ಸತ್ಯ ಹೇಳಲು ಧಮ್ ಇಲ್ಲ; ಕಲಬುರಗಿಗೆ ಬನ್ನಿ ಎಳನೀರು, ಕಾಫಿ ಟೀ ಎಲ್ಲವನ್ನೂ ಕೊಡ್ತೇವೆ: ಪ್ರಿಯಾಂಕ್ ಖರ್ಗೆ ತಿರುಗೇಟು
ಬೆಂಗಳೂರು, ಡಿಸೆಂಬರ್ 31: ಬಿಜೆಪಿಯಿಂದ ಸುಪಾರಿ ಪೋಸ್ಟರ್ ಅಭಿಯಾನದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ. ಪೇ ಸಿಎಂ ಅಭಿಯಾನ ನಾನೇ ಮಾಡಿದ್ದು ಎಂಬ ವಿಚಾರ ಮಾಧ್ಯಮದಲ್ಲಿ ಬಂದಿತ್ತು. ಆದರೆ ಬಿಜೆಪಿಗರಿಗೆ ಸತ್ಯ ಹೇಳಲು ತಾಕತ್ತು ಧಮ್ಮು ಏನೂ ಇಲ್ಲ. ನನ್ನ ವಿರುದ್ಧ ಪ್ರತಿಭಟನೆ ನಡೆಸಲು ಕಲಬುರಗಿಗೆ ಧಾರಾಳವಾಗಿ ಬನ್ನಿ. ಎಳನೀರು, ಕಾಫಿ ಟೀ ಎಲ್ಲವನ್ನೂ ಕೊಡ್ತೇವೆ ಎಂದು ವ್ಯಂಗ್ಯವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಹಾಗೂ ಪೋಸ್ಟರ್ ಅಭಿಯಾನಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ವಿರುದ್ಧ ಚಳುವಳಿಯನ್ನಾದರೂ ಮಾಡಿ, ಬಟ್ಟೆಯನ್ನಾದರೂ ಹರಿದುಕೊಳ್ಳಿ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ನಾವು ಬದ್ಧ. ಬಿಜೆಪಿ ನಾಯಕರು ದಾಖಲೆ ಇಟ್ಟುಕೊಂಡು ಮಾತನಾಡಲಿ, ನಾನು ಉತ್ತರ ಕೊಡುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಲಾಜಿಕ್ ಇದ್ದರೆ ನಾವು ಉತ್ತರ ಕೊಡಬಹುದು ದಿನ ಬೆಳಗಾದ್ರೆ ಈ ರೀತಿ ಆರೋಪ ಮಾಡಿದರೆ ಹೇಗೆ? ಪ್ರಿಯಾಂಕ್ ಹೆಸರು ಜಪಮಾಡಿದ್ರೆ ಜನ ನಂಬ್ತಾರಾ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ ಅವರು, ಅವರ ಸಿದ್ಧಾಂತ, ನಮ್ಮ ಸಿದ್ಧಾಂತ ಬೇರೆ. ಬಿಜೆಪಿ ಅವರದ್ದು ಆರ್ ಎಸ್ ಎಸ್ ಮನು ಸಿದ್ಧಾಂತ. ಅದಕ್ಕೆ ನಾನು ಮೊದಲಿನಿಂದ ವಿರೋಧವೇ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಈ ಸಿದ್ದಾಂತಕ್ಕೆ ವಿರೋಧಿಗಳು. ಅದಕ್ಕೆ ನನ್ನ ವಿರುದ್ಧ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದರು.
ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇದೆ ಅಂತ ಹೇಳ್ತಾರೆ. ಹಾಗಾದರೆ ಅಶೋಕ್ ಡ್ರಗ್ ಕೇಸ್ ಏನಾಯ್ತು? ಯಡಿಯೂರಪ್ಪ ಕೇಸ್ ಏನಾಯ್ತು? ಸ್ಯಾಂಟ್ರೋ ರವಿ, ಸುನೀಲ್ ಯಾರು? ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.ಗುತ್ತಿಗೆದಾರರ ನಿವಾಸಕ್ಕೆ ಭೇಟಿ ನೀಡುವ ವಿಚಾರವಾಗಿ ಮಾತನಾಡಿದ ಅವರು, ನ್ಯಾಯ ಒದಗಿಸಿಕೊಡಬೇಕು ಅಂತ ಅವರ ಕುಟುಂಬ ಹೇಳಿದೆ ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಇನ್ನೂ ದೆಹಲಿ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಖಾಸಗಿ ಕೆಲಸದ ವಿಚಾರವಾಗಿ ಹೋಗ್ತಾ ಇದ್ದೇನೆ. ಬದಲಾಗಿ ಹೈಕಮಾಂಡ್ ನಾಯಕರ ಭೇಟಿಗೆ ಅಲ್ಲ. ಈಗಾಗಲೇ ಸಿಎಂ, ಡಿಸಿಎಂ ಜೊತೆಗೆ ಮಾತನಾಡಿದ್ದೇನೆ. ನಾನು ಹೈಕಮಾಂಡ್ ಜೊತೆಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪೋಸ್ಟರ್ ಆಂದೋಲನ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಬಿಜೆಪಿ ವತಿಯಿಂದ ಇಂದು ನಗರದಲ್ಲಿ ಪೋಸ್ಟರ್ ಅಂಟಿಸುವ ಆಂದೋಲನ ನಡೆಸಲಾಯಿತು.
ಕೊಲೆಗಡುಕ ಸರಕಾರಕ್ಕೆ ಧಿಕ್ಕಾರ, ನೀತಿಗೆಟ್ಟ ಸರಕಾರಕ್ಕೆ ಧಿಕ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಧಿಕ್ಕಾರ ಮೊದಲಾದ ಘೋಷಣೆಗಳನ್ನು ಕೂಗಲಾಯಿತು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಸಿ.ಟಿ.ರವಿ, ಮುಖಂಡರಾದ ಜಗದೀಶ್ ಹಿರೇಮನಿ, ಉಮೇಶ್ ಶೆಟ್ಟಿ, ಮಾಧ್ಯಮ ಪ್ರಕೋಷ್ಠದ ರಾಜ್ಯ ಸಂಚಾಲಕ ಕರುಣಾಕರ ಖಾಸಲೆ, ಸಹ ಸಂಚಾಲಕ ಪ್ರಶಾಂತ ಕೆಡೆಂಜಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. ಪೋಸ್ಟರ್ ಅಂಟಿಸುವ ಅಭಿಯಾನದಲ್ಲಿ ತೊಡಗಿದ್ದ ಎಲ್ಲರನ್ನೂ ಇದೇವೇಳೆ ಬಂಧಿಸಲಾಯಿತು.












Click it and Unblock the Notifications