ಸರ್ಕಾರಿ ಕಚೇರಿಯಲ್ಲಿ ತಡವಾಗಿ ಬಂದ್ರೆ ಸಂಬಳ ಕಟ್!
ಬೆಂಗಳೂರು, ಡಿ.6 : ಕಚೇರಿಗೆ ಸರಿಯಾದ ಸಮಯಕ್ಕೆ ಬರಬೇಕು, ತಡವಾಗಿ ಬಂದರೆ ಸಂಬಳ ಕಟ್ ಇದು ಯಾವುದೋ ಖಾಸಗಿ ಕಂಪನಿ ಉದ್ಯೋಗಿಗಳಿಗೆ ನೀಡಿರುವ ಸೂಚನೆಯಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿನ ಉದ್ಯೋಗಿಗಳಿಗೆ ಹೊರಡಿಸಿರುವ ಆದೇಶ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾದ ಎಸ್.ಎಸ್.ಪಟ್ಟಣಶೆಟ್ಟಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಉದ್ಯೋಗಿಗಳು ತಡವಾಗಿ ಬರುವ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಈ ಸುತ್ತೋಲೆ ಹೊರಬಂದಿದೆ.

ಕಚೇರಿಗೆ ತಡವಾಗಿ ಬಂದರೆ, ಹಿರಿಯ ಅಧಿಕಾರಿಗಳಿಗೆ ತಿಳಿಸದೆ ಬೇಗ ಕಚೇರಿಯಿಂದ ತೆರಳಿದರೆ, ಅನುಮತಿ ಇಲ್ಲದೆ ರಜೆ ಪಡೆದರೆ ಸಂಬಳ ಕಟ್ ಮಾಡುವುದಾಗಿ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಉದ್ಯೋಗಿಗಳು ಬೆಳಗ್ಗೆ 10ಕ್ಕೆ ಕಚೇರಿಯಲ್ಲಿರಲೇಬೇಕು ಎಂದು ಖಡಕ್ ಆದೇಶ ಹೊರಡಿಸಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸುಮಾರು 100 ಸಿಬ್ಬಂದಿಗಳಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಅವರು ಕಚೇರಿಯಲ್ಲಿರಬೇಕು ಎಂಬ ನಿಯಮವಿದೆ. ಆದರೆ, ಕೆಲವರು ಇದನ್ನು ಪಾಲಿಸುತ್ತಿರಲಿಲ್ಲ. ಆದ್ದರಿಂದ ಸುತ್ತೋಲೆ ಹೊರಡಿಸಿ ಎಚ್ಚರಿಕೆ ನೀಡಲಾಗಿದೆ.
ನೌಕರರ ಅಸಮಾಧಾನ : ಒಂದು ವೇಳೆ ಹಿಂದಿನ ದಿನ ರಾತ್ರಿ ಆರೋಗ್ಯ ಹಾಳಾದರೆ ರಜೆ ಪಡಯಬೇಕಾಗುತ್ತದೆ. ಇಂತಹವುಗಳಿಗೆ ಪೂರ್ವಾನುಮತಿ ಪಡೆಯುವುದು ಹೇಗೆ? ಎಂದು ಕಚೇರಿಯಲ್ಲಿನ ಉದ್ಯೋಗಿಗಳು ಪ್ರಶ್ನಿಸಿದ್ದಾರೆ.
ದೂರದ ಊರುಗಳಿಂದ ಬರುವ ಕೆಲವು ಉದ್ಯೋಗಿಗಳು ರೈಲು ಮತ್ತು ಕೆಎಸ್ಆರ್‌ಟಿಸಿ ಬಸ್ಸುಗಳ ಮೂಲಕ ಆಗಮಿಸುತ್ತಾರೆ. ಕೆಲವೊಮ್ಮೆ ಬರುವುದು ತಡವಾಗುತ್ತದೆ. ಆಗ ಸಂಬಳ ಕಟ್ ಮಾಡಿದರೆ ನಾವೇನು ಮಾಡುವುದು ಎಂದು ಕೇಳುತ್ತಿದ್ದಾರೆ.












Click it and Unblock the Notifications