ಕಾಂಗ್ರೆಸ್ ಉಚಿತ ಘೋಷಣೆಗಳಿಗೆ ಷರತ್ತುಗಳು ಅನ್ವಯ: ಪರಮೇಶ್ವರ್ ಸ್ಪಷ್ಟನೆ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖವಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅಲ್ಲದೆ ಅಧಿಕಾರಕ್ಕೆ ಬಂದ ತಕ್ಷಣವೇ ಇವುಗಳನ್ನು ಜಾರಿಗೆ ತರುವುದಾಗಿ ಹೇಳಿಕೆ ನೀಡಿತ್ತು. ಈಗ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಕೊರಟಗೆರೆ ಕ್ಷೇತ್ರದ ಶಾಸಕ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಉಚಿತ ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಕೂಡ ಚುನಾವಣಾ ಪ್ರಚಾರದಲ್ಲಿ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿತ್ತಾದರೂ, ಅದಕ್ಕೆ ಷರತ್ತುಗಳ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ. ಈಗ ಪರಮೇಶ್ವರ್ ಮಾತಿನಿಂದ ಅದಕ್ಕೊಂದು ಸ್ಪಷ್ಟನೆ ದೊರೆತಿದ್ದು, ಎಲ್ಲರಿಗೂ ಉಚಿತ ಕೊಡುಗೆಗಳು ಸಿಗುವುದಿಲ್ಲ ಎನ್ನುವ ಸಂದೇಶ ಸಿಕ್ಕಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ್, ಸುಮ್ಮನೆ ಎಲ್ಲರಿಗೂ ಉಚಿತವಾಗಿ ಕೊಡಲು ಆಗಲ್ಲ, ಅದಕ್ಕೆ ಷರತ್ತುಗಳು ಇರಲಿವೆ, ಆಯಾ ಇಲಾಖೆ ಸಚಿವರ ಜೊತೆ ಚರ್ಚೆ ಮಾಡಿ ಅದನ್ನು ನಿರ್ಧರಿಸಲಾಗುವುದು, ಇಲ್ಲವಾದಲ್ಲಿ ಅದರ ದುರ್ಬಳಕೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಡೆಯುವ ಮೊದಲನೇ ಕ್ಯಾಬಿನೆಟ್‌ನಲ್ಲೇ ಚರ್ಚಿಸಿ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. ಮೊದಲ ಕ್ಯಾಬಿನೆಟ್‌ನಲ್ಲಿ ಉಚಿತ ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದೇವೆ, ನಾವು ಅದಕ್ಕೆ ಬದ್ದರಾಗಿದ್ದೇವೆ ಎಂದು ಹೇಳಿದರು.

ಎಲ್ಲರಿಗೂ ಉಚಿತವಾಗಿ ಕೊಟ್ಟರೆ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಇದಕ್ಕೆ ಸಂಪತ್ತು ಕ್ರೋಢಿಕರಣ ಕೂಡ ದೊಡ್ಡ ಸವಾಲಾಗಿದೆ. ವಾರ್ಷಿಕ 60 ಸಾವಿರ ಕೋಟಿ ರುಪಾಯಿ ಈ ಘೊಷಣೆಗಳ ಅನುಷ್ಠಾನಕ್ಕೆ ಖರ್ಚು ಮಾಡಬೇಕು ಎನ್ನಲಾಗಿದೆ. ಕಾಂಗ್ರೆಸ್ ಇದನ್ನು ಹೇಗೆ ನಿಭಾಯಿಸುತ್ತೆ ಎಂದು ನೋಡಬೇಕಿದೆ.
ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಬೇಕು ಎಂದ ಪರಂ
ಕರ್ನಾಟಕ ಸಿಎಂ ಆಯ್ಕೆ ಗೊಂದಲಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಿ ಆಯ್ಕೆ ಆಗಬೇಕು ಅದು ಸಂಪ್ರದಾಯ, ಈ ಬಾರಿ ಕೂಡ ಅದೇ ರೀತಿ ಮಾಡಲಿ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಪರವಾಗಿ ಪರಮೇಶ್ವರ್ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಲ್‌ಪಿ ನಾಯಕರಾಗಿ ಕೆಸಲ ಮಾಡಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಈ ಬಾರಿ ಚುನಾವಣೆ ಎದುರಿಸಿದ್ದೇವೆ. ಈಗ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರಕಿದೆ, ಹೈಕಮಾಂಡ್ ಯಾರು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಆಪ್ತ ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿರಬಹುದು. ಅದು ಶಕ್ತಿ ಪ್ರದರ್ಶನ ಅನ್ನೋದು ಸರಿಯಲ್ಲ, ನಾವು ಬೇಕಾದರೂ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಬಹುದು, ಅದನ್ನು ಶಕ್ತಿ ಪ್ರದರ್ಶನ ಅನ್ನೋದು ಸರಿಯಲ್ಲ ಎಂದರು. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಜವಾಬ್ದಾರಿ ನಿಭಾಯಿಸಲು ಸಿದ್ದ ಎಂದು ಪರಮೇಶ್ವರ್ ತಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎನ್ನುವುದನ್ನು ಮತ್ತೆ ನೆನಪಿಸಿದ್ದಾರೆ.












Click it and Unblock the Notifications