ಅಕ್ಕಿ ರಫ್ತಿಗೆ ಅನುಮತಿ: ಅನ್ನಭಾಗ್ಯ ಯೋಜನೆಗೆ ಬೆಲೆ ಏರಿಕೆ ಬಿಸಿ!
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಮತ್ತೊಂದು ಹಿನ್ನಡೆಯಾಗುವ ಆತಂಕ ಎದುರಾಗಿದೆ. ಈಗಾಗಲೇ ಅಕ್ಕಿ ಸಿಗದ ಕಾರಣ ಕರ್ನಾಟಕ ಸರ್ಕಾರ ಅಕ್ಕಿ ಬದಲು ಬಿಪಿಎಲ್ ಪಡಿತರದಾರರಿಗೆ ಹಣ ನೀಡುತ್ತಿದೆ. ಈಗ ಕೇಂದ್ರ ಸರ್ಕಾರ ಬಾಸುಮತಿಯೇತರ ಅಕ್ಕಿ ರಫ್ತಿಗೆ ಹಸಿರು ನಿಶಾನೆ ನೀಡಿದ್ದು, ರಾಜ್ಯಕ್ಕೆ ಹೊಸ ಸವಾಲು ಎದುರಾಗಿದೆ.
ಅಕ್ಕಿ ರಫ್ತಿಗೆ ಅನುಮತಿ ನೀಡಿರುವ ಕಾರಣ, ಅಕ್ಕಿ ದಾಸ್ತಾನಿನ ಮೇಲೆ ಒತ್ತಡ ಬೀಳಲಿದ್ದು, ಅಕ್ಕಿ ಬೆಲೆ ಹೆಚ್ಚಾಗಲಿದೆ, ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಈಗಾಗಲೇ ಅಕ್ಕಿ ದರ ಹೆಚ್ಚಳವಾಗಿದೆ. ಇದರಿಂದ, ಕರ್ನಾಟಕವು ಎಫ್‌ಸಿಐ ದರದಲ್ಲಿ ಅಕ್ಕಿಯನ್ನು ಸಂಗ್ರಹಿಸಲು ಹೆಚ್ಚು ಕಷ್ಟಕರವಾಗಬಹುದು.

ಮೇ ತಿಂಗಳಿನಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅನ್ನಭಾಗ್ಯ ಭರವಸೆ ಪೂರೈಸಲು ಸಾಕಷ್ಟು ಅಡ್ಡಿ ಆತಂಕ ಎದುರಾಗಿವೆ. ಹಲವು ರಾಜ್ಯಗಳನ್ನು ಸಂಪರ್ಕಿಸಿದ ಹೊರತಾಗಿಯೂ ರಾಜ್ಯಕ್ಕೆ ಅಗತ್ಯವಿರುವ ಅಕ್ಕಿ ದೊರೆಯದ ಕಾರಣ ಸರ್ಕಾರ ಬೇರೆ ದಾರಿಯಿಲ್ಲದೆ ಹಣವನ್ನು ನೀಡುತ್ತಿದೆ.
ಉತ್ಪಾದನೆ ಕೊರತೆ ಆತಂಕ
ಅಕ್ಕಿ ರಫ್ತಿಗೆ ಅನುಮತಿ ನೀಡಿದ್ದ ಬಗ್ಗೆ ಮಾತನಾಡಿದ ಎಫ್‌ಕೆಸಿಸಿಐನ ರಮೇಶ್ ಚಂದ್ರ ಲಾಹೋಟಿ, "ರಫ್ತು ಮಾಡಲು ಬೆಳೆ ಎಲ್ಲಿದೆ? ದಕ್ಷಿಣದ ರಾಜ್ಯಗಳು ಈಗಾಗಲೇ ಬರ ಪರಿಸ್ಥಿತಿ ಎದುರಿಸುತ್ತಿದ್ದು, ದೇಶದ ಒಟ್ಟಾರೆ ಅಕ್ಕಿ ಉತ್ಪಾದನೆಯಲ್ಲಿ ಕರ್ನಾಟಕ ಗಮನಾರ್ಹ ಕೊಡುಗೆ ನೀಡುತ್ತದೆ. ಆದರೆ, ಈ ಮುಂಗಾರಿನಲ್ಲಿ ಮಳೆ ಕಡಿಮೆಯಾದ ಕಾರಣ, ಉತ್ಪಾದನೆ ಗಮನಾರ್ಹವಾಗಿ ಕಡಿಮೆಯಾಗಲಿದೆ" ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಭಾರಿ ಅನೇಕ ಪ್ರದೇಶಗಳಲ್ಲಿ ಸರಾಸರಿ ವಾರ್ಷಿಕ ಅಕ್ಕಿ ಉತ್ಪಾದನೆಯ 50 ಪ್ರತಿಶತ ಮಾತ್ರ ಇರುತ್ತದೆ ಎಂದು ತಜ್ಞರು ಈಗಾಗಲೇ ಮುನ್ಸೂಚನೆ ನೀಡಿದ್ದಾರೆ. ಮೈಸೂರಿನಿಂದ ದಾವಣಗೆರೆಯವರೆಗೆ ಅಕ್ಕಿ ಉತ್ಪಾದನೆಯಲ್ಲಿ ತೀವ್ರ ಕೊರತೆಯಿದೆ. ವಿಸ್ತಾರವಾದ ನೀರಾವರಿ ಸೌಲಭ್ಯ ಇರುವಲ್ಲಿ ಮಾತ್ರ ಉತ್ತಮ ಉತ್ಪಾದನೆಯಾಗುತ್ತದೆ, ಇತರ ಸ್ಥಳಗಳಲ್ಲಿ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿದೆ.
ತಜ್ಞರು ಹೇಳಿದ್ದೇನು?
ಹೆಸರು ಹೇಳಲು ಇಚ್ಛಿಸದ ತಜ್ಞರು ಮಾತನಾಡಿ, "ಅಕ್ಕಿ ರಫ್ತು ರಾಜತಾಂತ್ರಿಕ ವಿಚಾರವಾಗಿದ್ದು ಈ ಬಗ್ಗೆ ಚಿಂತಿಸಬೇಕಿಲ್ಲ, ಇದು ಕೇಂದ್ರ ಸರ್ಕಾರದ ನೀತಿ ನಿರ್ಧಾರವಾಗಿದ್ದು, ಕರ್ನಾಟಕದ ಪರಿಸ್ಥಿತಿ ಜೊತೆ ಸಂಬಂಧ ಹೊಂದಿಲ್ಲ. ಅಕ್ಕಿ ಅತ್ಯಂತ ಅಗತ್ಯವಾಗಿ ಬೇಕಿರುವ ದೇಶಗಳಿಗೆ ರಾಜತಾಂತ್ರಿಕತೆಗಾಗಿ ರಫ್ತು ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
ಇತರೆ ರಾಷ್ಟ್ರಗಳಿಗೆ ರಫ್ತು ಮಾಡಲು ಮೀಸಲು ದಾಸ್ತಾನು ಇದ್ದು ಇದನ್ನು ಕೇಂದ್ರ ಬಳಸಿಕೊಳ್ಳುತ್ತದೆ. ಕರ್ನಾಟಕ ಸರ್ಕಾರ ಅಕ್ಕಿ ಕೊಡುವುದಾಗಿ ಭರವಸೆ ನೀಡಿದೆ ಎಂದ ಮಾತ್ರಕ್ಕೆ ಕೇಂದ್ರ ಸರ್ಕಾರ ಅಕ್ಕಿ ರಾಜತಾಂತ್ರಿಕತೆಯನ್ನು ಬಿಡುವಂತಿಲ್ಲ. ನಾವು ಅಫ್ಘಾನಿಸ್ತಾನಕ್ಕೆ ದೊಡ್ಡ ಪ್ರಮಾಣದ ಗೋಧಿಯನ್ನು ಕಳುಹಿಸಿದ್ದೇವೆ ಏಕೆಂದರೆ ಅವರಿಗೆ ಅದು ಅಗತ್ಯವಾಗಿತ್ತು. ಅದಕ್ಕಾಗಿ ಅವರನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಎಫ್‌ಸಿಐ ಮಾಜಿ ಅಧ್ಯಕ್ಷ ಡಿ ವಿ ಪ್ರಸಾದ್ ಮಾತನಾಡಿ, "ರಫ್ತಿಗೆ ಅನುಮತಿ ನೀಡಿರುವುದು ಕರ್ನಾಟಕಕ್ಕೆ ಹೊರೆಯಾಗುವುದಿಲ್ಲ. ಕೇಂದ್ರ ಸರ್ಕಾರ ಸುಮಾರು 7 ಲಕ್ಷ ಟನ್ ಅಕ್ಕಿಯನ್ನು ಮಾತ್ರ ರಫ್ತು ಮಾಡಲಿದೆ, ಹೆಚ್ಚುವರಿ 5 ಕೆಜಿ ಅಕ್ಕಿಯ ರಾಜ್ಯದ ಅಗತ್ಯದ ಮೇಲೆ ಪರಿಣಾಮ ಬೀರುವುದಿಲ್ಲ." ಎಂದು ಹೇಳಿದ್ದಾರೆ.












Click it and Unblock the Notifications