Government Employee; ಆಯೋಗಕ್ಕೆ ಪತ್ರ, ನೌಕರರಿಗೆ ಸಿಹಿಸುದ್ದಿ?
ಬೆಂಗಳೂರು, ಮೇ 11: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಏಪ್ರಿಲ್ 26, ಮೇ 7 ಒಟ್ಟು ಎರಡು ಹಂತದಲ್ಲಿ ಮತದಾನ ಮುಗಿದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗುವುದು ಜೂನ್ 4ರಂದು.
ರಾಜ್ಯದಲ್ಲಿ ಮತದಾನ ಮುಗಿದರೂ ಸಹ ಲೋಕಸಭೆ ಮಾದರಿ ಚುನಾವಣಾ ನೀತಿ ಸಂಹಿತೆ ಜೂನ್ 6ರ ತನಕ ಜಾರಿಯಲ್ಲಿರುತ್ತದೆ. ಅಲ್ಲಿಯ ತನಕ ಸರ್ಕಾರ ಯಾವುದೇ ಹೊಸ ಘೋಷಣೆ ಮಾಡುವಂತಿಲ್ಲ. 2024-25ನೇ ಸಾಲಿನ ಬಜೆಟ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಹ ನೀತಿ ಸಂಹಿತೆ ಅಡ್ಡಿಯಾಗಿದೆ.

ರಾಜ್ಯದಲ್ಲಿ ಮತದಾನ ಮುಗಿದಿದೆ, ಆದ್ದರಿಂದ ನೀತಿ ಸಂಹಿತೆಯನ್ನು ಸಡಿಲಗೊಳಿಸಬೇಕು. ರಾಜ್ಯ ಸರ್ಕಾರದ ಯೋಜನೆಗಳ ಅನಷ್ಠಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ. ಇದರಿಂದಾಗಿ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಕ್ಕಿದಂತಾಗಿದೆ.
ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ 7ನೇ ವೇತನ ಆಯೋಗ ಮಾರ್ಚ್ 16ರಂದು ವರದಿ ಸಲ್ಲಿಸಿದೆ. ಆದರೆ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರದಿಯ ಕುರಿತು ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.
ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಪತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ನೀಡಿ, ನೀತಿ ಸಂಹಿತೆ ಸಡಿಲಗೊಳಿಸಿದೆ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮ, ಹೊಸ ಟೆಂಡರ್‌ಗಳು, ಅನುದಾನ ಬಿಡುಗಡೆ, ಸರ್ಕಾರ ನೀಡಿರುವ ಭರವಸೆಗಳ ಈಡೇರಿಕೆಗೆ ಅವಕಾಶ ದೊರೆಯಲಿದೆ. ಇವುಗಳಲ್ಲಿ 7ನೇ ವೇತನ ಆಯೋಗದ ಅನುಷ್ಠಾನ ಸಹ ಸೇರಿದೆ.
ಮುಖ್ಯ ಕಾರ್ಯದರ್ಶಿಗಳ ಪತ್ರದ ವಿವರ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತದಾನ ಮುಕ್ತಾಯಗೊಂಡಿದ್ದರೂ ಸಹ ಮಾದರಿ ಚುನಾವಣಾ ನೀತಿ ಸಂಹಿತೆ ಇನ್ನೊಂದು ತಿಂಗಳು ಜಾರಿಯಲ್ಲಿ ಇರಲಿದೆ. ಇದರಿಂದಾಗಿ ರಾಜ್ಯ ಸರ್ಕಾರ ಯಾವುದೇ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಜೆಟ್ ಯೋಜನೆಗಳು ಏಪ್ರಿಲ್‌ನಿಂದ ಅನಷ್ಠಾನಗೊಳ್ಳಬೇಕಿತ್ತು. ಇದಕ್ಕೆ ಸಹ ಈಗ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಫೆಬ್ರವರಿ 16ರಂದು ರಾಜ್ಯದಲ್ಲಿ ಬಜೆಟ್ ಮಂಡಿಸಲಾಯಿತು. ಮಾರ್ಚ್‌ನಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿತು. ಆದ್ದರಿಂದ ಬಜೆಟ್ ಅನುಷ್ಠಾನಗೊಳಿಸಲಾಗುತ್ತಿಲ್ಲ. ಜೂನ್ ತನಕ ನೀತಿ ಸಂಹಿತೆ ಜಾರಿಯಲ್ಲಿದ್ದರೆ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಆಗಲಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ರಾಜ್ಯ 7ನೇ ವೇತನ ಆಯೋಗದ ಕುರಿತು ಪ್ರಸ್ತಾಪಿಸಿದ್ದರು. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಈಗ ವರದಿ ಸಲ್ಲಿಕೆಯಾಗಿದೆ. ಆದರೆ ಅದರ ಜಾರಿಗೆ ನೀತಿ ಸಂಹಿತೆ ಅಡ್ಡಿಯಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ನೀಡುವುದು ಕಷ್ಟ. ತಮಿಳುನಾಡು ರಾಜ್ಯದಲ್ಲಿಯೂ ಈಗಾಗಲೇ ಲೋಕಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಅಲ್ಲಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹ ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಸಡಿಲಗೊಳಿಸಲು ಕೋರಿ ಪತ್ರ ಬರೆದಿದ್ದರು. ಆದರೆ ಪತ್ರಕ್ಕೆ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರಗಾಲ, ತುರ್ತು ಸಂದರ್ಭದಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡಲು, ಬರ ಪರಿಹಾರ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ. ಲೋಕಸಭೆ ಚುನಾವಣೆ ಒಟ್ಟು 7 ಹಂತದಲ್ಲಿ ನಡೆಯಲಿದೆ. ಜೂನ್ 1ರಂದು 7ನೇ ಹಂತದ ಮತದಾನ ಮುಕ್ತಾಯಗೊಳ್ಳಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದರೂ ಸಹ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಮತದಾನ ಜೂನ್ 3ರಂದು ನಡೆಯಲಿದೆ. ಜೂನ್ 6ರಂದು ಮತ ಎಣಿಕೆ ನಡೆಯಲಿದ್ದು, ಜೂನ್ 12ರ ತನಕ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಆದ್ದರಿಂದ ಮುಖ್ಯ ಕಾರ್ಯದರ್ಶಿಗಳ ಪತ್ರಕ್ಕೆ ಆಯೋಗ ಪ್ರತಿಕ್ರಿಯೆ ನೀಡುವುದು ಅನುಮಾನ.












Click it and Unblock the Notifications