸಿದೆ. ಈ ಸಲದ ಚುನಾವಣೆಯಲ್ಲಿಯೂ ವಿಜಯನಗರದಿಂದ ಕ್ಷೇತ್ರದಿಂದ ಎಂ.ಕೃಷ್ಣಪ್ಪ ಅಖಾಡಕ್ಕಿಳಿದರೆ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಪ್ರಿಯಾಕೃಷ್ಣ ಅವರು ಸ್ಪರ್ಧಿಸಲಿದ್ದಾರೆ.

ಈ ಕ್ಷೇತ್ರದಲ್ಲಿ ಪ್ರಿಯಾಕೃಷ್ಣ ಅವರ ವಿರುದ್ಧ ವಸತಿ ಸಚಿವ ಸ್ಥಳಿಯ ಶಾಸಕ ವಿ.ಸೋಮಣ್ಣ ಅವರು ಬಿಜೆಪಿಯಿಂದ ಪೈಪೋಟಿ ನೀಡಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳ ಎರಡಲ್ಲೂ ಬಿಜೆಪಿ ಜಯಗಳಿಸಿದೆ. ಈ ಬಾರಿ ಕಾಂಗ್ರೆಸ್ ತಂದೆ ಮಗನನ್ನು ಕಣಕ್ಕಿಳಿಸಿ ಮತ್ತೊಮ್ಮೆ ಅದೃಷ್ಠ ಪರೀಕ್ಷೆ ಇಳಿದಿದೆ.
ದಾವಣಗೆರೆಯ ಎರಡು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಹಿರಿಯ ಮುತ್ಸದ್ಧಿ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪಾಲಾಗಿದೆ. ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಉತ್ತರದಿಂದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬಿಜೆಪಿ ವಿರುದ್ಧ ಕಣದಲ್ಲಿ ಸೆಣಸಲು ಸಜ್ಜಾಗಲಿದ್ದಾರೆ.
ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕಿ ರೂಪಕಲಾ ಎಂ.ಅವರಿಗೆ ಟಿಕೆಟ್ ಸಿಕ್ಕಿದ್ದರೆ, ಅವರ ತಂದೆ ಕೆ.ಎಚ್.ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಹಣ ಸೇರದಂತೆ ಕೊಡುಗೆಗಳ ಮೂಲಕ ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡಿದ್ದ ಆರೋಪವನ್ನು ಶಾಸಕಿ ರೂಪಕಲಾ ಅವರು ಎದುರಿಸುತ್ತಿದ್ದಾರೆ.
ಟಿಕೆಟ್ ಪಡೆದ ತಂದೆ-ಮಕ್ಕಳ ಪಟ್ಟಿ
* ರಾಮಲಿಂಗಾ ರೆಡ್ಡಿ-ಬಿಟಿಎಂ ಲೇಔಟ್
ಸೌಮ್ಯ ರೆಡ್ಡಿ- ಜಯನಗರ
* ಎಂ.ಕೃಷ್ಣಪ್ಪ- ವಿಜಯನಗರ
ಪ್ರಿಯಾಕೃಷ್ಣ- ಗೋವಿಂದರಾಜ ನಗರ
* ಶಾಮನೂರು ಶಿವಶಂಕರಪ್ಪ -ದಾವಣಗೆರೆ ದಕ್ಷಿಣ
ಎಸ್.ಎಸ್.ಮಲ್ಲಿಕಾರ್ಜುನ್ -ದಾವಣಗೆರೆ ಉತ್ತರ
* ಕೆ.ಎಚ್ ಮುನಿಯಪ್ಪ-ದೇವನಹಳ್ಳಿ
ರೂಪಕಲಾ ಎಂ. ಕೆಜಿಎಫ್












Click it and Unblock the Notifications