ಪಕ್ಷೇತರರಿಗೆ ಮಣೆ ಹಾಕಿ ದಿಟ್ಟ ಹೆಜ್ಜೆ ಇಟ್ಟ ಮೈತ್ರಿ: ಮುಂದೇನು?
ಬೆಂಗಳೂರು, ಜೂನ್ 14: ಅತೃಪ್ತರು ಸರ್ಕಾರ ಅಲುಗಾಡಿಸಲು ಹಾರೆ, ಗುದ್ದಲಿ ಹಿಡಿದು ತಯಾರಾಗಿದ್ದರೂ ಸಹ ಅವರನ್ನು ಅಲಕ್ಷಿಸಿ ಪಕ್ಷೇತರರಿಗೆ ಮೈತ್ರಿ ನಾಯಕರು ಮಣೆ ಹಾಕಿದ್ದಾರೆ.
ಪಕ್ಷೇತರರಾಗಿ ಗುರುತಿಸಿಕೊಂಡಿದ್ದ ಆರ್.ಶಂಕರ್ ಮತ್ತು ಮುಳಬಾಗಿಲು ಶಾಸಕ ಎಚ್.ನಾಗೇಶ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಇಬ್ಬರೂ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿಶೇಷವೆಂದರೆ ಆರ್.ಶಂಕರ್ ಅವರು ಕೆಪಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದರು. ಅದನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಲಾಗಿದ್ದು, ಇನ್ನು ಮುಂದೆ ಅವರಿಗೆ ಕಾಂಗ್ರೆಸ್ ವಿಪ್ ಸೇರಿದಂತೆ ಇನ್ನೂ ಕೆಲವು ನಿಬಂಧನೆಗಳನ್ನು ಹೇರಲು ಸಾಧ್ಯ ಎನ್ನಲಾಗಿದೆ.
ಪಕ್ಷೇತರ ಶಾಸಕರಿಗೆ ಯಾವುದೇ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುವುದಿಲ್ಲ. ಆರ್.ಶಂಕರ್ ಅವರು ಕೆಪಿಜೆಪಿ ಯಿಂದ ಆಯ್ಕೆ ಆಗಿದ್ದರೂ ಸಹ ಅವರ ಪಕ್ಷಕ್ಕೆ ಅವರೇ ನಾಯಕರಾದ್ದರಿಂದ ಪಕ್ಷದ ಯಾವುದೇ ನಿಬಂಧನೆಗಳು ಅವರಿಗೆ ಅನ್ವಯವಾಗುವುದಿಲ್ಲ ಹಾಗಾಗಿ ಈ ಇಬ್ಬರೂ ಸುಲಭವಾಗಿ ಬಿಜೆಪಿ ಸೇರುವ ಸಾಧ್ಯತೆ ಇತ್ತು. ಈಗಾಗಲೇ ಒಮ್ಮೆ ಈ ಇಬ್ಬರೂ ಬಿಜೆಪಿ ಸೇರಿದ್ದರು ಸಹ.

ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದರು
ಕೆಲವು ತಿಂಗಳ ಹಿಂದೆ ಬಿಜೆಪಿಯ ಶಾಸಕರು ರೆಸಾರ್ಟ್ ಸೇರಿದ್ದಾಗ ಇಬ್ಬರೂ ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಆದರೆ ಆ ನಂತರ ನಾಗೇಶ್ ಮತ್ತೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರೆ, ಆರ್.ಶಂಕರ್ ಈಗ ನೇರವಾಗಿ ಸಚಿವರಾಗಿದ್ದಾರೆ.

ಅತೃಪ್ತ ಶಾಸಕರಿಗೆ ರಾಜೀನಾಮೆಯ ಭಯ ಇದೆ
ಅತೃಪ್ತ ಶಾಸಕರು ಪಕ್ಷ ಬಿಟ್ಟು ನೇರವಾಗಿ ಬಿಜೆಪಿಗೆ ಬೆಂಬಲ ನೀಡುವಂತಿಲ್ಲ, ಅವರೇನಿದ್ದರು ರಾಜೀನಾಮೆ ನೀಡಿಯೇ ಪಕ್ಷ ತ್ಯಜಿಸಬೇಕು. ಆದರೆ ಅತೃಪ್ತರಲ್ಲಿ ಬಹುತೇಕರು ರಾಜೀನಾಮೆ ನೀಡಿದರೆ ಮತ್ತೆ ಚುನಾವಣೆ ಎದುರಿಸಿ ಗೆದ್ದು ಬರುವ ಛಾತಿ ಇಲ್ಲದವರು, ಹಾಗಾಗಿ ಕಾಂಗ್ರೆಸ್ ಅತೃಪ್ತರನ್ನು ನಿರ್ಲಕ್ಷಿಸಿ ಲೆಕ್ಕಾಚಾರದ ರಿಸ್ಕ್ ತೆಗೆದುಕೊಂಡಿದೆ.

ವ್ಯಕ್ತಿ ಮೊದಲು ಪಕ್ಷ ನಂತರ
ಅತೃಪ್ತರು ಬಂಡಾಯ ಎದ್ದರೆಂದು ಸಚಿವ ಸ್ಥಾನ ನೀಡಿದರೆ ಉಳಿದ ಶಾಸಕರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂಬುದು ಕಾಂಗ್ರೆಸ್ ಹೈಕಮಾಂಡ್ ಯೋಚನೆ ಹಾಗಾಗಿ, ಅವರನ್ನು ನಿರ್ಲಕ್ಷಿಸಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಸಾಬೀತು ಮಾಡಲು ಕೆಪಿಸಿಸಿ ಹೀಗೊಂದು ನಿರ್ಣಯ ತೆಗೆದುಕೊಂಡಿದೆ.

ರಮೇಶ್ ಜಾರಕಿಹೊಳಿ ಬಹಳ ದೂರ ಹೋಗಿದ್ದಾರೆ
ರಮೇಶ್ ಜಾರಕಿಹೊಳಿ ಅವರಂತೂ ಈಗಾಗಲೇ ಕಾಂಗ್ರೆಸ್‌ಗೆ ಮರಳಿ ಬಾರದಷ್ಟು ದೂರ ಹೋಗಿದ್ದಾರೆ ಆದರೆ ಅವರ ಜೊತೆಗಾರರು ಕಾಂಗ್ರೆಸ್‌ನಿಂದ ಅಷ್ಟಾಗಿ ದೂರ ಹೋಗಿಲ್ಲವಾದ್ದರಿಂದ, ಕೆಪಿಸಿಸಿಯು ರಮೇಶ್ ಜಾರಕಿಹೊಳಿ ಅವರ ಆಪ್ತರನ್ನು ಒಲಿಸಿಕೊಳ್ಳುವ ಕಸರತ್ತು ಮುಂದುವರೆಸಿದ್ದು, ಸಂಪುಟ ಪುನರ್ ರಚನೆ ವೇಳೆ ಅವಕಾಶ ನೀಡುವ ಭರವಸೆ ನೀಡಲಾಗಿದೆ.












Click it and Unblock the Notifications