ಸಚಿವ ಆಂಜನೇಯ ವಿರುದ್ಧ ಲೋಕಾಯುಕ್ತಕ್ಕೆ 2 ದೂರು
ಬೆಂಗಳೂರು, ನವೆಂಬರ್ 06 : ಹಾಸ್ಟೆಲ್‌ಗಳಿಗೆ ಆಹಾರ ಧಾನ್ಯ ಪೂರೈಸುವ ಟೆಂಡರ್ ನೀಡಲು ಲಂಚ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮತ್ತು ಅವರ ಪತ್ನಿ ವಿಜಯಾ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಕರ್ನಾಟಕ ಆಮ್ ಆದ್ಮಿ ಪಕ್ಷ ಮತ್ತು ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಗಿರೀಶ್ ಗೌಡ ಎಂಬುವವರು ಪ್ರತ್ಯೇಕವಾಗಿ ಶುಕ್ರವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಹಾಸ್ಟೆಲ್‌ಗಳಿಗೆ ಆಹಾರ ಧಾನ್ಯ ಪೂರೈಸುವ ಟೆಂಡರ್ ನೀಡಲು ಲಂಚ ಪಡೆಯಲಾಗುತ್ತಿದೆ ಎಂದು ಖಾಸಗಿ ವಾಹಿನಿ ಗುರುವಾರ ರಹಸ್ಯ ಕಾರ್ಯಾಚರಣೆಯ ವಿಡಿಯೋ ಪ್ರಸಾರ ಮಾಡಿತ್ತು. [ಸಚಿವ ಆಂಜನೇಯ ಪ್ರಕರಣ : ಯಾರು, ಏನು ಹೇಳಿದರು?]

ಸಚಿವರು ಮತ್ತು ಅವರ ಪತ್ನಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನಿಯ ಅನ್ವಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ದೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ್ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. [ಸಚಿವ ಆಂಜನೇಯ ಪತ್ನಿಯಿಂದಲೇ ಅಕ್ಕಿ ಕಮಿಷನ್ ಡೀಲ್?]
ವರದಿ ಕೇಳಿದ ಹೈಕಮಾಂಡ್ : ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮತ್ತು ಅವರ ಪತ್ನಿ ವಿಜಯಾ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿದೆ ಎಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ.












Click it and Unblock the Notifications