Lok Sabha election 2024: ಬಸ್, ಬಸ್ ನಿಲ್ದಾಣಗಳಿಂದ ರಾಜಕೀಯ ನಾಯಕರು, ಪಕ್ಷದ ಚಿಹ್ನೆಗಳಿಗೆ ಗೇಟ್ ಪಾಸ್
ಬೆಂಗಳೂರು, ಮಾರ್ಚ್ 17: ದೇಶದಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಏಳು ಹಂತಗಳಲ್ಲಿ ದೇಶ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ. ಇದೇ ವೇಳೆ ಮಾದರಿ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಲವು ನಿಯಮಗಳನ್ನು ಹೊರಡಿಸಿದೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ - 2024ಕ್ಕೆ ಸಂಬಂಧಿಸಿದ ಭಾರತ ಚುನಾವಣಾ ಆಯೋಗದ 'ಮಾದರಿ ನೀತಿ ಸಂಹಿತೆ' ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಗಳಲ್ಲಿ ಮತ್ತು ಬಸ್ಸುಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸುವ ಬಗ್ಗೆ ಆದೇಶ ಹೊರಡಿಸಿದೆ.

ಆದೇಶದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ವೇಳಾಪಟ್ಟಿಯು ದಿನಾಂಕ 16-03-2024 ರಂದು ಘೋಷಣೆಯಾಗಿದ್ದು, 'ಮಾದರಿ ನೀತಿ ಸಂಹಿತೆ' ತಕ್ಷಣದಿಂದಲೇ ಜಾರಿಯಾಗಿರುತ್ತದೆ. ಆದ್ದರಿಂದ. ನಿಗಮದ ಬಸ್ ನಿಲ್ದಾಣಗಳು / ಘಟಕಗಳು ಮತ್ತು ಬಸ್ಸುಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸುವ ಸಂಬಂಧ. ಕೆಳಕಂಡಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಪತ್ರಿಕಾ ಪ್ರಕಟಣ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕ್ರಮಗಳು ಹೀಗಿವೆ
1. ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಿಗಮದ ಬಸ್ಸುಗಳ ಮೇಲೆ, ಹಾಗೂ ಬಸ್ ನಿಲ್ದಾಣ / ಘಟಕಗಳಲ್ಲಿ ಹೋರ್ಡಿಂಗ್ಸ್ ಮತ್ತು ಗ್ಲೋಸೈನ್ ಫಲಕಗಳಲ್ಲಿ, ಯಾವುದೇ ರಾಜಕೀಯ ನೇತಾರರ ಭಾವಚಿತ್ರ / ರಾಜಕೀಯ ಪಕ್ಷ / ವ್ಯಕ್ತಿ / ವಿಷಯಗಳಿಗೆ ಸಂಬಂಧಿಸಿದ ಜಾಹೀರಾತುಗಳು ಇದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯ ಕ್ರಮ ವಹಿಸಬೇಕು.
2. ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ, ನಿಗಮದ ಬಸ್ಸುಗಳ ಮೇಲೆ, ಬಸ್ ನಿಲ್ದಾಣ / ಘಟಕಗಳಲ್ಲಿ ಹೋರ್ಡಿಂಗ್ಸ್ ಮತ್ತು ಗ್ಲೋಸೈನ್ ಫಲಕಗಳಲ್ಲಿ, ಯಾವುದೇ ರಾಜಕೀಯ ನೇತಾರರ ಭಾವಚಿತ್ರ / ರಾಜಕೀಯ ಪಕ್ಷ / ವ್ಯಕ್ತಿ / ವಿಷಯಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಕ್ರಮವಹಿಸಬೇಕು.
3. ಒಂದು ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಯ ಅವಧಿಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲ, ಚುನಾವಣಾ ಆಯೋಗದ ಕ್ರಮಕ್ಕೆ ಸಂಬಂಧಿಸಿದವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಆದೇಶಿಸಿದೆ. ಈ ಕ್ರಮಗಳ ಬಗ್ಗೆ ಮಾರ್ಚ್ 18ರ ಬೆಳಗ್ಗೆ 11.00 ಗಂಟೆಯೊಳಗಾಗಿ ಅನುಸರಣಾ ವರದಿ ನೀಡಬೇಕು ಎಂದು ಎಲ್ಲಾ ನಿಗಮಗಳಿಗೂ ಸೂಚನೆ ನೀಡಿದೆ.












Click it and Unblock the Notifications