ಅರ್ಕಾವತಿ ಬಡಾವಣೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ: ಬಿಡಿಎ ಆಯುಕ್ತ ಕುಮಾರ್ ನಾಯಕ್
ಅರ್ಕಾವತಿ ಬಡಾವಣೆಗೆ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ ರೂ. 490,00 ಕೋಟಿ ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಕುಮಾರ್ ನಾಯಕ್ ಹೇಳಿದರು.
ಬೆಂಗಳೂರು, ಜನವರಿ 31: ಅರ್ಕಾವತಿ ಬಡಾವಣೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಕುಮಾರ್ ನಾಯಕ್ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಡಿಎ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅರ್ಕಾವತಿ ಬಡಾವಣೆಯ ಭೂಸ್ವಾಧೀನತೆಯ ಸಮಸ್ಯೆಗಳ ಹಾಗೂ ಕಾಮಗಾರಿಗಳ ಪ್ರಸ್ತುತ ಪ್ರಗತಿ ಕುರಿತು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅರ್ಕಾವತಿ ಬಡಾವಣೆಯ ಭೂಸ್ವಾಧೀನತೆಯ ಕುರಿತಂತೆ 2003 ರಿಂದಲೂ ಭೂಮಾಲೀಕರು ಪ್ರತಿರೋಧ ವ್ಯಕ್ತಪಡಿಸುತ್ತಿರುವ ಹಾಗೂ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿರುವ ಬಗ್ಗೆ ಮತ್ತು ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಸಮಿತಿಯ ಪ್ರಸ್ತುತ ವಿಚಾರಣೆ ಹಾಗೂ ವರದಿಗಳನ್ನು ನೀಡಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.
ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಸಮಿತಿಯು ಇತ್ತೀಚಿಗೆ ನೀಡಿರುವ 61 ಪ್ರಕರಣಗಳಿಗೆ ವರದಿಗಳ ಬಗ್ಗೆ ಕ್ರಮಕೈಗೊಳ್ಳಲು ಪ್ರಾಧಿಕಾರದ ಮುಂದಿನ ಮಂಡಳಿ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಯಿತು.

ಪ್ರಸ್ತುತ ಅರ್ಕಾವತಿ ಬಡಾವಣೆಯ 13 ಗ್ರಾಮಗಳ ವ್ಯಾಪ್ತಿಯಲ್ಲಿ ರೂ. 234.17 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ, ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗಳು ಬಹುತೇಕ ಮುಕ್ತಾಯ ಹಂತದಲ್ಲಿರುತ್ತದೆ. ಬಡಾವಣೆಗೆ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ ರೂ. 490,00 ಕೋಟಿ ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ, ಬೆಂಗಳೂರು ಜಲಮಂಡಳಿ ರವರಿಗೆ ಪ್ರಥಮ ಹಂತದಲ್ಲಿ ರೂ. 150 ಕೋಟಿಗಳನ್ನು ಈಗಾಗಲೇ ಠೇವಣಿ ಮಾಡಿದ್ದು, ಈಗಾಗಲೇ ಟೆಂಡರನ್ನು ಕರೆಯಲಾಗಿದೆ.
ಬಡಾವಣೆಯ 19ನೇ ಬ್ಲಾಕ್ ಚಳ್ಳಕೆರೆ ಗ್ರಾಮದಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. ವಿದ್ಯುತ್ತೀಕರಣಕ್ಕಾಗಿ ರೂ. 245.45 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.











Click it and Unblock the Notifications