ಸಂಸದ ತೇಜಸ್ವಿ ಸೂರ್ಯ - ಬಿ.ವೈ ವಿಜಯೇಂದ್ರ ನಡುವೆ "ಒಳ್ಳೆ ವಿಚಾರಕ್ಕೆ" ಭರ್ಜರಿ ಪೈಪೋಟಿ!
ಕನ್ನಡ ಭಾಷೆಯ ವಿಚಾರದಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾತನಾಡಿರುವುದು ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಅವರು ಸಂಸದ ತೇಜಸ್ವಿ ಸೂರ್ಯ ಅವರಿಗೆ ಪೈಪೋಟಿ ಕೊಟ್ಟಿದ್ದಾರೆ ಅಥವಾ ಸಂಸದರು ರಿಯಾಕ್ಟ್ ಮಾಡುವ ಮುಂಚೆಯೇ ರಿಯಾಕ್ಟ್ ಮಾಡುವ ಮೂಲಕ ಕಳೆದ ವಾರ ನಡೆದ ರೀತಿ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ಅಂತಲೇ ವಿಶ್ಲೇಷಿಸಲಾಗುತ್ತಿದೆ. ಈಚೆಗೆ ಬೆಂಗಳೂರಿನಲ್ಲಿ ಎಸ್‌ಬಿಐ ಬ್ಯಾಂಕ್ ಲೇಡಿ ಮ್ಯಾನೇಜರ್ ಕನ್ನಡ ಮಾತನಾಡಲ್ಲ ಅಂತ ಹೇಳಿದ್ದು ಭಾರೀ ವಿವಾದವಾಗಿತ್ತು. ಇದಾದ ಮೇಲೆ ಸಂಸದ ತೇಜಸ್ವಿ ಸೂರ್ಯ ಅವರು ರಿಯಾಕ್ಟ್ ಮಾಡಿದ್ದರು. ಆದರೆ ವಿಜಯೇಂದ್ರ ಅವರು ತೇಜಸ್ವಿ ಸೂರ್ಯ ಅವರ ರೀತಿ ಗಂಭೀರವಾಗಿ ಖಂಡನೆ ಮಾಡಿರಲಿಲ್ಲ. ಇದೀಗ ನಟ ಕಮಲ್ ಹಾಸನ್ ವಿಚಾರದಲ್ಲಿ ಗಂಭೀರವಾಗಿ ರಿಯಾಕ್ಟ್ ಮಾಡಿದ್ದಾರೆ.
ನೆಲ - ಜಲ ಹಾಗೂ ಭಾಷೆಯ ವಿಚಾರದಲ್ಲಿ ವಿರೋಧ ಪಕ್ಷಗಳು ಮೊದಲು ಪ್ರತಿಕ್ರಿಯೆ ನೀಡಬೇಕು ಎಂದು ಜನ ನಿರೀಕ್ಷೆ ಮಾಡುತ್ತಾರೆ. ಸರ್ಕಾರದ ತಪ್ಪುಗಳನ್ನು ಟೀಕೆ ಮಾಡುವಂತೆಯೇ ಕನ್ನಡ ನಾಡು ಮತ್ತು ನುಡಿಯ ವಿಚಾರದಲ್ಲಿ ವಿರೋಧ ಪಕ್ಷಗಳೂ ಸಹ ರಿಯಾಕ್ಟ್ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಿಂದ ಈ ರೀತಿ ಗಂಭೀರವಾದ ವಿರೋಧ ಅಥವಾ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿತ್ತು.

ಇದರ ಬೆನ್ನಲ್ಲೇ ಐಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದು. ಮತ್ತೆ ಟ್ವೀಟ್ ಮಾಡಿದ್ದು ಹಾಗೂ ವಿಜಯೇಂದ್ರ, ಆರ್ ಅಶೋಕ್ ಅವರು ಉಗ್ರವಾಗಿ ಖಂಡನೆ ಮಾಡದೆ ಇರುವುದು ವಿರೋಧಕ್ಕೆ ಕಾರಣವಾಗಿತ್ತು. ಆದರೆ, ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ರಿಯಾಕ್ಟ್ ಮಾಡಿದ್ದರು.
ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ಗೆ ಕನ್ನಡಿಗರು ಭಾರೀ ಬೆಂಬಲ ಸೂಚಿಸಿದ್ದರು. ಕನ್ನಡ ಭಾಷೆಯ ಬಗ್ಗೆ ಹಾಗೂ ಕನ್ನಡಾಭಿಮಾನ ವ್ಯಕ್ತಪಡಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರ ನಡೆಗೆ ಕರ್ನಾಟಕದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದರೆ, ಉತ್ತರ ಭಾರತೀಯರು ಸಂಸದ ತೇಜಸ್ವಿ ಸೂರ್ಯ ಅವರ ಮೇಲೆ ಕಿಡಿ ಕಾರಿದ್ದರು. ಇವರು ಈ ರೀತಿ ಮಾತನಾಡಿದರೆ ರಾಷ್ಟ್ರೀಯ ನಾಯಕರು ಹೇಗೆ ಆಗಲಿದ್ದಾರೆ ಎಂದು ಕೆಲವು ನಾರ್ಥಿಗಳು ಪ್ರಶ್ನೆ ಮಾಡಿದ್ದರು. ಆದರೆ ಅದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಸಂಸದ ತೇಜಸ್ವಿ ಸೂರ್ಯಗೆ ಪೈಪೋಟಿ ಕೊಡುವಂತೆ ಇಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎನ್ನುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ರಾಜ್ಯದ ವಿರೋಧ ಪಕ್ಷದ ನಾಯಕರು ಖಡಕ್ ತಿರುಗೇಟು ನೀಡಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಮೊದಲೇ ಹೇಳಿದಂತೆ ಪೈಪೋಟಿಯ ಮೇಲೆ. ನಟ ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಿ ಬಿ.ವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟ್ವೀಟ್ ಮಾಡಿದ್ದಾರೆ.
ಬಿ.ವೈ ವಿಜಯೇಂದ್ರ ಹೇಳಿದ್ದೇನು: ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ. ಅದರಲ್ಲೂ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ ಕಮಲ್ ಹಾಸನ್ ಅವರು ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಆರ್. ಅಶೋಕ್ ಹೇಳಿದ್ದೇನು: ಇನ್ನು ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಹ ಮಾತನಾಡಿದ್ದಾರೆ. "ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ" ಎನ್ನುವ ನಿರರ್ಥಕ ಮಾತುಗಳಿಂದ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿರುವ ಕಮಲ್ ಹಾಸನ್ ಅವರು ರಾಹುಲ್ ಗಾಂಧಿ ಅವರಿಗೆ ಮತ್ತು ಅವರ ಮಿತ್ರ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಸ್ಟಾಲಿನ್ ಅವರಿಗೆ ಪರಮಾಪ್ತರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಹಾಗೂ ಸ್ಟಾಲಿನ್ ಅವರ ಮೂಲಕ ಕಮಲ್ ಹಾಸನ್ ಅವರ ಕಿವಿ ಹಿಂಡಿಸಿ ಇನ್ನೆಂದೂ ಕನ್ನಡ ನಾಡು-ನುಡಿಯ ತಂಟೆಗೆ ಬರದಂತೆ ಎಚ್ಚರಿಕೆ ಕೊಡಿಸಬಹುದೇ? ಅಥವಾ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಕ್ಕಿಂತ ಹೈಕಮಾಂಡ್ ಭಕ್ತಿ ಹಾಗು ರಾಜಕೀಯ ಮೈತ್ರಿಯೇ ದೊಡ್ಡದೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications