ಹನಿಟ್ರ್ಯಾಪ್ ಬಾಂಬ್ ಸಿಡಿಸಿದ್ದ ಸಚಿವ ರಾಜಣ್ಣ ವಿರುದ್ಧವೇ ದೂರು ದಾಖಲು
ಸದನದಲ್ಲಿ ಎಲ್ಲರೆದುರೇ ಹನಿಟ್ರ್ಯಾಪ್ ವಿಚಾರ ಹೇಳಿ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಹನಿಟ್ರ್ಯಾಪ್ ಬಗ್ಗೆ ಬಾಂಬ್ ಸಿಡಿಸಿದ್ದ ರಾಜಣ್ಣ ಅವರ ನಡೆಯಿಂದ ಕಾಂಗ್ರೆಸ್ ಸರ್ಕಾರ ಕೂಡ ಇಕ್ಕಟ್ಟಿಗೆ ಸಿಲುಕಿತ್ತು, ಹೈಕಮಾಂಡ್‌ನಿಂದಲೂ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಸಚಿವ ರಾಜಣ್ಣ ಅವರ ವಿರುದ್ಧ ಬೆಂಗಳೂರಿನ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಚಿವ ಕೆ.ಎನ್.ರಾಜಣ್ಣ ಅವರು ಪ್ರಮಾಣವಚನ ಸ್ವೀಕಾರದ ವೇಳೆ ಗೌಪ್ಯತೆ ಕಾಪಾಡುತ್ತೇನೆ ಎಂದು ಹೇಳಿದ್ದರು. ಆದರೆ ಸಚಿವರಾಗಿ ಅವರೇ ಸದನದಲ್ಲಿ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಎಂಬುವರು ರಾಜಣ್ಣ ವಿರುದ್ಧ ದೂರು ನೀಡಿದ್ದಾರೆ. ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜಣ್ಣ ಅವರು ನಮ್ಮ ಬಳಿ ಸಿ.ಡಿ ಇದೆ ಎಂದು ಹೇಳಿದ್ದಾರೆ. ಪೊಲೀಸರು ಅವರನ್ನು ಕೊಡಲೇ ವಶಕ್ಕೆ ಪಡೆದು, ಆ ಸಿ.ಡಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಅವರ ವಿರುದ್ಧ ಮುಂದಿನ 48 ಗಂಟೆಯಲ್ಲಿ ಎಫ್ಐಆರ್ ಕೂಡ ದಾಖಲಿಸಬೇಕು. ಇಲ್ಲದಿದ್ದರೆ, ಸರ್ಕಾರದ ವಿರುದ್ಧ ಹೋರಾಟ ಶುರು ಮಾಡುತ್ತೇನೆ ಎಂದು ದೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲಾಗುವ ಸದನದಲ್ಲಿ ಹನಿಟ್ರ್ಯಾಪ್ ವಿಚಾರವನ್ನು ರಾಜಣ್ಣ ಅವರು ಪ್ರಸ್ತಾಪ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಭೀಮಪ್ಪ ಗಡಾದ ಹೇಳಿದ್ದಾರೆ. ಈ ದೂರು ಸ್ವೀಕರಿಸಿರುವ ಪೊಲೀಸರು ಕಾನೂನು ತಜ್ಞರ ಜತೆಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಚಿವರಾದ ಕೆ.ಎನ್.ರಾಜಣ್ಣ ಅವರು ಸದನದಲ್ಲೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿ, ಎಲ್ಲರಿಗೂ ಶಾಕ್ ನೀಡಿದ್ದರು. ನನ್ನ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಬಹಿರಂಗವಾಗಿ ಹೇಳಿದ್ದರು. ನನ್ನ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು, 48 ರಾಜಕೀಯ ನಾಯಕರ ಸಿ.ಡಿ, ಪೆನ್‌ಡ್ರೈವ್ ತಯಾರಾಗಿದೆ ಎಂದು ಬಾಂಬ್ ಸಿಡಿಸಿದ್ದರು. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಈ ವಿಚಾರ ಹೊರಬಂದ ಬಳಿಕ ಹನಿಟ್ರ್ಯಾಪ್ ಬಗ್ಗೆ ಎಲ್ಲೆಡೆ ಬಿರುಸಿನ ಚರ್ಚೆಗಳು ನಡೆದಿತ್ತು.

ನನ್ನ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಇದರ ಬಗ್ಗೆ ನಾನು ದೂರು ಕೊಡುತ್ತೇನೆ. ಗೃಹ ಸಚಿವರು ತನಿಖೆ ನಡೆಸಲಿ ಎಂದು ರಾಜಣ್ಣ ಕೇಳಿಕೊಂಡಿದ್ದರು. ಕರ್ನಾಟಕ ರಾಜ್ಯವು ಇದೀಗ ಸಿಡಿ, ಪೆನ್‌ಡ್ರೈವ್ ಫ್ಯಾಕ್ಟರಿ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ತುಮಕೂರಿನ ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತುಮಕೂರು ಭಾಗದಲ್ಲಿ ಇರೋದು ನನ್ನ ಬಿಟ್ಟರೆ, ಗೃಹಸಚಿವರಾದ ಜಿ.ಪರಮೇಶ್ವರ್ ಮಾತ್ರ ಎಂದು ರಾಜಣ್ಣ ಹೇಳಿದ್ದರು.
ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಸಚಿವ ರಾಜಣ್ಣ ಅವರ ಸರ್ಕಾರಿ ಬಂಗಲೆಯಲ್ಲೇ ಈ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಎರಡು ಬಾರಿ ಆ ಗ್ಯಾಂಗ್ ಭೇಟಿಯಾಗಿತ್ತು. ಜೀನ್ಸ್ ಹಾಕಿದ್ದ ಯುವತಿ ವಕೀಲೆ ಎಂದು ಪರಿಚಯಿಸಿಕೊಂಡಿದ್ದಳು ಎಂದು ರಾಜಣ್ಣ ಹೇಳಿದ್ದರು. ಈ ವಿಚಾರವು ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ರಾಜಣ್ಣ ಅವರು ಸದನದಲ್ಲೇ ಈ ವಿಚಾರ ಪ್ರಸ್ತಾಪಿಸಿದ್ದಕ್ಕೆ ಹೈಕಮಾಂಡ್ ಕೂಡ ಮುನಿಸಿಕೊಂಡಿದೆ.












Click it and Unblock the Notifications