7 Pay Commission: ಸರ್ಕಾರಿ ನೌಕರರಿಗೆ 7ನೇ ವೇತನ ಅನುಷ್ಠಾನದ ಕುರಿತು ಬಿಗ್ ಅಪ್ಡೇಟ್
ಕಲಬುರಗಿ, ಜುಲೈ 02: 7 ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರಿ ನೌಕರರ ನಿರಂತರ ಹೋರಾಟಕ್ಕೆ ಜಯ ಸಿಗುವ ಕಾಲ ಹತ್ತಿರವಿದೆ. 7 ನೇ ವೇತನ ಆಯೋಗ ಜಾರಿ ಬಗ್ಗೆ ರಾಜ್ಯದ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಗ್ರೀಸ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಮಾತನಾಡಿ, ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಸರಕಾರ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಈಗಾಗಲೇ ಸರಕಾರಿ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲಾಗಿದೆ. ಮುಂದೆ ಇನ್ನೊಮ್ಮೆ ನೌಕರರ ಸಂಘದವರನ್ನು ಕರೆಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳ ಭರ್ತಿಗೆ ನಮ್ಮ ಸರಕಾರ ಬದ್ಧವಿದೆ. ಒಂದು ವರ್ಷದಲ್ಲಿ 15 ಸಾವಿರದಂತೆ ಎರಡು ವರ್ಷದಲ್ಲಿ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದೆ. ನೌಕರರಿಗೆ ಬಡ್ತಿ ನೀಡುವ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಎಂದರು. ಅಲ್ಲದೇ ಸರಕಾರಿ ನೌಕರರ ಹಕ್ಕುಗಳನ್ನು ಈಡೇರಿಸಲು ಸರಕಾರ ಬದ್ಧವಿದೆ. ಸರಕಾರ ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ನಿಮ್ಮ ಸಹಕಾರ ಅಗತ್ಯವಿದೆ. ಆದ್ದರಿಂದ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ಇನ್ನೂ ಈ ವೇಳೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಶಿಫಾರಸು ಮಾಡಿದಂತೆ ಯಥಾವತ್ ಜಾರಿ ಮಾಡಬೇಕು. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಲ್ಲದೇ ರಾಜ್ಯವು ದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿದೆ. ಇದಕ್ಕೆ ರಾಜ್ಯ ಸರಕಾರಿ ನೌಕರರೇ ಕಾರಣವಾಗಿದ್ದು, ಇದಕ್ಕೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜುಲೈ 4ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸರಕಾರಿ ನೌಕರರ ಏಳನೇ ವೇತನ ಆಯೋಗವನ್ನು ಯಥಾವತ್ ಜಾರಿಗೊಳಿಸಬೇಕು. ಒಪಿಎಸ್ ಸಹ ಜಾರಿ ಮಾಡಬೇಕು. ಜುಲೈ 7ರಂದು ಸರಕಾರಿ ನೌಕರರ ಸಭೆ ಕರೆದಿದ್ದು, ಅಲ್ಲಿ ಏನು ತೀರ್ಮಾನ ಮಾಡಬೇಕೆಂದು ತೀರ್ಮಾನಿಸಲಿದ್ದೇವೆ ಎಂದು ಹೇಳಿದರು.
ಇನ್ನೂ ಬೇರೆ ಜಿಲ್ಲೆಗಳಲ್ಲಿ ಬೇಗ ಬಡ್ತಿ ಸಿಕ್ಕರೆ ಕಲ್ಯಾಣ ಕರ್ನಾಟಕದಲ್ಲಿ ತಡವಾಗಿ ಆಗುತ್ತವೆ. ಈ ಭಾಗದಲ್ಲಿ ಹುದ್ದೆಗಳು ಭರ್ತಿ ಆಗಬೇಕಿದೆ. ಕಲ್ಯಾಣ ಕರ್ನಾಟಕದಲ್ಲಿ ಹುದ್ದೆಗಳು ಖಾಲಿಯಿವೆ. ಬಡ್ತಿ ಸಮಸ್ಯೆಯಿದೆ. ಈ ಭಾಗದ ಭೌಗೋಳಿಕ ಸಮಸ್ಯೆಗಳ ಮಧ್ಯೆಯೇ ನೌಕರರು ಅತ್ಯಂತ ಚನ್ನಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.












Click it and Unblock the Notifications