ಮೈತ್ರಿ ಸರ್ಕಾರದ ಅಸಮಾಧಾನ : ಬಿಜೆಪಿಯಿಂದ ಕಾದು ನೋಡುವ ತಂತ್ರ!
Recommended Video

ಬೆಂಗಳೂರು, ಜೂನ್ 27 : ಅಮಿತ್ ಶಾ ಭೇಟಿಯಾದ ಯಡಿಯೂರಪ್ಪ, ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸರಣಿ ಸಭೆ, ಆಪ್ತ ಶಾಸಕರ ಜೊತೆ ರಹಸ್ಯ ಸಭೆ...ಇವು ಕರ್ನಾಟಕ ಬಿಜೆಪಿಯಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು.
ಬಜೆಟ್ ಮಂಡನೆ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿದೆ. ಇತ್ತ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಆದ್ದರಿಂದ, ಕರ್ನಾಟಕದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಡೆಸುತ್ತಿದೆಯೇ? ಎಂಬ ಅನುಮಾನ ಮೂಡಿತ್ತು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
'ರಾಜ್ಯ ರಾಜಕಾರಣದಲ್ಲಿ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಸಿದ್ದರಾಮಯ್ಯ ಒಂದು ಹೇಳುತ್ತಾರೆ. ಕುಮಾರಸ್ವಾಮಿ ಮತ್ತೊಂದು ಹೇಳುತ್ತಾರೆ. ಅವರ ಹೇಳಿಕೆಗಳಲ್ಲಿಯೇ ಗೊಂದಲವಿದೆ. ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದೇನೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ಸರಣಿ ಸಭೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಂಗಳವಾರ ಸರಣಿ ಸಭೆಗಳು ನಡೆದವು. ಸೋಮವಾರ ಯಡಿಯೂರಪ್ಪ ಅಮಿತ್ ಶಾ ಭೇಟಿಯಾದ ಬಳಿಕ ನಡೆದ ಸಭೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಜಗದೀಶ್ ಶೆಟ್ಟರ್, ಆರ್.ಅಶೋಕ, ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವು ನಾಯಕರು ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಲಾಭ ಪಡೆದುಕೊಳ್ಳುವುದಿಲ್ಲ
'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಡೆಸುತ್ತಿಲ್ಲ. ಪಕ್ಷ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ ಸಮಯದಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಯಿತು. ವಿರೋಧ ಪಕ್ಷವಾಗಿ ಕೆಲಸ ಮಾಡಲು ಅವರು ಸೂಚಿಸಿದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.
'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹಲವು ಗೊಂದಲಗಳಿವೆ. ರಾಜ್ಯ ರಾಜಕೀಯದ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಪಕ್ಷದ ರಾಜ್ಯ ನಾಯಕರಿಗೆ ಸೂಚಿಸಿದ್ದೇನೆ' ಎಂದು ಯಡಿಯೂರಪ್ಪ ತಿಳಿಸಿದರು.

ಅಮಿತ್ ಶಾ ಭೇಟಿ ಮಾಡಿದ್ದೇಕೆ?
'ಅಹಮದಬಾದ್‌ನಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಜೂನ್ 29ರಂದು ನಡೆಯಲಿರುವ ರಾಜ್ಯ ಕಾರ್ಯಕಾರಣಿ ಸಭೆಗೆ ಆಹ್ವಾನ ನೀಡಿದ್ದೇನೆ. ಕಾರ್ಯಕಾರಣಿ ಸಭೆಯಲ್ಲಿ 2019ರ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ' ಎಂದು ಯಡಿಯೂರಪ್ಪ ಹೇಳಿದರು.
'ಕಾರ್ಯಕಾರಣಿ ಸಭೆಯಲ್ಲಿ ಕರ್ನಾಟಕದ ರಾಜಕೀಯದ ಬಗ್ಗೆ ಚರ್ಚೆ ನಡೆಯಬಹುದು. ಅಲ್ಲಿಯ ತನಕ ನಾವು ಕಾದು ನೋಡುವ ತಂತ್ರವನ್ನು ಅನುಸರಿಸುತ್ತೇವೆ' ಎಂದು ಯಡಿಯೂರಪ್ಪ ತಿಳಿಸಿದರು.

ಬಜೆಟ್ ಮಂಡನೆ ವಿವಾದ
'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪರಿಪೂರ್ಣ ಬಜೆಟ್ ಮಂಡನೆ ಮಾಡಬೇಕೆ? ಎಂಬ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ' ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications