ಚಿಕ್ಕಬಳ್ಳಾಪುರದ ದೇವರಿಗೆ ವೀರಪ್ಪ ಮೊಯ್ಲಿ ಆಮಿಷ!
ಚಿಕ್ಕಬಳ್ಳಾಪುರ, ಮಾ 21: ಜಿಲ್ಲೆಯ ನಂದಿಗ್ರಾಮದಲ್ಲಿರುವ ಐತಿಹಾಸಿಕ ಭೋಗ ನಂದೀಶ್ವರ ದೇವಾಲಯದಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಐದು ಸಾಮ್ರಾಜ್ಯಗಳ ಚಕ್ರವರ್ತಿಗಳಿಂದ ಪೂಜಿಸಲ್ಪಟ್ಟ ಈ ಪುರಾಣ ಪ್ರಸಿದ್ದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲು ಮೊಯ್ಲಿ ತನ್ನ ಬೆಂಬಲಿಗರೊಂದಿಗೆ ಆಗಮಿಸಿದ್ದರು.
ಪೂಜೆಯ ನಂತರ ಅರ್ಚಕರು ತಂದ ಮಂಗಳಾರತಿ ತಟ್ಟೆಗೆ ಐನೂರು ರೂಪಾಯಿ ಮುಖಬೆಲೆಯ ಎರಡು ನೋಟನ್ನು ಹಾಕಿದರು. ಇದು ಚುನಾವಣಾ ವೀಕ್ಷಕರ ಕಣ್ಣಿಗೆ ಬಿದ್ದಿದೆ. ಇದು ಚುನಾವಣಾ ಮಾದರಿ ರೀತಿ ಸಂಹಿತೆಗೆ ವಿರುದ್ದ ಎಂಬ ತಕರಾರನ್ನು ವೀಕ್ಷಕರು ಎತ್ತಿದ್ದಾರೆ. (ಚುನಾವಣಾ ಆಯೋಗದ ಪ್ರಯತ್ನಕ್ಕೆ ಸಹಕಾರಿಯಾಗಿ)

ಇದಲ್ಲದೇ, ವಿಶೇಷ ಪೂಜೆಯ ನಂತರ ದೇಗುಲಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಮೊಯ್ಲಿ, ಅಷ್ಟೇನೂ ಅಭಿವೃದ್ದಿ ಕಾಣದ ಮುಜರಾಯಿ ವ್ಯಾಪ್ತಿಯ ಈ ದೇವಾಲಯದ ಜೀರ್ಣೋದ್ದಾರದ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ಮತ್ತು ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಆಗಲೂ ಚುನಾವಣಾ ವೀಕ್ಷಕರು ಮೊಯ್ಲಿ ಅವರ ಕ್ರಮಕ್ಕೆ ಆಕ್ಷೇಪ ಎತ್ತಿದ್ದಾರೆ. ವೀಕ್ಷಕರ ಆಕ್ಷೇಪಕ್ಕೆ ತಕರಾರೆತ್ತದೇ ಮೊಯ್ಲಿ ಅಲ್ಲಿಂದ ನಿರ್ಗಮಿಸಿದರು. (ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ)
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಎನ್ ಬಚ್ಚೇಗೌಡ ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಜೆಡಿಎಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿಲ್ಲ, ಬಹುತೇಕ ಈ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧಿಸುವುದು ಖಾತ್ರಿಯಾಗಿದೆ.
ಭೋಗ ನಂದೀಶ್ವರ ದೇವಾಲಯದ ಬಗ್ಗೆ ಸಂಕ್ಷಿಪ್ತ ಮಾಹಿತಿ: ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಈ ದೇವಾಲಯಕ್ಕೆ 1200 ವರ್ಷಗಳ ಇತಿಹಾಸವಿದೆ. ಈ ದೇವಾಲಯವನ್ನು ಬಾನಾದ ರಾಣಿ ರತ್ನಾವತಿ ನಿರ್ಮಿಸಿದಳು ಎನ್ನುತ್ತದೆ ಇತಿಹಾಸ.

ಗಂಗ, ಚೋಳ, ಹೊಯ್ಸಳ, ಪಲ್ಲವ ಮತ್ತು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಿಂದ ಪೂಜಿಸಲ್ಪಟ್ಟ ದೇವಾಲಯ ಇದಾಗಿದ್ದು, ದೇವಾಲಯದಲ್ಲಿ ಚೋಳರ ರಾಜ ರಾಜೇಂದ್ರನ ಪ್ರತಿಮೆಯನ್ನು ಕಾಣಬಹುದಾಗಿದೆ.
ಮಂದಿರದ ಆವರಣದಲ್ಲಿ ಅರುಣಾಚಲೇಶ್ವರ, ಉಮಾ ಮಹೇಶ್ವರ ಮತ್ತು ಭೋಗ ನಂದೀಶ್ವರ ಹೀಗೆ ಮೂರು ದೇವಾಯಲಗಳಿವೆ. ದೇವಾಲಯದ ಮುಂದೆ ನಂದಿಯ ದೊಡ್ಡ ಆಕರ್ಷಕ ಮೂರ್ತಿಯನ್ನು ಕಾಣಬಹುದಾಗಿದೆ. ಬೆಂಗಳೂರು ನಗರದಿಂದ ಸುಮಾರು ಎರಡು ತಾಸು ಪ್ರಯಾಣದ ಈ ಐತಿಹಾಸಿಕ ದೇವಾಲಯವನ್ನು ಬಿಡುವಿದ್ದರೆ ಒಮ್ಮೆ ನೋಡಿಕೊಂಡು ಬನ್ನಿ. [ಬಿರುಸಿನ ಮತಯಾಚನೆ ಚಿತ್ರಗಳು]












Click it and Unblock the Notifications