Government employee; ಕಂಪ್ಯೂಟರ್ ಪರೀಕ್ಷೆ ನೌಕರರಿಗೆ ಗುಡ್ ನ್ಯೂಸ್
ಬೆಂಗಳೂರು, ಫೆಬ್ರವರಿ 08: ಕರ್ನಾಟಕದ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವುದು, ಉತ್ತೀರ್ಣರಾಗುವ ದಿನಾಂಕ ವಿಸ್ತರಣೆ ಮಾಡಿದೆ. ಈ ಕುರಿತು ಕರಡು ಆದೇಶವನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶನಾನುಸಾರ ಮತ್ತು ಅವರ ಹೆಸರಿನಲ್ಲಿ ವೀರಭದ್ರ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) ಆದೇಶವನ್ನು ಹೊರಡಿಸಿದ್ದಾರೆ.

ಆದೇಶದ ವಿವರಗಳು; ಈ ಆದೇಶದಲ್ಲಿ ಸರ್ಕಾರಿ ನೌಕರರು ದಿನಾಂಕ 31/12/2024ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವುದು, ಉತ್ತೀರ್ಣರಾಗಲು ಅವಕಾಶವನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ (14) 8ನೇ ಪ್ರಕರಣದೊಂದಿಗೆ ಓದಲಾದಂತೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಕರ್ನಾಟಕ ನಾಗರಿಕ ಸೇವಾ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಿರುವ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ಈ ಕೆಳಗಿನ ನಿಯಮಗಳ ಕರಡನ್ನು, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಇದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ, ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.
ಸದರಿ ಕರಡು ನಿಯಮಗಳಿಗೆ ಸಂಬಂಧಪಟ್ಟಂತೆ ಮೇಲೆ ಗೊತ್ತುಪಡಿಸಿದ ಅವಧಿ ಕೊನೆಗೊಳ್ಳುವ ಮುಂಚೆ ಯಾರೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಸಲ್ಲಿಸತಕ್ಕದ್ದು ಎಂದು ಆದೇಶ ಹೇಳಿದೆ.
ಕರಡು ನಿಯಮಗಳು
* ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು. ಈ ನಿಯಮಗಳು ಅಧಿಕೃತ ರಾಜ್ಯ ಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
* ನಿಯಮ 2ಕ್ಕೆ ತಿದ್ದುಪಡಿ: ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ಎಂಬ ಪದ ಮತ್ತು ಅಂಕಿಗಳ ಬದಲಿಗೆ ನಿಯಮ 2ರಲ್ಲಿ ದಿನಾಂಕ 31/12/2023 ರೊಳಗೆ ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ 31/12/2024 ರೊಳಗೆ ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ 01/01/2024ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು.
* ನಿಯಮ 3ಕ್ಕೆ ತಿದ್ದುಪಡಿ: ಸದರಿ ನಿಯಮಗಳ ನಿಯಮ 3ರಲ್ಲಿ ಉಪ ನಿಯಮ (1)ರಲ್ಲಿ ದಿನಾಂಕ 31/12/2023ರೊಳಗೆ, ಎಂಬ ಪದ ಮತ್ತು ಅಂಕಿಗಳ ಬದಲಿಗೆ ದಿನಾಂಕ 31/12/2024ರೊಳಗೆ ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ 01/01/2024ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು ಮತ್ತು ಉಪ ನಿಯಮ (2)ರಲ್ಲಿ ದಿನಾಂಕ 31/12/2023ರೊಳಗೆ ಎಂಬ ಪದ ಮತ್ತು ಅಂಕಿಗಳ ಬದಲಿಗೆ ದಿನಾಂಕ 31/12/2024ರೊಳಗೆ, ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ 01/01/2024ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು ಎಂದು ಆದೇಶ ಹೇಳಿದೆ.
ಕರ್ನಾಟಕ ಸರ್ಕಾರ ಆಡಳಿತವನ್ನು ಚುರುಕುಗೊಳಿಸುವ ಸಲುವಾಗಿ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯ ಮಾಡಿದೆ. ಆದ್ದರಿಂದ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಂಡು, ಉತ್ತೀರ್ಣರಾಗುವುದು ಕಡ್ಡಾಯ.
ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರ/ ಸಿಬ್ಬಂದಿಗಳು ಸಹ ತಮ್ಮ ಪರಿವೀಕ್ಷಣಾ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಪರೀಕ್ಷೆಯಲ್ಲಿ ಉತ್ತೀರ್ಣರಾಗದವರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ ಎಂದು ಸರ್ಕಾರದ ತನ್ನ ಆದೇಶದಲ್ಲಿ ತಿಳಿಸಿದೆ.
ಹಿಂದಿನ ಸರ್ಕಾರಗಳು ಸರ್ಕಾರಿ ನೌಕರರ ಬೇಡಿಕೆಯಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಲು, ಉತ್ತೀರ್ಣರಾಗಲು ನೀಡಿದ್ದ ಗಡುವನ್ನು ಎರಡು ಬಾರಿ ವಿಸ್ತರಣೆ ಮಾಡಿತ್ತು. ಈಗ ಪುನಃ ನೌಕರರ ಬೇಡಿಕೆಯಂತೆ ಕಾಲಾವಧಿ ವಿಸ್ತರಣೆ ಮಾಡಲಾಗಿದೆ.












Click it and Unblock the Notifications