Coconut: ರಾಜ್ಯದಲ್ಲಿ ತೆಂಗಿನಕಾಯಿ ಬೆಲೆಯಲ್ಲಿ ಭಾರಿ ಕುಸಿತ
Coconut: ರಾಜ್ಯದ ಪ್ರಮುಖ ಕೃಷಿ ಉತ್ಪನ್ನಗಳಲ್ಲಿ ಒಂದಾದ ತಂಗಿನಕಾಯಿ ಬೆಲೆಯಲ್ಲಿ ಈ ಬಾರಿ ಭಾರಿ ಕುಸಿತ ಕಂಡುಬಂದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಹಾಗಾದ್ರೆ ಇದಕ್ಕೆ ಕಾರಣ ಏನು ಹಾಗೂ ಪ್ರಸ್ತುತ ಧಾರಣೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2025ರ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ತೆಂಗಿನಕಾಯಿಗೆ 70ರಿಂದ 80 ರೂಪಾಯಿವರೆಗೆ ಬೆಲೆ ಇತ್ತು. ಆದರೆ ಈ ವರ್ಷ ಮಂಡಿಗಳಲ್ಲಿ 46 ರಿಂದ 48 ರೂಪಾಯಿಗೆ ದರ ಕುಸಿದಿದೆ. ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿದ್ದರಿಂದ ರೈತರು ಈ ಬಾರಿ ಹೆಚ್ಚಿನ ಇಳುವರಿ ಪಡೆದು ಮಾರುಕಟ್ಟೆಗೆ ತಂದಿದ್ದು, ಪೂರೈಕೆ ಹೆಚ್ಚಾಗಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಕಳೆದ ವರ್ಷ ಮಾರುಕಟ್ಟೆಯಲ್ಲಿ ತಂಗಿನಕಾಯಿಗಿಂತ ಎಳನೀರಿಗೆ ಹೆಚ್ಚಿನ ಬೇಡಿಕೆ ಮತ್ತು ಉತ್ತಮ ಧಾರಣೆ ಸಿಕ್ಕಿತ್ತು. ಇದರಿಂದಾಗಿ ಹೆಚ್ಚಿನ ರೈತರು ಕಾಯಿ ಬರುವ ಮುನ್ನವೇ ಎಳನೀರು ಕಿತ್ತು ಮಾರಾಟ ಮಾಡಿದ್ದರು. ಇದರಿಂದಾಗಿ ತೆಂಗಿನಕಾಯಿ ಪೂರೈಕೆ ಕಡಿಮೆಯಾಗಿ ಬೆಲೆ 80 ರೂಪಾಯಿವರೆಗೆ ಏರಿಕೆಯಾಗಿತ್ತು.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಏನು?
ಆದರೆ ಈ ಬಾರಿ ತೆಂಗಿನಕಾಯಿಗೂ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಎಳನೀರು ಕೀಳದೆ, ಕಾಯಿ ಆಗುವವರೆಗೂ ಬಿಟ್ಟು ಫಸಲು ತೆಗೆದಿದ್ದಾರೆ. ಅಲ್ಲದೆ, ಇಳುವರಿಯೂ ಹೆಚ್ಚಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಇದೆ. ಇದರಿಂದಾಗಿ ದಾರಣೆಯಲ್ಲಿ ಭಾರಿ ಕುಸಿತವಾಗಿದೆ.
ಮಂಡಿಗಳಿಗೆ ಹರಿದುಬರುತ್ತಿರುವ ತೆಂಗಿನ ಕಾಯಿ ರಾಶಿ
ತುಮಕೂರು, ತಿಪಟೂರು, ರಾಮನಗರ, ಮಂಡ್ಯದ ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ಹಿರಿಯೂರು, ಅರಸೀಕೆರೆ, ಬೆಂಗಳೂರಿನ ದಾಸನಪುರ, ಯಶವಂತಪುರ, ಹಾಸನ, ಚಿತ್ರದುರ್ಗ, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದ ಕುಂದಾಪುರ, ಕುಮಟಾ, ಹೊನ್ನಾವರ ಸೇರಿದಂತೆ ರಾಜ್ಯದ 226 ಪ್ರಮುಖ ಎಪಿಎಂಸಿ ಮಂಡಿಗಳಿಗೆ ಅಕ್ಟೋಬರ್ ಮೊದಲ ವಾರದಲ್ಲೇ ಟನ್‌ಗಟ್ಟಲೆ ತೆಂಗಿನಕಾಯಿ ಪೂರೈಕೆಯಾಗುತ್ತಿದೆ.
ಕಳೆದ ವರ್ಷ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಒಂದು ತೆಂಗಿನಕಾಯಿಯ ಬೆಲೆ 60 ರಿಂದ 70 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಪ್ರಸ್ತುತ ಬೆಲೆ ಕುಸಿತದ ಪರಿಣಾಮ ಚಿಲ್ಲರೆ ಅಂಗಡಿಗಳಲ್ಲಿ ಗುಣಮಟ್ಟದ ಒಂದು ತೆಂಗಿನಕಾಯಿ 20 ರಿಂದ 30 ರೂಪಾಯಿಗೆ ಲಭ್ಯವಾಗುತ್ತಿದ್ದು, ಗ್ರಾಹಕರಿಗೆ ತುಸು ಹೊರೆ ಕಡಿಮೆಯಾಗಿದೆ. ಆದರೆ ಬೆಳೆಗಾರರಿಗೆ ನಷ್ಟ ಆದಂತಾಗಿದೆ.
'ಜುಲೈನಿಂದ ನವೆಂಬರ್‌ವರೆಗೆ ತೆಂಗಿನಕಾಯಿ ಸೀಸನ್ ಇರುವುದರಿಂದ ಈ ಅವಧಿಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಇರುತ್ತದೆ. ಡಿಸೆಂಬರ್ ಬಳಿಕ ಆವಕ ಕಡಿಮೆಯಾದರೆ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ,' ಎಂದು ತಿಪಟೂರು ತೆಂಗಿನಕಾಯಿ ಮಂಡಿ ವರ್ತಕರು ಹೇಳಿದ್ದಾರೆ. 'ಅಲ್ಲದೆ ಸರ್ಕಾರವು ತೆಂಗಿನಕಾಯಿ ಖರೀದಿಗೆ ಬೆಂಬಲ ಬೆಲೆ ಘೋಷಿಸುವ ಅಗತ್ಯವಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರವೇ ತೆಂಗಿನಕಾಯಿ ನೇರ ಖರೀದಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು,' ಎಂದು ಬಗಿನಗೆರೆ ರೈತ ರಂಗಸ್ವಾಮಿ ಅವರು ಹೇಳಿದ್ದಾರೆ ಅಂತಾ ವಿಜಯ ಕರ್ನಾಟಕ ವರದಿ ಮಾಡಿದೆ.
ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಏರಿಕೆ
ಮತ್ತೊಂದೆಡೆ ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ಪ್ರಸಿದ್ಧ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು ಏರಿಕೆಯಾಗುದೆ. ಇದರಿಂದ ತೆಂಗು ಬೆಳೆಗಾರರ ಮೊಗದಲ್ಲಿ ಮಾಯವಾಗಿದ್ದ ಸಂತಸ ಮತ್ತೆ ಬಂದಂತಾಗಿದೆ. ಹಾಗಾದ್ರೆ ಪ್ರಸ್ತುತ ಕ್ವಿಂಟಾಲ್ ಧಾರಣೆ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ತಿಪಟೂರು ಎಪಿಎಂಸಿ ಮಾರುಕಟ್ಟಯಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕ್ವಿಂಟಾಲ್ ಕೊಬ್ಬರಿ ಧಾರಣೆ 27,000 ರೂಪಾಯಿ ಆಸುಪಾಸಿಗೆ ಇಳಿಕೆಯಾಗಿತ್ತು. ಆದರೆ ಇದೀಗ ಇಂದು (ಅಕ್ಟೋಬರ್ 08) ದಿಢೀರ್ ಏರಿಕೆಯಾಗಿದೆ. 100 ಕೆ.ಜಿಗೆ ಗರಿಷ್ಠ ಬೆಲೆ ₹28,825 ತಲುಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣ ಏನು?
ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಉತ್ತಮ ದರ್ಜೆಯ ತಿಪಟೂರು ಕೊಬ್ಬರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ಕೆಲವು ಸಮಯದಿಂದ ಆವಕದಲ್ಲಿ ಕೊರತೆ ಕಂಡುಬಂದಿದ್ದರೂ, ಗುಣಮಟ್ಟದ ಕೊಬ್ಬರಿಯ ಪೂರೈಕೆ ಕಡಿಮೆ ಇರುವುದು ಮತ್ತು ಎಣ್ಣೆ ಉತ್ಪಾದಕರು ಹಾಗೂ ವರ್ತಕರಿಂದ ಹೆಚ್ಚಿನ ಸ್ಪರ್ಧಾತ್ಮಕ ಟೆಂಡರ್ ಸಲ್ಲಿಕೆ ಆಗುತ್ತಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಬೆಳಗಾರರ ಮುಖದಲ್ಲಿ ಸಂತಸ
ಕಳೆದ ಕೆಲವು ದಿನಗಳಿಂದ ತೆಂಗು ಬೆಳೆಗಾರರು ಎದುರಿಸಿದ್ದ ನಷ್ಟ ಹಾಗೂ ಮಾರುಕಟ್ಟೆಯ ಏರಿಳಿತಗಳಿಗೆ ಪ್ರಸ್ತುತ ಸಿಗುತ್ತಿರುವ ಈ ಗರಿಷ್ಠ ದರವು ದೊಡ್ಡ ಮಟ್ಟದ ಭರವಸೆ ನೀಡಿದೆ. ₹28,000ರ ಗಡಿ ದಾಟಿ ಮುನ್ನುಗ್ಗುತ್ತಿರುವ ಬೆಲೆಯಿಂದಾಗಿ ಕಲ್ಪತರು ನಾಡಿನ ರೈತರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಮಾಹಿತಿ ಪ್ರಕಾರ, ಮುಂಬರುವ ಹಬ್ಬದ ಸೀಸನ್‌ನಲ್ಲಿ ಮತ್ತಷ್ಟು ಏರಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications
